ಸೋಮವಾರದಿಂದ ಅಧಿವೇಶನ, ಆಡಳಿತ-ವಿಪಕ್ಷಗಳ ಕೆಸರೆರಚಾಟಕ್ಕೆ ಅಖಾಡ ಸಜ್ಜು

Social Share

ಬೆಂಗಳೂರು, ಡಿ.17- ಸೋಮವಾರದಿಂದ ಬೆಳಗಾವಿಯ ಸುವರ್ಣಸೌಧದಲ್ಲಿ ಅರಂಭವಾಗಲಿರುವ ಚಳಿಗಾಲದ ಅಧಿವೇಶನದಲ್ಲಿ ಕಾವೇರಿ ಚರ್ಚೆ ನಡೆಯಲಿದ್ದು, ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ಮಾತಿನ ಚಕಮಕಿ ಹಾಗೂ ಕೋಲಾಹಲಕ್ಕೆ ಉಭಯ ಸದನ ಸಾಕ್ಷಿಯಾಗಲಿದೆ.

ಹತ್ತು ದಿನಗಳ ಕಾಲ ಚಳಿಗಾಲದ ಅಧಿವೇಶನ ನಡೆಯಲಿದ್ದು, ಆಡಳಿತ ಪಕ್ಷ ಬಿಜೆಪಿಯನ್ನು ಸದನದಲ್ಲಿ ಕಟ್ಟಿ ಹಾಕಲು ಕಾಂಗ್ರೆಸ್ ತಂತ್ರಗಾರಿಕೆ ರೂಪಿಸುತ್ತಿದ್ದು, ಬತ್ತಳಿಕೆಯಲ್ಲೂ ಹಲವು ಅಸ್ತ್ರಗಳನ್ನು ಇಟ್ಟುಕೊಂಡಿದೆ.
ಇದಕ್ಕೆ ಪ್ರತಿಯಾಗಿ ಆಡಳಿತಾರೂಢ ಬಿಜೆಪಿ ಕೂಡ ಪ್ರತಿ ಅಸ್ತ್ರಗಳನ್ನು ತಿರುಗಿಸಲು ಸಜ್ಜಾಗಿದೆ.

ಎಸ್‍ಸಿ-ಎಸ್‍ಟಿ ಮೀಸಲಾತಿಯ ಪ್ರಮಾಣವನ್ನು ಹೆಚ್ಚಳ ಮಾಡಿ ರಾಜ್ಯ ಸರ್ಕಾರದ ಮಹತ್ವದ ನಿರ್ಧಾರ ಕೈಗೊಂಡಿತ್ತು. ಆದರೆ, ವಾಸ್ತವದಲ್ಲಿ ಇದು ಜಾರಿಗೆ ಬರಲು ಅಸಾಧ್ಯ ಎಂದು ಕಾಂಗ್ರೆಸ್ ಹೇಳಿತ್ತು. ಈ ನಡುವೆ ಲೋಕಸಭೆಯಲ್ಲಿ ಮೀಸಲಾತಿ ಪ್ರಮಾಣವನ್ನು ಶೇ.50ಕ್ಕಿಂತ ಹೆಚ್ಚಿಸುವ ಪ್ರಸ್ತಾಪ ಇಲ್ಲ ಎಂದು ಕೇಂದ್ರ ಸಚಿವರ ಹೇಳಿಕೆಯನ್ನು ಮುಂದಿಟ್ಟುಕೊಂಡು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಲು ಕಾಂಗ್ರೆಸ್ ಗೆ ಅಸ್ತ್ರ ಸಿಕ್ಕಂತಾಗಿದೆ.

ಎಸ್‍ಸಿ-ಎಸ್‍ಟಿ ಮೀಸಲಾತಿ ಪ್ರಮಾಣ ಹೆಚ್ಚಳ ಮಾಡುವ ಸರ್ಕಾರದ ನಿರ್ಧಾರದ ಹಿಂದೆ ಕೇವಲ ರಾಜಕೀಯ ಉದ್ದೇಶ ಇದೆ ಎಂದು ಈಗಾಗಲೇ ಸಿದ್ದರಾಮಯ್ಯ ಆರೋಪ ಮಾಡಿದ್ದಾರೆ. ಮೀಸಲಾತಿ ಪ್ರಮಾಣವನ್ನು ಶೇ.50ರಷ್ಟು ಪ್ರಮಾಣದ ಮಿತಿಯನ್ನು ಕಿತ್ತುಹಾಕದೆ ಹೇಗೆ ಮೀಸಲಾತಿ ಹೆಚ್ಚಳ ಮಾಡಲು ಸಾಧ್ಯ ಎಂದು ಪ್ರಶ್ನಿಸಿದ್ದಾರೆ. ಇದೇ ವಿಚಾರವನ್ನು ಸದನದಲ್ಲೂ ಪಸ್ತಾಪ ಮಾಡಿ ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳುವ ಸಾಧ್ಯತೆ ಇದೆ.

