ವನ್ಯಜೀವಿಗಳ ಹಾವಳಿ ತಡೆಗೆ ಕಾರ್ಯತಂತ್ರ ಕುರಿತು ಅರಣ್ಯ ಸಚಿವ ಲಿಂಬಾವಳಿ ಮಹತ್ವದ ಸಭೆ

ಬೆಂಗಳೂರು, ಫೆ.25- ರಾಜ್ಯದ ನಾನಾ ಕಡೆ ಮಾನವ ಮತ್ತು ಕಾಡುಪ್ರಾಣಿಗಳ ನಡುವೆ ನಡೆಯುತ್ತಿರುವ ಸಂಘರ್ಷವನ್ನು ತಡೆಗಟ್ಟಲು ಕೈಗೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳು ಮತ್ತು ಕಾರ್ಯತಂತ್ರಗಳ ಬಗ್ಗೆ ಇಂದು ಅರಣ್ಯ ಸಚಿವ ಅರವಿಂದ ಲಿಂಬಾವಳಿ ಅವರು ಶಾಸಕರ ಜೊತೆ ಮಹತ್ವದ ಸಭೆ ನಡೆಸಿದರು. ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ಶಾಸಕರಾದ ಆರ್.ವಿ.ದೇಶಪಾಂಡೆ, ಕೆ.ಜಿ.ಬೋಪಯ್ಯ, ಎಂ.ಪಿ.ಕುಮಾರಸ್ವಾಮಿ, ಅರಗಜ್ಞಾನೇಂದ್ರ, ಎಚ್.ಕೆ.ಕುಮಾರಸ್ವಾಮಿ, ಕೊಳ್ಳೆಗಾಲ ಶಾಸಕ ಎನ್.ಮಹೇಶ್ ಸೇರಿದಂತೆ ಶಾಸಕರು, ಅಧಿಕಾರಿಗಳು ಭಾಗವಹಿಸಿದ್ದರು.

ಪ್ರಮುಖವಾಗಿ ಕೊಡಗು, ಹಾಸನ, ಉತ್ತರಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲೆಗಳ ಶಾಸಕರು ಭಾಗವಹಿಸಿದ್ದರು. ಸಭೆಯಲ್ಲಿ ಬಹುತೇಕ ಶಾಸಕರು ಕಳೆದ ಹಲವು ದಿನಗಳಿಂದ ಕಾಡುಪ್ರಾಣಿಗಳ ಹಾವಳಿಯಿಂದಾಗಿ ಬೆಳೆಗಳು, ತೋಟ, ಗದ್ದೆ, ಅಡಿಕೆ, ಬಾಳೆ, ತೆಂಗು ಸೇರಿದಂತೆ ವಾಣಿಜ್ಯ ಬೆಳೆಗಳು ಹಾಳಾಗುತ್ತಿವೆ. ಕೂಡಲೇ ಇದಕ್ಕೆ ಕಡಿವಾಣ ಹಾಕಬೇಕೆಂದು ಮನವಿ ಮಾಡಿದರು.

ರೈತರು ಬೆಳೆದ ಬೆಳೆಗಳನ್ನು ಕಾಡುಪ್ರಾಣಿಗಳು ಹಾಳು ಮಾಡುತ್ತಿವೆ. ಪ್ರತಿಯೊಬ್ಬರು ತಂತಿಬೇಲಿ ಹಾಕಿಕೊಳ್ಳಲು ಸಾಧ್ಯವಿಲ್ಲ. ಪ್ರಾಣಿಗಳ ಮೇಲೆ ಹಲ್ಲೆ ನಡೆಸಿದರೆ ಅರಣ್ಯ ಇಲಾಖೆಯವರು ದೂರು ದಾಖಲಿಸುತ್ತಾರೆ. ನಮ್ಮ ಕ್ಷೇತ್ರಗಳಲ್ಲಿ ತಲೆ ಎತ್ತಿ ಓಡಾಲು ಸಾಧ್ಯವಾಗುತ್ತಿಲ್ಲ ಎಂದು ಶಾಸಕರು ಅಸಮಾಧಾನ ವ್ಯಕ್ತಪಡಿಸಿದರು.

