ಬೆಂಗಳೂರು,ಜ.18- ಕೋವಿಡ್ ಸೋಂಕು ಮತ್ತು ಓಮಿಕ್ರಾನ್‍ಗೆ ಕಡಿವಾಣ ಹಾಕಲು ರಾಜ್ಯ ಸರ್ಕಾರ ವಿಸಿರುವ ವಾರಾಂತ್ಯದ ಲಾಕ್‍ಡೌನ್ ಮತ್ತು ರಾತ್ರಿ ಕರ್ಫ್ಯೂ ಹಿಂಪಡೆಯುವುದು ಬಹುತೇಕ ಖಚಿತವಾಗಿದೆ. ಶುಕ್ರವಾರ ನಡೆಯುವ ಸಭೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಮ್ಮ ಸಂಪುಟದ ಸಹೋದ್ಯೋಗಿಗಳು ಮತ್ತು ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಸದಸ್ಯರ ಜೊತೆ ಚರ್ಚಿಸಿ ಸರ್ಕಾರದ ನಿರ್ಧಾರವನ್ನು ಪ್ರಕಟಿಸಲಿದ್ದಾರೆ.
ಪ್ರಸ್ತುತ ಜಾರಿಯಲ್ಲಿರುವ ವಾರಾಂತ್ಯದ ಲಾಕ್‍ಡೌನ್ ಮತ್ತು ರಾತ್ರಿ 10ರಿಂದ ಮುಂಜಾನೆ 5ರವರೆಗೆ ಎಲ್ಲಾ ಚಟುವಟಿಕೆಗಳಿಗೆ ಕಡಿವಾಣ ಹಾಕುವ ಕರ್ಫ್ಯೂವನ್ನು ಸಹ ತೆಗೆದು ಹಾಕಲಿದ್ದು, ಶನಿವಾರದಿಂದಲೇ ಕರ್ನಾಟಕ ಮತ್ತೆ ಸಹಜಸ್ಥಿತಿಗೆ ಮರಳಲಿದೆ. ರಾಜ್ಯ ಸರ್ಕಾರದ ತೀರ್ಮಾನಕ್ಕೆ ವಿರೋಧ ಪಕ್ಷದವರಿಗಿಂತ ಸ್ವಪಕ್ಷೀಯರಿಂದಲೇ ವಿರೋಧ ವ್ಯಕ್ತವಾಗಿದೆ.
ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಹಾಗೂ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಲಾಕ್‍ಡೌನ್ ಬಹಿರಂಗವಾಗಿಯೇ ವಿರೋಧ ವ್ಯಕ್ತಪಡಿಸಿದ್ದಾರೆ. ಇದರ ನಡುವೆ ಬೆಂಗಳೂರಿನಲ್ಲಿ ಮುಂದಿನ ವಾರದಿಂದ ಅಗತ್ಯವಿಲ್ಲ ಎಂದು ಬಿಬಿಎಂಪಿ ಆಯುಕ್ತ ಗೌರವ ಗುಪ್ತ ಹೇಳಿರುವುದು ಲಾಕ್‍ಡೌನ್ ಸಡಿಲಿಕೆಯ ಮುನ್ಸೂಚನೆ ಎಂದು ಹೇಳಲಾಗಿದೆ.
ನನ್ನ ವೈಯಕ್ತಿಕವಾಗಿ ಹೇಳುವುದಾದರೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಲಾಕ್‍ಡೌನ್ ಹಿಂತೆಗೆದುಕೊಳ್ಳಬೇಕು ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಷಿ ಅವರು ಹುಬ್ಬಳ್ಳಿಯಲ್ಲಿ ಒತ್ತಾಯಿಸಿದ್ದಾರೆ. ಕೋವಿಡ್ ಸೋಂಕು ಕಾಣಿಸಿಕೊಂಡರೂ ಜನ ಆಸ್ಪತ್ರೆಗೆ ದಾಖಲಾಗುತ್ತಿಲ್ಲ.
ಇದು ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿಲ್ಲ. ವಾಸ್ತವ ಹೀಗಿರುವಾಗ ಲಾಕ್‍ಡೌನ್ ಅಗತ್ಯವಿದೆಯೇ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಪಣಜಿಯಲ್ಲಿ ಪ್ರಶ್ನಿಸಿದ್ದಾರೆ.
ಸರ್ಕಾರದ ತೀರ್ಮಾನಕ್ಕೆ ಉದ್ಯಮ ವಲಯದಿಂದಲೂ ವಿರೋಧ ವ್ಯಕ್ತವಾಗಿದೆ. ಹೋಟೆಲ್ ಮಾಲೀಕರ ಸಂಘ, ಬಾರ್ ಅಂಡ್ ರೆಸ್ಟೋರೆಂಟ್ ಸಂಘ, ಗಾರ್ಮೆಂಟ್ಸ್ ನೌಕರರು, ಆಟೋ, ಓಲಾ, ಊಬರ್, ಖಾಸಗಿ ನೌಕರರು, ಬಸ್, ಲಾರಿ ಸೇರಿದಂತೆ ಎಲ್ಲ ವಲಯದಿಂದಲೂ ತೀವ್ರವಾದ ವಿರೋಧ ವ್ಯಕ್ತವಾಗಿದೆ.
ಬುಧವಾರ ಹತ್ತಕ್ಕೂ ಹೆಚ್ಚು ಸಂಘಟನೆಗಳು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಕೆ.ಸುಧಾಕರ್ ಅವರನ್ನು ಭೇಟಿಯಾಗಿ ಯಾವುದೇ ಕಾರಣಕ್ಕೂ ಲಾಕ್‍ಡೌನ್ ಹಾಗೂ ರಾತ್ರಿ ಕಫ್ರ್ಯೂ ವಿಸ್ತರಣೆ ಮಾಡದಂತೆ ಮನವಿ ಮಾಡಲಿದ್ದಾರೆ. ಈ ಬಾರಿ ಸರ್ಕಾರ ಶನಿವಾರ ಮತ್ತು ಭಾನುವಾರ ಲಾಕ್‍ಡೌನ್ ಘೋಷಣೆ ಮಾಡಿದರೆ ನಾವು ಪಾಲನೆ ಮಾಡುವುದಿಲ್ಲ. ನಮ್ಮ ವಿರುದ್ಧ ಬೇಕಾದರೆ ದೂರು ದಾಖಲಿಸಲಿ ಮೊದಲೇ ಆರ್ಥಿಕ ಸಂಕಷ್ಟದಲ್ಲಿದ್ದೇವೆ.
ಖಾಸಗಿ ಆಸ್ಪತ್ರೆಗಳಿಗೆ ಅನುಕೂಲ ಮಾಡಿಕೊಡಲು ಪದೇ ಪದೇ ಲಾಕ್‍ಡೌನ್ ಮಾಡಲಾಗುತ್ತದೆ. ಯಾವುದೇ ಕಾರಣಕ್ಕೂ ನಾವು ಈ ಬಾರಿ ಸರ್ಕಾರದ ನಿಯಮಗಳನ್ನು ಪಾಲಿಸುವುದಿಲ್ಲ ಎಂದು ಸೆಡ್ಡು ಹೊಡೆದಿದ್ದಾರೆ. ಇನ್ನೊಂದೆಡೆ ಬಿಜೆಪಿ ಶಾಸಕರಿಂದಲೂ ಲಾಕ್‍ಡೌನ್ ಬಗ್ಗೆ ಅಪಸ್ವರ ವ್ಯಕ್ತವಾಗಿದೆ.