ಗಡಿ ವಿವಾದ: ಚುನಾವಣೆ ಸಂದರ್ಭದಲ್ಲಿ ಗಡಿ ವಿವಾದದ ಕ್ಯಾತೆಯನ್ನು ತೆಗೆದುಕೊಂಡಿದ್ದು, ಇದರಲ್ಲೂ ಸರ್ಕಾರ ರಾಜಕೀಯ ಮಾಡುತ್ತಿದೆ ಎಂದು ಸರ್ಕಾರದ ವಿರುದ್ಧ ಈಗಾಗಲೇ ಕಾಂಗ್ರೆಸ್ ನಾಯಕರು ಕಿಡಿಕಾರಿದರು. ಈ ಬಾರಿಯ ಸದನದಲ್ಲೂ ಗಡಿ ವಿವಾದದ ಬಗ್ಗೆಯೂ ಬೆಳಗಾವಿ ಅವೇಶನದಲ್ಲಿ ಚರ್ಚೆ ನಡೆಸುವ ಸಾಧ್ಯತೆ ಹೆಚ್ಚಾಗಿದೆ. ಗಡಿ ವಿವಾದ ನಿರ್ವಹಣೆ ಮಾಡಿದ ರೀತಿಯ ಬಗ್ಗೆ ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳಲು ಕಾಂಗ್ರೆಸ್ ಮುಂದಾಗಲು ಸಜ್ಜಾಗಿದೆ ಎಂದು ಹೇಳಲಾಗಿದೆ.

ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ(17-12-2022)

ಮಹಾರಾಷ್ಟ್ರ, ಕರ್ನಾಟಕ ಹಾಗೂ ಕೇಂದ್ರದಲ್ಲೂ ಬಿಜೆಪಿ ಸರ್ಕಾರ ಇರುವುದರಿಂದ ಗಡಿ ವಿವಾದವಾಗಿ ಸರ್ಕಾರದ ನಿಲುವು ಹಾಗೂ ಧೋರಣೆಯ ಬಗ್ಗೆ ಪ್ರಸ್ತಾಪ ಮಾಡಿ ಚಾಟಿ ಬೀಸಲು ಕಾಂಗ್ರೆಸ್ ಮುಂದಾಗಿದೆ.ಸರ್ಕಾರದ ವಿರುದ್ಧ ಸಾಕಷ್ಟು ಬಾರಿ 40% ಕಮಿಷನ್ ಆರೋಪ ಕೇಳಿ ಬಂದಿದ್ದು, ಈ ಬಾರಿಯೂ ಸದನದಲ್ಲಿ ಶೇ.40ರಷ್ಟು ಕಮಿಷನ್ ಆರೋಪ ಸದ್ದು ಮಾಡುವ ಸಾಧ್ಯತೆ ಇದೆ.

ಕಳೆದ ಎರಡು ಬಾರಿಯ ಅವೇಶನದಲ್ಲೂ ಶೇ.40ರಷ್ಟು ಕಮಿಷನ್ ಆರೋಪದ ಬಗ್ಗೆ ಚರ್ಚೆಗೆ ಕಾಂಗ್ರೆಸ್ ಅವಕಾಶ ಕೋರಿತ್ತು. ಆದರೆ ಅನುಮತಿ ಸಿಕ್ಕಿರಲಿಲ್ಲ. ಈ ಬಾರಿಯೂ ಭ್ರಷ್ಟಾಚಾರದ ಆರೋಪವನ್ನು ಸದನದಲ್ಲಿ ಪ್ರಸ್ತಾಪಿಸಲು ಕಾಂಗ್ರೆಸ್ ಮುಂದಾಗುವ ಸಾಧ್ಯತೆ ಇದೆ.

