ನವದೆಹಲಿ, ಆ.1- ಕೋವಿಡ್ ಬಳಿಕ ಮಂಕಿಫಾಕ್ಸ್ ಸೋಂಕು ಹರಡುವಿಕೆಯನ್ನು ವಿಶ್ವ ಆರೋಗ್ಯ ಸಂಸ್ಥೆ ಜಾಗತಿಕ ಆರೋಗ್ಯ ತುರ್ತು ಪರಿಸ್ಥಿತಿ ಎಂದು ಘೋಷಿಸಿದ್ದು, ರೋಗ ಹರಡುವಿಕೆ ಮೇಲೆ ತೀವ್ರ ನಿಗಾ ವಹಿಸಿದೆ. ವಿಶ್ವದ ಸುಮಾರು 75 ರಾಷ್ಟ್ರಗಳಲ್ಲಿ 16 ಸಾವಿರಕ್ಕೂ ಹೆಚ್ಚು ಮಂದಿ ಮಂಕಿ ಫಾಕ್ಸ್ ಸೋಂಕಿಗೆ ಸಿಲುಕಿದ್ದಾರೆ. ಹೀಗಾಗಿ ಇತ್ತೀಚೆಗೆ ಸಭೆ ನಡೆಸಿದ ವಿಶ್ವ ಆರೋಗ್ಯ ಸಂಸ್ಥೆ ಜಾಗತಿಕ ತುರ್ತು ಪರಿಸ್ಥಿತಿಯನ್ನು ಘೋಷಣೆ ಮಾಡಿದೆ.
ಈ ಹಿಂದೆ ಎಬೋಲಾ, ಹೆಚ್-1ಎನ್-1, ಜೈಕಾ, ಕೋವಿಡ್-19 ಸೇರಿದಂತೆ 7ಕ್ಕೂ ಹೆಚ್ಚು ಸಂದರ್ಭಗಳಲ್ಲಿ ತುರ್ತು ಆರೋಗ್ಯ ಪರಿಸ್ಥಿತಿಯನ್ನು ಘೋಷಿಸಲಾಗಿತ್ತು. ಕೋವಿಡ್ ಸೋಂಕಿನ ಸಂದರ್ಭದಲ್ಲಂತೂ ವ್ಯವಸ್ಥಿತವಾಗಿ ನಿರ್ವಹಣಾ ಸಂಪ್ರದಾಯವನ್ನು ಪಾಲಿಸಲಾಗಿತ್ತು. ಪ್ರತಿ ಸೋಂಕಿನ ಮಾಹಿತಿಯನ್ನು ಗ್ರಾಮ ಪಂಚಾಯಿತಿ ಮಟ್ಟದಿಂದ ವಿಶ್ವಸಂಸ್ಥೆವರೆಗೂ ಬಹಿರಂಗಪಡಿಸಿ ಚಿಕಿತ್ಸೆ, ಸಾವು, ಗುಣಮುಖರಾದವರ ದತ್ತಾಂಶಗಳನ್ನು ಕರಾರುವಾಕ್ಕಾಗಿ ಕಲೆ ಹಾಕಲಾಯಿತು.
ಸಂಘಟಿತ ಪ್ರಯತ್ನದಿಂದಾಗಿ ಕೋವಿಡ್-19 ನಿಯಂತ್ರಣಗೊಂಡಿದೆ. ಈಗ ಮಂಕಿಫಾಕ್ಸ್ ಸವಾಲು ಎದುರಾಗಿದ್ದು, ಆತಂಕ ಮೂಡಿಸಿದೆ.
ಆಫ್ರಿಕಾ ದೇಶದಲ್ಲೇ 1400 ಪ್ರಕರಣಗಳಿದ್ದು, 77 ಮಂದಿ ಸಾವನ್ನಪ್ಪಿದ್ದಾರೆ. ಅಮೆರಿಕದಲ್ಲಿ ಅತಿ ಹೆಚ್ಚು ಪ್ರಕರಣಗಳು ವರದಿಯಾಗಿವೆ. ನ್ಯೂಯಾರ್ಕ್ ಸಿಟಿ ಕೂಡ ತುರ್ತು ಆರೋಗ್ಯ ಪರಿಸ್ಥಿತಿಯನ್ನು ಘೋಷಣೆ ಮಾಡಿತ್ತು.
59 ದೇಶಗಳಲ್ಲಿ 3500 ಮಂದಿ ವೈಯಕ್ತಿಕವಾಗಿ ರೋಗ ನಿಯಂತ್ರಣದಲ್ಲಿ ಸಹಜತೆ ಕಾಯ್ದುಕೊಂಡಿದ್ದಾರೆ. ಈ ಸೋಂಕಿಗೆ ಲಸಿಕೆ ಹಾಗೂ ಚಿಕಿತ್ಸೆ ಇದೆಯಾದರೂ ವ್ಯಾಪಕ ಹರಡುವಿಕೆಯಿಂದ ಆತಂಕ ಮೂಡಿಸುತ್ತಿದೆ.
ಜ್ವರ, ಮೈ-ಕೈ ನೋವು, ಚರ್ಮದಲ್ಲಿ ಬೊಬ್ಬೆಗಳಾಗುವುದು ಸೇರಿದಂತೆ ಹಲವು ರೋಗ ಲಕ್ಷಣಗಳನ್ನು ಮಂಕಿಫಾಕ್ಸ್ ಹೊಂದಿದೆ.
ಹೀಗಾಗಿ ಇನ್ನು ಮುಂದೆ ವಿಶ್ವಸಂಸ್ಥೆಯ ನಿಗಾವಣೆಯಲ್ಲಿ ಪ್ರತಿಯೊಂದು ದೇಶವೂ ಮಂಕಿಫಾಕ್ಸ್‍ನ ಹರಡುವಿಕೆ ಮತ್ತು ಚಿಕಿತ್ಸೆ ಕುರಿತು ದೈನಂದಿನ ಮಾಹಿತಿಗಳನ್ನು ಕಲೆ ಹಾಕಲಾಗುತ್ತಿದೆ. ಮತ್ತೊಮ್ಮೆ ಸಂಘಟನಾತ್ಮಕ ಜಾಗತಿಕ ಹೋರಾಟಕ್ಕೆ ಕ್ರಮಗಳು ಘೋಷಣೆಯಾಗಿವೆ.