ಬೆಂಗಳೂರನ ವೈಟ್‌ಫೀಲ್ಡ್‌ ಸುತ್ತ 8 ಕಿ.ಮೀ ವ್ಯಾಪ್ತಿಯಲ್ಲಿ ಕೊರೋನ ಹೈಅಲರ್ಟ್..!

ಬೆಂಗಳೂರು,ಮಾ.10- ಮಹಾಮಾರಿ ಕೊರೋನ ವೈರಸ್ ಸೋಂಕು ಬೆಂಗಳೂರಿನಲ್ಲಿ ಪತ್ತೆಯಾದ ಕಾರಣ ಸೋಂಕಿತ ವ್ಯಕ್ತಿ ವಾಸವಾಗಿದ್ದ ವೈಟ್‍ಫೀಲ್ಡ್‍ನ 8 ಕಿ.ಮೀ ವ್ಯಾಪ್ತಿಯಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ. ಸೋಂಕಿತ ತಂಗಿದ್ದ ಮೂರು ಕಿ.ಮೀ ಪ್ರದೇಶವನ್ನು ಸೂಕ್ಷ್ಮ ಪ್ರದೇಶವೆಂದು ಘೋಷಣೆ ಮಾಡಲಾಗಿದ್ದು, ರೋಗ ಹರಡದಂತೆ ತಡೆಗಟ್ಟಲು ಎಲ್ಲ ಸಿದ್ದತೆಗಳನ್ನು ಮಾಡಿಕೊಳ್ಳಲಾಗಿದೆ.

ಈ ಸೋಂಕು ತಗುಲಿದ ವ್ಯಕ್ತಿಯಿಂದ ಮತ್ತೊಬ್ಬರಿಗೆ ಗಾಳಿ ಮೂಲಕ ಸೋಂಕಬಹುದು ಎಂಬ ಮುನ್ನೆಚ್ಚರಿಕೆ ಕ್ರಮವಾಗಿ ಆತ ವಾಸವಿದ್ದ 8 ಕಿ.ಮೀ ವ್ಯಾಪ್ತಿಯಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ.  ವ್ಯಕ್ತಿ ವಾಸವಿದ್ದ ಸ್ಥಳದಲ್ಲಿ ಮೂರು ಕಿ.ಮೀ ಪ್ರದೇಶವನ್ನು ಸೂಕ್ಷ್ಮ ಪ್ರದೇಶ ಎಂದು ಹಾಗೂ 5 ಕಿ.ಮೀ ಪ್ರದೇಶದಲ್ಲಿ ಜನರಿಗೆ ಅರಿವು ಮೂಡಿಸುವ ಕಾರ್ಯಕ್ರಮವನ್ನು ಬಿಬಿಎಂಪಿ ಹಮ್ಮಿಕೊಂಡಿದೆ.

ಮೂಲಗಳ ಪ್ರಕಾರ ಸೋಂಕು ತಗುಲಿದ ನಂತರ ಈ ವ್ಯಕ್ತಿಯು ತಮ್ಮ ಮನೆಯಲ್ಲಿ ಹಲವು ದಿನಗಳ ಕಾಲ ಉಳಿದುಕೊಂಡಿದ್ದ ಕಾರಣ ಯಾರಿಗಾದರೂ ತಗುಲಿರಬಹುದೆಂಬ ಶಂಕೆಯ ಹಿನ್ನೆಲೆಯಲ್ಲಿ ಅಲ್ಲಿ ವಾಸವಿರುವ ಎಲ್ಲರನ್ನೂ ತಪಾಸಣೆಗೊಳಪಡಿಸಲು ತೀರ್ಮಾನಿಸಲಾಗಿದೆ.  ಈಗಾಗಲೇ ಬೆಳಗಿನಿಂದಲೇ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಬಿಬಿಎಂಪಿ ಸಹಯೋಗದೊಂದಿಗೆ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಕಾರ್ಯಕ್ರಮ ನಡೆಸುತ್ತಿದ್ದಾರೆ.

ಮುಂದುವರೆದ ಚಿಕಿತ್ಸೆ:
ಇನ್ನು ಅಮೆರಿಕದಿಂದ ಹಿಂತಿರುಗಿ ಕೊರೋನ ವೈರಸ್ ತಗುಲಿದ ಕಾರಣ ಬೆಂಗಳೂರಿನ ರಾಜೀವ್‍ಗಾಂಧಿ ವಿಜ್ಞಾನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಟೆಕ್ಕಿ ಆರೋಗ್ಯ ಸ್ಥಿತಿ ಸುಧಾರಣೆಯಾಗುತ್ತಿದೆ. ಆಸ್ಪತ್ರೆಯಲ್ಲಿ ಟೆಕ್ಕಿ , ಆತನ ಪತ್ನಿ ಹಾಗೂ ಮಗುವಿಗೆ ಪ್ರತ್ಯೇಕ ವಾರ್ಡ್‍ನಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದೆ ಎಂದು ಹೇಳಲಾಗುತ್ತಿದೆ. ನುರಿತ ವೈದ್ಯರ ತಂಡವೊಂದು ಆಸ್ಪತ್ರೆಯಲ್ಲಿ ಬೀಡುಬಿಟ್ಟಿದ್ದು, ಆರೋಗ್ಯದ ಮೇಲೆ ತೀವ್ರ ನಿಗಾ ವಹಿಸಿದ್ದಾರೆ.