ಕಾನೂನು ಸುವ್ಯವಸ್ಥೆ: ಇನ್ನು ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿರುವ ವಿಚಾರ ಕೂಡ ಕಾಂಗ್ರೆಸ್ ಪಾಲಿಗೆ ಇರುವ ಪ್ರಮುಖ ಅಸ್ತ್ರವಾಗಿದೆ. ಬೆಂಗಳೂರಿನಲ್ಲಿ ಇತ್ತೀಚೆಗೆ ನಡೆದ ಶೂಟ್‍ಔಟ್ ಪ್ರಕರಣ, ಕರಾವಳಿ ಭಾಗದಲ್ಲಿ ನಡೆದ ನೈತಿಕ ಪೊಲೀಸ್ ಗಿರಿ ಪ್ರಕರಣ ಜೊತೆಗೆ ಬೇಕರಿ ಮಾಲೀಕರ ಮೇಲೆ ಪುಡಿ ರೌಡಿಗಳ ನಡೆಸಿದ ದಾಂಧಲೆ ಮುಂತಾದವುಗಳನ್ನು ಮುಂದಿಟ್ಟುಕೊಂಡು ಕಾನೂನು ಸುವ್ಯವಸ್ಥೆ ಹದಗೆಟ್ಟಿರುವ ವಿಚಾರವನ್ನು ಪಸ್ತಾಪ ಮಾಡಿ ಆಡಳಿತ ಪಕ್ಷಕ್ಕೆ ಬಿಸಿ ಮುಟ್ಟಿಸುವುದು ಕಾಂಗ್ರೆಸ್ ತಂತ್ರಗಾರಿಕೆಯಾಗಿದೆ.

ಕಬ್ಬು ಬೆಳೆಗಾರರ ಸಮಸ್ಯೆ:
ಸಕ್ಕರೆ ಕಾರ್ಖಾನೆಗಳು ಎಥನಾಲ್ ಉತ್ಪಾದನೆಗೆ ಪ್ರೋತ್ಸಾಹ ಧನ ನೀಡಬೇಕು. ಕಡಿಮೆ ಬಡ್ಡಿಯಲ್ಲಿ ಸಾಲ, ತೆರಿಗೆ ವಿನಾಯಿತಿ, ಎಥನಾಲ್ ಖರೀದಿ ಭರವಸೆ, ವಿದ್ಯುತ್ ಖರೀದಿ ಭರವಸೆ ನೀಡಬೇಕು ಎಂಬಿತ್ಯಾದಿ ಬೇಡಿಕೆಗಳನ್ನು ಮುಂದಿಟ್ಟುಕೊಂಡು ರೈತರು ಹೋರಾಟ ನಡೆಸುತ್ತಿದ್ದಾರೆ.

ಈ ನಡುವೆ ಉಪ ಉತ್ಪನ್ನವಾದ ಎಥೆನಾಲ್‍ಗೆ ಸಂಬಂಸಿದಂತೆ ಪ್ರತಿ ಮೆಟ್ರಿಕ್ ಟನ್‍ಗೆ 50 ರೂ. ಹೆಚ್ಚುವರಿಯಾಗಿ ರೈತರಿಗೆ ಪಾವತಿಸುವ ಸಂಬಂಧವಾಗಿ ಸಕ್ಕರೆ ಸಚಿವ ಶಂಕರ್ ಪಾಟೀಲ್ ಮುನೇನಕೊಪ್ಪ ಅವರು ಭರವಸೆ ನೀಡಿದ್ದರು. ಅದರಂತೆ ಆದೇಶ ಹೊರಡಿಸಲಾಗಿದೆ. ಆದರೆ, ಸಚಿವರು ಸಭೆಯಲ್ಲಿ ಕೊಟ್ಟಿದ್ದ ಭರವಸೆಯನ್ನು ರೈತ ಸಂಘಟನೆಗಳು ತಿರಸ್ಕರಿಸಿವೆ. ಈ ವಿಚಾರ ಸದನದಲ್ಲೂ ಸದ್ದು ಮಾಡಲಿದೆ.

