ನವದೆಹಲಿ, ಜು.29- ಮಹಾತ್ಮ ಗಾಂಧಿಜೀ ಹುಟ್ಟಿದ ನಾಡಿನಲ್ಲಿ ನಕಲಿ ಮದ್ಯ ಸೇವಿಸಿ 40ಕ್ಕೂ ಹೆಚ್ಚು ಜನ ಮೃತಪಟ್ಟು ಹಲವರು ಆಸ್ಪತ್ರೆಗೆ ದಾಖಲಾಗಿರುವ ಪ್ರಕರಣಕ್ಕೆ ಸಂಬಂಧಪಟ್ಟಂತೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ, ಮಾದಕ ವಸ್ತು ಹಾಗೂ ನಕಲಿ ಮದ್ಯ ವಹಿವಾಟಿಗೆ ರಕ್ಷಣೆ ನೀಡುತ್ತಿರುವ ಶಕ್ತಿ ಯಾವುದು ಎಂದು ಪ್ರಶ್ನಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಮದ್ಯಪಾನ ನಿಷೇಧ ಇರುವ ಗುಜರಾತ್ ನಾಡಿನಲ್ಲಿ ನಕಲಿ ಮದ್ಯ ಸೇವಿಸಿ ಹಲವು ಮನೆಗಳು ನಾಶವಾಗಿವೆ. ನಿರಂತರವಾಗಿ ಸಾವಿರಾರು ಕೋಟಿ ರೂಪಾಯಿ ಮೊತ್ತದ ಮಾದಕ ವಸ್ತುಗಳನ್ನು ವಶ ಪಡಿಸಿಕೊಳ್ಳಲಾಗುತ್ತಿದೆ. ಇದು ನಿಜಕ್ಕೂ ದೊಡ್ಡ ಆತಂಕಕಾರಿ ಎಂದಿದ್ದಾರೆ.
ಬಾಪು ಮತ್ತು ಸರ್ದಾರ್ ಪಟೇಲ್ ಅವರು ಹುಟ್ಟಿನ ನಾಡಿನಲ್ಲಿ ವ್ಯವಸ್ಥಿತವಾಗಿ ಮಾದಕ ವಸ್ತುಗಳ ವ್ಯವಹಾರ ನಡೆಸುತ್ತಿರುವ ಜನ ಇವರ್ಯಾರು ಎಂದು ರಾಹುಲ್ ಗಾಂಧಿ ಪ್ರಶ್ನಿಸಿದ್ದಾರೆ.
ಯಾವ ಆಡಳಿತ ಶಕ್ತಿ ಮಾದಕ ವಸ್ತುಗಳ ಈ ಮಾಫಿಯಾಗೆ ರಕ್ಷಣೆ ನೀಡುತ್ತಿದೆ ಎಂದು ಪ್ರಶ್ನಿಸುವ ಮೂಲಕ ರಾಹುಲ್ಗಾಂ ಗುಜರಾತ್ ರಾಜ್ಯದ ಮಾದಕ ವಸ್ತು ಹಗರಣಗಳನ್ನು ಕೆಣಕಿದ್ದಾರೆ.