ಬೆಂಗಳೂರು,ಜ.17- ರಾಜ್ಯದಲ್ಲಿ ಅಂಕೆ ಮೀರುತ್ತಿರುವ ಕೊರೊನಾ ಕಟ್ಟಿ ಹಾಕಲು ವೀಕೆಂಡ್ ಕಫ್ರ್ಯೂ ಮತ್ತು ನೈಟ್ ಕಫ್ರ್ಯೂವನ್ನು ಮುಂದುವರೆಸುವುದು ಸೇರಿದಂತೆ ಇನ್ನು ಹಲವು ಕಠಿಣ ಕ್ರಮಗಳನ್ನು ಕೈಗೊಳ್ಳುವುದು ಸೂಕ್ತ ಎಂದು ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಅಭಿಪ್ರಾಯಪಟ್ಟಿದೆ.
ತಾಂತ್ರಿಕ ಸಲಹಾ ಸಮಿತಿ ಮುಖ್ಯಸ್ಥ ಡಾ.ಎಂ.ಕೆ.ಸುದರ್ಶನ್ ನೇತೃತ್ವದಲ್ಲಿ ಸುಮಾರು 2 ಗಂಟೆಗಳಿಗೂ ಹೆಚ್ಚು ಕಾಲ ನಡೆದ ವಚ್ರ್ಯುವಲ್ ಸಭೆಯಲ್ಲಿ
ಕೊರೊನಾ ನಿಯಂತ್ರಣ ಸಂಬಂಧ ವೀಕೆಂಡ್ ಕಫ್ರ್ಯೂ, ನೈಟ್ ಕಫ್ರ್ಯೂ ಮುಂದುವರೆಸುವುದೇ ಸೂಕ್ತ . ಈಗಾಗಲೇ ಸೂಚಿಸಿರುವ ಮಾರ್ಗಸೂಚಿ ಅನ್ವಯ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕೆಂಬ ಅಭಿಪ್ರಾಯ ವ್ಯಕ್ತವಾಗಿದೆ.
ಜನನಿಬಿಡ ಪ್ರದೇಶಗಳಲ್ಲಿ ಕಠಿಣ ಕ್ರಮ ತೆಗೆದುಕೊಳ್ಳುವುದು, ಬೆಂಗಳೂರು ನಗರ ಅಷ್ಟೇ ಅಲ್ಲದೆ ಜಿಲ್ಲೆಗಳಲ್ಲೂ ಸೋಂಕು ವ್ಯಾಪಕವಾಗಿ ಹರಡುತ್ತಿದ್ದು, ಅಗತ್ಯ ಮುನ್ನೆಚ್ಚರಿಕೆ ಕ್ರಮಕ್ಕೆ ಮುಂದಾಗಬೇಕೆಂದು ತಾಂತ್ರಿಕ ಸಲಹಾ ಸಮಿತಿ ಸಭೆಯಲ್ಲಿ ಗಂಭೀರ ಚರ್ಚೆ ನಡೆದಿದೆ.
ನಗರ ಪ್ರದೇಶಗಳಷ್ಟೇ ಅಲ್ಲದೆ ಗ್ರಾಮೀಣ ಪ್ರದೇಶಗಳಿಗೂ ಸೋಂಕು ವ್ಯಾಪಿಸುತ್ತಿದೆ. ಕ್ಲಸ್ಟರ್, ಕಂಟೈನ್ಮೆಂಟ್ ಜೋನ್‍ಗಳನ್ನು ಮಾಡಿ ನಿಯಂತ್ರಣಕ್ಕೆ ಮುಂದಾಗಬೇಕು. ಐಟಿ ಕಂಪನಿಗಳಿಗೆ ವರ್ಕ್ ಫ್ರಂ ಹೋಂ ಮುಂದುವರೆಸುವುದು, ಬೆಂಗಳೂರಿನಲ್ಲಿ ಮಾರುಕಟ್ಟೆಗಳ ವಿಕೇಂದ್ರೀಕರಣ ವ್ಯವಸ್ಥೆಗಳನ್ನು ಕೂಡಲೇ ಮಾಡಬೇಕು.
ಸಾಧ್ಯವಾದರೆ ಸರ್ಕಾರಿ ನೌಕರರಿಗೂ ಕೂಡ ವರ್ಕ್ ಫ್ರಂ ಹೋಂ ಆದೇಶಿಸಿ ಹಬ್ಬ , ಜಾತ್ರೆ, ಜನದಟ್ಟಣೆ ತಪ್ಪಿಸಿ ಬಸ್‍ಗಳಲ್ಲಿ ಶೇ.50ರಿಂದ 70 ರಷ್ಟು ಆಸನಗಳನ್ನು ಮೀಸಲಿರಿಸಲು ಸಾಧ್ಯವೇ ಎಂಬುದರ ಬಗ್ಗೆ ಕೂಡ ಚರ್ಚೆಯಾಗಿದೆ.
ಇಂದಿನ ಸಭೆಯಲ್ಲಿ ಚರ್ಚೆಯಾದ ವಿಷಯಗಳ ವರದಿ ತಯಾರಿಸಿ ಮುಖ್ಯಮಂತ್ರಿಗಳಿಗೆ ಕಳುಹಿಸಿಕೊಡಲು ತಾಂತ್ರಿಕ ಸಲಹಾ ಸಮಿತಿ ನಿರ್ಧರಿಸಿದೆ.
