ಪತ್ನಿ-ಮಗಳ ಮೇಲೆ ಬಿಸಿ ಎಣ್ಣೆ ಎರಚಿದ್ದ ಆರೋಪಿ ಸೆರೆ

Social Share

ಬೆಂಗಳೂರು, ಫೆ.3- ಪತ್ನಿ-ಮಗಳ ಮೇಲೆ ಬಿಸಿ ಎಣ್ಣೆ ಸುರಿದು ಪರಾರಿಯಾಗಿದ್ದ ಆರೋಪಿಯನ್ನು ಆಡುಗೋಡಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಎಲ್‍ಆರ್ ನಗರದ ನಿವಾಸಿ ಥಾಮಸ್(46) ಬಂಧಿತ ಆರೋಪಿ. ಈತನ ಪತ್ನಿ ಮನೆ ಕೆಲಸ ಮಾಡಿ, ಕಟುಂಬ ನಿರ್ವಹಿಸುತ್ತಾರೆ. ಕುಡಿತದ ಚಟ ಹೊಂದಿದ್ದ ಆರೋಪಿ ವಿನಾ ಕಾರಣ ಪತ್ನಿ ಮಗಳೊಂದಿಗೆ ಜಗಳವಾಡುತ್ತಿದ್ದನು.
ಭಿನ್ನಾಭಿಪ್ರಾಯದಿಂದಾಗಿ ದಂಪತಿ ನಡುವೆ ಜಗಳವಾಗುತ್ತಿತ್ತು. ಜ.30ರಂದು ಆರೋಪಿ ಹೊರಗೆ ಹೋಗಿ ಅಡುಗೆ ಎಣ್ಣೆ ತೆಗೆದುಕೊಂಡು ಮನೆಗೆ ಬಂದಿದ್ದಾನೆ. ಈ ಸಂದರ್ಭದಲ್ಲಿ ಪತ್ನಿ-ಮಗಳು ಟಿವಿ ನೋಡುತ್ತಾ ಕುಳಿತ್ತಿದ್ದರು. ಆರೋಪಿ ಸೀದಾ ಅಡುಗೆ ಮನೆಗೆ ಹೋಗಿ ಎಣ್ಣೆ ಕಾಯಿಸಿಕೊಂಡು ಬಂದು ಪತ್ನಿ-ಮಗಳ ಮೇಲೆ ಚೆಲ್ಲಿ ಸ್ಥಳದಿಂದ ಪರಾರಿಯಾಗಿದ್ದನು.
ವಿಷಯ ತಿಳಿದು ಆಡುಗೋಡಿ ಠಾಣೆ ಪೊಲೀಸರು ಸ್ಥಳಕ್ಕೆ ಹೋಗಿ ಪರಿಶೀಲಿಸಿ ಸುಟ್ಟ ಗಾಯಗೊಂಡಿದ್ದ ತಾಯಿ-ಮಗಳನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದು , ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರು ಆರೋಪಿಯನ್ನು ಪತ್ತೆ ಹಚ್ಚಿ ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ.

Articles You Might Like

Share This Article