ಬೆಂಗಳೂರು, ಫೆ.22-ಪತ್ನಿ ಮತ್ತು ಅತ್ತೆಯನ್ನು ಮಚ್ಚಿನಿಂದ ಕೊಚ್ಚಿ ಭೀಕರವಾಗಿ ಕೊಲೆ ಮಾಡಿರುವ ಘಟನೆ ಗೋವಿಂದರಾಜನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಇಂದು ಬೆಳಗ್ಗೆ ನಡೆದಿದೆ. ಮೂಡಲಪಾಳ್ಯದ ಸಂಜೀವಿನಿ ನಗರದ ಸುನಿತಾ (38) ಮತ್ತು ಎನ್‍ಆರ್ ಕಾಲೋನಿಯ ಸರೋಜಮ್ಮ (65) ಕೊಲೆಯಾದವರು.
ಮೂಡಲಪಾಳ್ಯ ನಿವಾಸಿ ರವಿಕುಮಾರ್‍ಮೂಲತಃ ತೀರ್ಥಹಳ್ಳಿಯವರಾಗಿದ್ದು, 18 ವರ್ಷದ ಹಿಂದೆ ಸುನಿತಾ ಅವರನ್ನು ಮದುವೆಯಾಗಿದ್ದು, ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಸುನಿತಾ ಗೃಹಿಣಿಯಾಗಿದ್ದರು. ರವಿಕುಮಾರ್ ಈ ಹಿಂದೆ ಬೇಕರಿ ಇಟ್ಟುಕೊಂಡಿದ್ದು, ಇತ್ತೀಚೆಗೆ ಮುಚ್ಚಿದ್ದರು. ಎನ್‍ಆರ್ ಕಾಲೋನಿಯಲ್ಲಿ ವಾಸವಾಗಿದ್ದ ಸುನಿತಾ ಅವರ ತಾಯಿ ಸರೋಜಮ್ಮ ಇಂದು ಬೆಳಗ್ಗೆ ಮಗಳ ಮನೆಗೆ ಬಂದಿದ್ದಾರೆ.
ಇಬ್ಬರು ಮಕ್ಕಳನ್ನು ಕರೆದುಕೊಂಡು ರವಿಕುಮಾರ್ ಇಂದು ಬೆಳಗ್ಗೆ ಶಾಲೆಗೆ ಬಿಟ್ಟು ಮನೆಗೆ ಬಂದಿದ್ದಾರೆ. ಬೆಳಗ್ಗೆ 10.30ರ ಸುಮಾರಿನಲ್ಲಿ ದಂಪತಿ ನಡುವೆ ಮನೆಯಲ್ಲಿ ಜಗಳ ನಡೆದಿದೆ. ಮಾತಿಗೆ ಮಾತು ಬೆಳೆದು ಜಗಳ ವಿಕೋಪಕ್ಕೆ ತಿರುಗಿದಾಗ ರವಿಕುಮಾರ್ ಕೈಗೆ ಸಿಕ್ಕಿದ ಎಳನೀರು ಕೆಚ್ಚುವ ಮಚ್ಚಿನಿಂದ ಪತ್ನಿ ಮೇಲೆ ಹಲ್ಲೆ ಮಾಡಿದ್ದಾನೆ. ಜಗಳ ಬಿಡಿಸಲು ಮಧ್ಯೆ ಬಂದ ಅತ್ತೆ ಸರೋಜಮ್ಮ ಮೇಲೂ ಮಚ್ಚಿನಿಂದ ಹೊಡೆದು ಇಬ್ಬರನ್ನೂ ಕೊಲೆ ಮಾಡಿದ್ದಾನೆ.
ಇವರ ಮನೆಯಲ್ಲಿ ಕೂಗಾಟ, ಕಿರುಚಾಟ ಕೇಳಿ ನೆರೆಹೊರೆಯವರು ಮನೆ ಬಳಿ ಬಂದು ನೋಡಿದಾಗ ರಕ್ತದ ಮಡುವಿನಲ್ಲಿ ಇಬ್ಬರೂ ಬಿದ್ದಿರುವುದು ಕಂಡು ತಕ್ಷಣ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಸ್ಥಳಕ್ಕಾಗಮಿಸಿದ ಪೊಲೀಸರು ಆರೋಪಿ ರವಿಕುಮಾರ್ (48)ನನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದ್ದಾರೆ.
ಪತ್ನಿಯ ನಡತೆ ಬಗ್ಗೆ ಅನುಮಾನವಿತ್ತು. ಆ ವಿಚಾರವಾಗಿ ಜಗಳ ನಡೆದಾಗ ಒಂದು ಹಂತದಲ್ಲಿ ಕೊಲೆ ಮಾಡಿದ್ದಾಗಿ ಆರೋಪಿಯು ವಿಚಾರಣೆ ವೇಳೆ ಪೊಲೀಸರಿಗೆ ತಿಳಿಸಿದ್ದಾನೆ. ಈ ಬಗ್ಗೆ ಗೋವಿಂದರಾಜನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ. ಸ್ಥಳಕ್ಕೆ ಡಿಸಿಪಿ ಸಂಜೀವ್ ಎಂ.ಪಾಟೀಲ್, ಎಸಿಪಿ ನಂಜುಂಡೇಗೌಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
