ವಾಷಿಂಗ್ಟನ್, ಫೆ.28- ಅಮೆರಿಕಾ ಹಾಗೂ ಭಾರತದ ನಡುವಿನ ವ್ಯಾಪಾರ ಒಪ್ಪಂದವನ್ನು ಸುಧಾರಿಸಲು, ಮಾನವ ಹಕ್ಕುಗಳ ರಕ್ಷಣೆ ಹಾಗೂ ಬಹುತ್ವದ ಪ್ರಾಮುಖ್ಯತೆಯನ್ನು ವೃದ್ಧಿಸಲು ತಾವು ಕೆಲಸ ಮಾಡುವುದಾಗಿ ಅಮೆರಿಕಾ ನಾಮನಿರ್ದೇಶಿತ ರಾಯಬಾರಿ ಎರಿಕ್ ಗಾರ್ಸೆಟ್ಟಿ ಭರವಸೆ ನೀಡಿದ್ದಾರೆ.
ಅಮೆರಿಕ ಅಧ್ಯಕ್ಷ ಜೋ ಬಿಡೆನ್ ನಾಮನಿರ್ದೇಶಿತ ಎರಿಕ್ ಅವರು ಮೊದಲ ಬಾರಿಗೆ ಅಮೆರಿಕಾದಲ್ಲಿ ನೆಲೆಸಿರುವ ಭಾರತೀಯ ಸಮುದಾಯದ ಪ್ರಮುಖ ಸದಸ್ಯರೊಂದಿಗೆ ಸಮಾಲೋಚನೆ ನಡೆಸಿದರು. ಸುಮಾರು 2 ಗಂಟೆಗಳ ಕಾಲ ನಡೆದ ಸಭೆಯಲ್ಲಿ ಭಾರತೀಯ ವಲಸಿಗರ ಹಿತ ರಕ್ಷಣೆಗೆ ಬಿಡೇನ್ ಆಡಳಿತ ಬದ್ಧವಾಗಿದೆ ಎಂಬ ಭರವಸೆ ನೀಡಲಾಗಿದೆ.
ಸಭೆಯಲ್ಲಿ ಅರುಣ್ ಕುಮಾರ್, ವಿಶಾಲ್ ಗ್ರೋವರ್, ನೀಲ್ ಮಖಿಜಾ ಬಿ.ಜೆ.ಅರುಣ್, ಸಿವ್ ಸಾಂಬಶಿವಂ, ಸುಷ್ಮಾ ಮಲ್ಹೋತ್ರಾ, ಅನಿತಾ ಮನ್ವಾನಿ ಭಗತ್, ಅರ್ಜುನ್ ಭಗತ್, ಅನಿಲ್ ಗೋಧ್ವಾನಿ, ವಿನಿತಾ ಗುಪ್ತಾ, ಸುಮಿರ್ ಚಡ್ಡಾ, ಕಾರ್ಲ್ ಮೆಹ್ತಾ, ರಾಜು ರೆಡ್ಡಿ, ಆನಂದ್ ರಾಜÁರಾಮನ್, ಎ.ಜಿ.ಕೆ.ಕರುಣಾಕರನ್ ಮತ್ತು ಖಂಡೇರಾವ್ ಕಂಡ್ ಮತ್ತಿತರರು ಭಾಗವಹಿಸಿದ್ದರು.
ಭಾರತ ಮತ್ತು ಯುಎಸ್ ನಡುವಿನ ದ್ವಿಪಕ್ಷೀಯ ವ್ಯಾಪಾರವು 2019-20ರಲ್ಲಿ 88.9 ಶತಕೋಟಿ ಡಾಲರ್ ನಿಂದ 2020-21 ರಲ್ಲಿ 80.5 ಶತಕೋಟಿ ಡಾಲರ್ ಇತ್ತು. ಭಾರತದ ರಫ್ತು 2019-20 ರಲ್ಲಿ 53 ಶತಕೋಟಿ ಡಾಲರ್ನಿಂದ 2020-21 ರಲ್ಲಿ 51.62 ಶತಕೋಟಿ ಡಾಲರ್ ಆಗಿತ್ತು ಎಮದು ವಿಶ್ಲೇಷಿಸಲಾಗಿದೆ.