ರೈತರು ವರ್ಷದಲ್ಲಿ ಬೆಳೆಯುವ ಬೆಳೆಗಳನ್ನು ಪ್ರಾಣಿಗಳು ಹಾಳು ಮಾಡಿದರೆ ಅವರಿಗೆ ಪರಿಹಾರ ಸಿಗುವುದಿಲ್ಲ. ಒಂದು ಕಡೆ ಬರಗಾಲ, ಮತ್ತೊಂದು ಕಡೆ ಪ್ರವಾಹ ಬಂದರೆ ಅದೂ ಕೊಚ್ಚಿ ಹೋಗುತ್ತದೆ. ಇನ್ನೊಂದೆಡೆ ಕಾಡು ಪ್ರಾಣಿಗಳು ಇದ್ದ ಬೆಳೆಯನ್ನೂ ಹಾಳು ಮಾಡಿದರೆ ಅವರು ತೀವ್ರ ಸಂಕಷ್ಟಕ್ಕೆ ಸಿಲುಕುತ್ತಾರೆ ಎಂದು ಒಕ್ಕೊರಲ ಅಭಿಪ್ರಾಯ ವ್ಯಕ್ತಪಡಿಸಿದರು.

ಕೂಡಲೇ ಕೇಂದ್ರ ಸಚಿವರಿಗೆ ಪತ್ರ ಬರೆದು ಕಾಡು ಪ್ರಾಣಿಗಳ ಹಾವಳಿಯನ್ನು ತಡೆಗಟ್ಟಲು ಎಲ್ಲೆಲ್ಲಿ ಅಗತ್ಯವಿದೆಯೋ ಅಂತಹ ಕಡೆ ಬ್ಯಾರಿಕೇಡ್‍ಗಳನ್ನು ಅಳವಡಿಸಬೇಕಿ. ಅಷ್ಟೋಇಷ್ಟೋ ಬೆಳೆ ಬೆಳೆಯುತ್ತೇವೆ. ಎಲ್ಲವೂ ಕಾಡುಪ್ರಾಣಿಗಳು ಹಾಳು ಮಾಡಿದರೆ ನಮ್ಮ ಜೀವನ ನಿರ್ವಹಣೆ ಹೇಗೆ ಎಂದು ಪ್ರಶ್ನಿಸಿದರು.

ತಕ್ಷಣವೇ ಕೇಂದ್ರಕ್ಕೆ ಪತ್ರ ಬರೆದು ಸೂಕ್ತ ಕ್ರಮ ಕೈಗೊಳ್ಳಬೇಕು. ಕಾಡುಪ್ರಾಣಿಗಳ ಹಾವಳಿಯನ್ನು ನಿಲ್ಲಿಸಲು ಯಾವುದಾದರೊಂದು ಪರಿಹಾರವನ್ನು ಕಂಡುಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. ಶಾಸಕರ ಅಭಿಪ್ರಾಯಕ್ಕೆ ಸಹಮತ ವ್ಯಕ್ತಪಡಿಸಿದ ಲಿಂಬಾವಳಿ, ಶೀಘ್ರದಲ್ಲೇ ಸಿಎಂ ನೇತೃತ್ವದಲ್ಲಿ ಮತ್ತೊಂದು ಸುತ್ತಿನ ಸಭೆ ಕರೆಯಲಾಗುವುದು. ಆ ಸಂದರ್ಭದಲ್ಲಿ ನಿಮ್ಮ ನಿಮ್ಮ ಕ್ಷೇತ್ರದಲ್ಲಿನ ಸಮಸ್ಯೆಗಳನ್ನು ಮನವರಿಕೆ ಮಾಡಿಕೊಡಿ.

ಈಗಾಗಲೇ ಕೇಂದ್ರ ಸಚಿವ ಪ್ರಕಾಶ್ ಜಾವ್ಡೇಕರ್ ಅವರನ್ನು ಭೇಟಿಯಾಗಲು ನನಗೆ ಸೂಚನೆ ಕೊಟ್ಟಿದ್ದಾರೆ. ಶೀಘ್ರದಲ್ಲಿ ಕಾಡುಪ್ರಾಣಿಗಳ ಸಂಘರ್ಷವನ್ನು ಇತ್ಯರ್ಥಪಡಿಸಲಾಗುವುದು ಎಂದು ಲಿಂಬಾವಳಿ ಭರವಸೆ ನೀಡಿದರು.