ಮೇಕೆದಾಟು ಎತ್ತಿನ ಹೊಳೆ ವಿಳಂಬ:
ಈಗಾಗಲೇ ನೀರಿಗಾಗಿ ನಡಿಗೆ ಎಂದು ಕಾಂಗ್ರೆಸ್ ನಾಯಕರು ಮೇಕೆದಾಟು ಪಾದಯಾತ್ರೆ ನಡೆದಿದ್ದು, ಮೇಕೆದಾಟು ಯೋಜನೆಗೆ ಬಜೆಟ್‍ನಲ್ಲಿ 1000 ಕೋಟಿ ರೂ. ಘೋಷಣೆ ಮಾಡಿದರೂ ಸರ್ಕಾರ ಯೋಜನೆ ಜಾರಿಯ ಬಗ್ಗೆ ಯಾವುದೇ ನಿರ್ಧಾರ ಮಾಡಿಲ್ಲ.

ಮೇಕೆದಾಟು ಯೋಜನೆಗೆ ಸಂಬಂಸಿದಂತೆ ರಾಜ್ಯ ಸರ್ಕಾರದ ನಿಲುವಿಗೆ ಕಾಂಗ್ರೆಸ್ ಆಕ್ಷೇಪ ವ್ಯಕ್ತಪಡಿಸಿದ್ದು, ರಾಜ್ಯದ ಜನರ ಹಿತಕ್ಕಿಂತ ತಮಿಳುನಾಡಿನ ಹಿತವೇ ಹೆಚ್ಚಾಗಿದೆ ಎಂದು ಸರ್ಕಾರದ ಧೋರಣೆಯನ್ನು ಸದನದಲ್ಲೂ ಪ್ರಸ್ತಾಪ ಮಾಡಲು ಕಾಂಗ್ರೆಸ್ ನಿರ್ಧಾರ ಮಾಡಿದೆ. ಜತೆಗೆ ಎತ್ತಿನಹೊಳೆ ಯೋಜನೆ ಜಾರಿ ವಿಳಂಬದ ಬಗ್ಗೆಯೂ ಸದನದಲ್ಲಿ ಚರ್ಚೆ ಆಗುವ ಸಾಧ್ಯತೆ ಇದೆ.

ಇದೇ ಸಂದರ್ಭದಲ್ಲಿ ರೌಡಿ ಶೀಟರ್‍ಗಳ ಜೊತೆಗೆ ಬಿಜೆಪಿ ಮುಖಂಡರು ವೇದಿಕೆ ಹಂಚಿಕೊಂಡಿದ್ದನ್ನು ಹಾಗೂ ಪಕ್ಷ ಸೇರ್ಪಡೆ ವಿಚಾರವನ್ನು ಸದನದಲ್ಲಿ ಪ್ರಸ್ತಾಪ ಮಾಡುವ ಸಾಧ್ಯತೆ ಹೆಚ್ಚಾಗಿದ್ದು, ಹೀಗೆ ಹತ್ತು ದಿನಗಳ ಕಾಲ ಬೆಳಗಾವಿಯಲ್ಲಿ ನಡೆಯಲಿರುವ ಚಳಿಗಾಲದ ಅಧಿವೇಶನದಲ್ಲಿ ಆಡಳಿತ ಪಕ್ಷ ಬಿಜೆಪಿಗೆ ಬಿಸಿ ಮುಟ್ಟಿಸಲು ಕಾಂಗ್ರೆಸ್ ತಂತ್ರಗಾರಿಗೆಯನ್ನು ರೂಪಿಸುತ್ತಿದೆ ಎನ್ನಲಾಗಿದೆ.

ಹೀಗೆ ಹತ್ತು ದಿನಗಳ ಕಾಲ ಬೆಳಗಾವಿಯಲ್ಲಿ ನಡೆಯಲಿರುವ ಚಳಿಗಾಲದ ಅಧಿವೇಶನದಲ್ಲಿ ಆಡಳಿತ ಪಕ್ಷ ಬಿಜೆಪಿಗೆ ಬಿಸಿ ಮುಟ್ಟಿಸಲು ಕಾಂಗ್ರೆಸ್ ತಂತ್ರಗಾರಿಕೆ ರೂಪಿಸುತ್ತಿದೆ.

#WinterSession, #SuvarnaSoudha, #KarnatakaAssemblySession, #ಅಧಿವೇಶನ, #BelagaviSession, #ಸುವರ್ಣಸೌಧ, #ಚಳಿಗಾಲದಅಧಿವೇಶನ,

Articles You Might Like

Share This Article