ಬೆಂಗಳೂರು, ಫೆ.13- ಮಗಳನ್ನು ಕಾಲೇಜಿಗೆ ಬಿಟ್ಟು ಮನೆಗೆ ಹೋಂಡಾ ಡಿಯೋನಲ್ಲಿ ಹೋಗುತ್ತಿದ್ದ ಮಹಿಳೆಗೆ ಯಾವುದೋ ವಾಹನ ಡಿಕ್ಕಿ ಹೊಡೆದಿದ್ದು, ಕೆಳಗೆ ಬಿದ್ದ ಆಕೆಯ ಮೇಲೆ ಈಚರ್ ವಾಹನ ಹರಿದ ಪರಿಣಾಮ ದಾರುಣವಾಗಿ ಮೃತಪಟ್ಟಿರುವ ಘಟನೆ ಕಬ್ಬನ್ ಪಾರ್ಕ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇಂದು ಬೆಳಗ್ಗೆ ಸಂಭವಿಸಿದೆ.
ಭಾರತಿನಗರ ನಿವಾಸಿ ಸುಧಾ(38) ಅಪಘಾತದಲ್ಲಿ ಮೃತಪಟ್ಟ ಮಹಿಳೆ. ಇವರು ಗೃಹಿಣಿ ಎಂದು ಪೊಲೀಸರು ಈ ಸಂಜೆಗೆ ತಿಳಿಸಿದ್ದಾರೆ.ಇಂದು ಬೆಳಗ್ಗೆ 7.45ರ ಸುಮಾರಿನಲ್ಲಿ ಮಗಳನ್ನು ಸೆಂಟ್ ಜೋಸೆಫ್ ಕಾಲೇಜಿಗೆ ಬಿಟ್ಟು ಕಸ್ತೂರಿ ಬಾ ರಸ್ತೆಯ ಪೆಟ್ರೋಲ್ ಬಂಕ್ ಮುಂಭಾಗ ಡಿಯೋದಲ್ಲಿ ಮನೆಗೆ ವಾಪಾಸಾಗುತ್ತಿದ್ದಾಗ ಯಾವುದೋ ವಾಹನ ಇವರಿಗೆ ಡಿಕ್ಕಿ ಹೊಡೆದಿದೆ.
ಡಿಕ್ಕಿ ರಭಸಕ್ಕೆ ಕೆಳಗೆ ಬಿದ್ದ ಸುಧಾ ಅವರ ಮೇಲೆ ಹಿಂದಿನಿಂದ ಅತಿ ವೇಗವಾಗಿ ಬರುತ್ತಿದ್ದ ಈಚರ್ ವಾಹನ ಹರಿದ ಪರಿಣಾಮ ತೀವ್ರವಾಗಿ ಗಾಯಗೊಂಡರು. ಅವರನ್ನು ಚಿಕಿತ್ಸೆಗಾಗಿ ವೈದೇಹಿ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಪರಿಶೀಲಿಸಿದ ವೈದ್ಯರು ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ಸುದ್ದಿ ತಿಳಿದು ಕಬ್ಬನ್ ಪಾರ್ಕ್ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.