ಬೆಂಗಳೂರು,ಜ.6-ಮೂರನೆ ಅಲೆ ಭೀತಿ ಆರಂಭವಾಗಿರುವ ಬೆನ್ನಲ್ಲೆ ಮತ್ತೆ ಜನ ಬೆಂಗಳೂರು ತೊರೆಯಲು ಮುಂದಾಗುತ್ತಿರುವ ಪ್ರಕರಣಗಳು ಕಂಡು ಬರುತ್ತಿವೆ. ಎರಡನೆ ಅಲೆ ಸಂದರ್ಭದಲ್ಲೂ ಸಾವಿರಾರು ಮಂದಿ ಗಂಟುಮೂಟೆ ಕಟ್ಟಿಕೊಂಡು ಬೆಂಗಳೂರು ತೊರೆದು ತಮ್ಮ ಹುಟ್ಟೂರುಗಳತ್ತ ಮುಖ ಮಾಡಿದ್ದರು.
ಇದೀಗ ನಗರದಲ್ಲಿ ಮತ್ತೆ ವಿಕೇಂಡ್ ಕಫ್ರ್ಯೂ ಜಾರಿ ಮಾಡಲಾಗಿದೆ. ಶುಕ್ರವಾರ ರಾತ್ರಿಯಿಂದ ಸೋಮವಾರ ಮುಂಜಾನೆವರೆಗೂ ಜನಸಂಚಾರ ಮಾಡಂಗಿಲ್ಲ. ಕೂಲಿ ನಾಲಿ ಜೀವನ ಸಾಗಿಸುತ್ತಿರುವ ಬಹುತೇಕ ಮಂದಿ ಇಂತಹ ಸನ್ನಿವೇಶದಲ್ಲಿ ಬದುಕು ನಡೆಸುವುದು ದುಸ್ತರವೇ ಸರಿ. ಹೀಗಾಗಿ ಬದುಕಿದ್ರೆ ಹೇಗಾದ್ರೂ ಜೀವನ ಮಾಡಬಹುದು ಎಂಬ ಉದ್ದೇಶದಿಂದ ಬಹುಪಾಲು ಮಂದಿ ಹಳ್ಳಿಗಳಿಗೆ ವಾಪಾಸ್ಸಾಗುತ್ತಿದ್ದಾರೆ.
ಮುಂದಿನ ದಿನಗಳಲ್ಲಿ ಕೊರೊನಾ ಸೋಂಕು ಉಲ್ಬಣಗೊಂಡು ಲಾಕ್‍ಡೌನ್ ಮಾಡಿದರೆ ಆಗ ಪರದಾಡುವ ಬದಲು ಈಗಲೆ ಊರು ಸೇರಿಕೊಂಡು ಜೀವನ ನಡೆಸೋಣ ಎಂಬ ತೀರ್ಮಾನಕ್ಕೆ ಬಂದಿರುವ ಬಹುತೇಕ ಮಂದಿ ಊರುಗಳತ್ತ ತೆರಳುತ್ತಿರುವುದರಿಂದ ನಗರದ ಹೊರ ವಲಯಗಳಲ್ಲಿರುವ ಟೋಲ್‍ಗಳಲ್ಲಿ ವಾಹನಗಳು ಸಾಲುಗಟ್ಟಿ ನಿಂತಿರುವ ದೃಶ್ಯಗಳು ಕಂಡು ಬರುತ್ತಿವೆ.
ಅದರಲ್ಲೂ ಮೂರನೆ ಅಲೆ ಮಕ್ಕಳ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆಗಳಿವೆ ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ. ಇಂತಹ ಸನ್ನಿವೇಶದಲ್ಲೇ ಸರ್ಕಾರ ಶಾಲಾ-ಕಾಲೇಜುಗಳಿಗೆ 15 ದಿನ ರಜೆ ನೀಡಿರುವುದರಿಂದ ಮಕ್ಕಳು-ಮರಿಗಳೊಂದಿಗೆ ಬೆಂಗಳುರು ಬೀಡುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಲೆ ಇದೆ.
ಸಾರ್ ನಾವು ಎರಡು ಡೋಸ್ ಲಸಿಕೆ ಹಾಕಿಸಿಕೊಂಡಿದ್ದೇವೆ. ಆದರೆ, ನಮ್ಮ ಮಕ್ಕಳಿಗೆ ಇನ್ನು ಸಣ್ಣ ವಯಸ್ಸು, ನಮಗೆ ಮಕ್ಕಳಿಗಿಂತ ಯಾವುದು ದೊಡ್ಡದಿಲ್ಲ. ಬದುಕಿದ್ದರೆ ಕೂಲಿ-ನಾಲಿ ನಮ್ಮ ಮಕ್ಕಳನ್ನು ಸಾಕುತ್ತೇವೆ. ಮುಂದೆ ಎಲ್ಲ ಸರಿ ಹೋದರೆ, ಮತ್ತೆ ಬೆಂಗಳೂರಿಗೆ ಬರುತ್ತೇವೆ. ಇಲ್ಲದಿದ್ದರೆ ಭೂಮ್ತಾಯಿ ನಮ್ಮ ಕೈಬಿಡಲ್ಲ ಎಂಬ ನಂಬಿಕೆ ಇದೆ ಎನ್ನುತ್ತಾರೆ ಬೆಂಗಳೂರಿನಿಂದ ಕುಣಿಗಲ್‍ಗೆ ವಾಪಾಸ್ಸಾಗುತ್ತಿರುವ ಗಂಗಯ್ಯ ಎಂಬುವರು.
ಸರ್ಕಾರದ ಮಾತು ನಂಬುವ ಹಾಗಿಲ್ಲ. ಈಗ ಸೇಮಿ ಲಾಕ್‍ಡೌನ್ ಅಂತಾರೆ ಮುಂದೆ ಫುಲ್ ಲಾಕ್‍ಡೌನ್ ಮಾಡಿದರೆ ನಮಗೆ ಮಾಡೋಕೆ ಕೆಲಸ ಕಾರ್ಯ ಇರಲ್ಲ ಈಗ್ಲೇ ಊರು ಸೇರಿಕೊಳ್ಳೋದು ಉತ್ತಮ ಎನ್ನುವುದು ಅವರ ಅಭಿಪ್ರಾಯವಾಗಿದೆ.
