ಬೆಂಗಳೂರು,ಫೆ.16- ಬೊಮ್ಮನಹಳ್ಳಿ ಕ್ಷೇತ್ರದ ಶಾಸಕ ಸತೀಶ್ ರೆಡ್ಡಿ ಅವರ ಹತ್ಯೆಗೆ 2 ಕೋಟಿ ಸುಪಾರಿ ನೀಡಿರುವ ವ್ಯಕ್ತಿ ಯಾರೂ ಎಂಬುದು ಸದ್ಯಕ್ಕೆ ಬೊಮ್ಮನಹಳ್ಳಿ ಠಾಣೆ ಪೊಲೀಸರಿಗೆ ತಿಳಿದು ಬಂದಿಲ್ಲ. ಈ ಪ್ರಕರಣದಲ್ಲಿ ಸದ್ಯಕ್ಕೆ ಲಭ್ಯವಿರುವ ಮಾಹಿತಿಗಳು ಅಸ್ಪಷ್ಟ ಹಾಗೂ ಗೊಂದಲದಿಂದ ಕೂಡಿರುವುದರಿಂದ ಪೊಲೀಸರಿಗೆ ಇನ್ನೂ ನಿಖರತೆ ಸಿಕ್ಕಿಲ್ಲ.
ಆಡಿಯೋ ಸಂಭಾ ಷಣೆ ಆಧಾರದ ಮೇಲೆ ಚಿತ್ರದುರ್ಗದ ಹೊಳಲ್ಕೆರೆಯ ಗಿರೀಶ ಮತ್ತು ಅಪ್ರಾಪ್ತ ಬಾಲಕನನ್ನು ಬೊಮ್ಮನಹಳ್ಳಿ ಠಾಣೆ ಪೊಲೀಸರು ವಶಕ್ಕೆ ತೆಗೆದುಕೊಂಡು ವಿಚಾರಣೆ ಮಾಡುತ್ತಿದ್ದರೂ ಆರೋಪಿಗಳು ಸುಪಾರಿ ನೀಡಿದವರು ಯಾರು ಎಂಬ ಬಗ್ಗೆ ನಿಖರ ಮಾಹಿತಿ ನೀಡಿಲ್ಲ. ಗಿರೀಶ್ ಕೊಲೆ ಪ್ರಕರಣವೊಂದರಲ್ಲಿ ಆರೋಪಿ. ಈತನನ್ನು ತೀವ್ರ ವಿಚಾರಣೆಗೆ ಒಳಪಡಿಸಲಾಗಿದೆ.
ಇವರಿಬ್ಬರು ಗೊಂದಲದ ಹೇಳಿಕೆ ನೀಡುತ್ತಿರುವುದರಿಂದ ಪೊಲೀಸರು ಅವರಿಬ್ಬರನ್ನು ರಹಸ್ಯ ಸ್ಥಳದಲ್ಲಿಟ್ಟು ವಿಚಾರಣೆಗೊಳಪಡಿಸಿ ಮಾಹಿತಿಗಳನ್ನು ಕಲೆಹಾಕುತ್ತಿ ದ್ದಾರೆ.
ಸತೀಶ್ ರೆಡ್ಡಿ ಅವರ ಹತ್ಯೆಗೆ ರೌಡಿ ನಾಗ ಅಲಿಯಾಸ್ ವಿಲ್ಸನ್ ಗಾರ್ಡನ್ ನಾಗ ಸುಪಾರಿ ಪಡೆದಿದ್ದಾನೆಂದು ತಿಳಿದು ಬಂದಿದೆ. ಆದರೆ ಈಗ ಆತ ತಲೆಮರೆಸಿಕೊಂಡಿದ್ದು, ನಾಗ ಸಿಕ್ಕಿದ ನಂತರವೇ ಸುಪಾರಿ ಬಗ್ಗೆ ಸತ್ಯಾಂಶ ಗೊತ್ತಾಗಲಿದೆ.
ನಿಜವಾಗಲೂ ಸತೀಶ್ ರೆಡ್ಡಿ ಅವರ ಹತ್ಯೆಗೆ ಸಂಚು ನಡೆದಿತ್ತೇ ಸುಪಾರಿ ಕೊಟ್ಟವರ್ಯಾರು, ತೆಗೆದುಕೊಂಡವರ್ಯಾರು, ಅವರ ಉದ್ದೇಶವಾದರೂ ಏನು ಎಂಬಿತ್ಯಾದಿ ಅಂಶಗಳು ಸೇರಿದಂತೆ ಇನ್ನಷ್ಟು ಮಾಹಿತಿಗಳು ಹೊರ ಬರಲಿವೆ. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ರುವ ಬೊಮ್ಮನ ಹಳ್ಳಿ ಠಾಣೆ ಪೊಲೀಸರು ತನಿಖೆಯನ್ನು ಮತ್ತಷ್ಟು ಚುರುಕುಗೊಳಿಸಿ ದ್ದಾರೆ.
#MLA, #SatishReddy, #Murder,