ಚನ್ನಪಟ್ಟಣ, ಆ.9- ಬೆಳ್ಳಂಬೆಳಗ್ಗೆ ಒಂಟಿ ಸಲಗವೊಂದು ಮಹಿಳೆ ಮೇಲೆ ದಾಳಿ ಮಾಡಿ ತುಳಿದು ಸಾಯಿಸಿರುವ ಘಟನೆ ಚೆನ್ನಮ್ಮನ ಹೊಸ ಹಳ್ಳಿ ಬಳಿ ನಡೆದಿದೆ. ಸಿದ್ದಪ್ಪಾಜಿ ದೇವಾಲಯ ಅರ್ಚಕ ಚೆನ್ನಪ್ಪ ಅವರ ಪತ್ನಿ ಚೆನ್ನಮ್ಮ(65) ಆನೆ ದಾಳಿಗೆ ಒಳಗಾಗಿ ಮೃತಪಟ್ಟಿರುವ ಮಹಿಳೆ.
ಎಂದಿನಂತೆ ಇಂದು ಬೆಳಗಿನ ಜಾವ 5.30ರ ಸುಮಾರಿನಲ್ಲಿ ಚೆನ್ನಮ್ಮ ಅವರು ತೋಟಕ್ಕೆ ಹೋಗಿ ಹಸುವಿನ ಹಾಲು ಕರೆಯುತ್ತಿದ್ದಾಗ ಏಕಾಏಕಿ ಅವರ ಮೇಲೆ ಒಂಟಿ ಸಲಗವೊಂದು ದಾಳಿ ಮಾಡಿ ತುಳಿದಿದೆ. ಮಹಿಳೆಯ ಕೂಗಾಟ, ಚೀರಾಟ ಕೇಳಿ ಅಕ್ಕ-ಪಕ್ಕದವರು ಸ್ಥಳಕ್ಕೆ ಬಂದು ಆನೆಯನ್ನು ಓಡಿಸುವಷ್ಟರೊಳಗೆ ಚೆನ್ನಮ್ಮ ಮೃತಪಟ್ಟಿದ್ದರು.
ಆನೆ ದಾಳಿಯಿಂದ ಮಹಿಳೆ ಸಾವನ್ನಪ್ಪಿರುವ ವಿಷಯ ತಿಳಿದು ಸುತ್ತ-ಮುತ್ತಲ ಗ್ರಾಮಸ್ಥರು ಸ್ಥಳಕ್ಕೆ ಆಗಮಿಸಿದ್ದರು. ಮಹಿಳೆಯ ಕುಟುಂಬಸ್ಥರ ರೋದನ ಹೇಳತೀರದಾಗಿತ್ತು. ಸುದ್ದಿ ತಿಳಿದು ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿದಾಗ ಗ್ರಾಮಸ್ಥರು ಅವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಭರವಸೆಯಾಗಿಯೇ ಉಳಿದ ಆಶ್ವಾಸನೆ: ಕಳೆದ ಐದು ವರ್ಷಗಳಿಂದಲೂ ಆನೆಗಳ ಉಪಟಳದಿಂದ ಇದುವರೆಗೂ ಲಕ್ಷಾಂತರ ರೂ. ಬೆಲೆ ಹಾನಿಯಾಗಿ ರೈತರು ಕಂಗಾಲಾಗಿದ್ದಾರೆ. 10ರಿಂದ 15 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಆದರೂ ಅರಣ್ಯ ಇಲಾಖೆ ಆನೆಗಳನ್ನು ಸ್ಥಳಾಂತರಿಸಲು ಯಾವುದೇ ಕ್ರಮ ಕೈಗೊಂಡಿಲ್ಲ. ನೀಡಿದ ಭರವಸೆ ಆಶ್ವಾಸನೆಯಾಗಿಯೇ ಉಳಿದಿದೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಎಚ್ಡಿಕೆ ಚರ್ಚೆ: ಕಳೆದ ಎರಡು ದಿನಗಳಿಂದ ಅಷ್ಟೇ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು, ಗ್ರಾಮಕ್ಕೆ ಭೇಟಿ ನೀಡಿ ವನ್ಯಜೀವಿ ವಿಭಾಗದ ಹಿರಿಯ ಅಧಿಕಾರಿಗಳ ಜೊತೆ ಆನೆ ಸ್ಥಳಾಂತರ ಸಂಬಂಧ ಮಾತುಕತೆ ನಡೆಸಿದ್ದರು. ಆನೆಗಳ ನಿಯಂತ್ರಣಕ್ಕೆ ರೈಲ್ವೆ ಬ್ಯಾರಿಕೇಡ್ ಒಂದೇ ಮಾರ್ಗ ಎಂದು ಹೇಳಲಾಗಿದೆ. ಆದರೆ ಈ ಬಗ್ಗೆ ಅರಣ್ಯ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳಲಾಗದ ಕಾರಣ ಇಂದು ಮಹಿಳೆ ಪ್ರಾಣ ಕಳೆದುಕೊಳ್ಳುವಂತಾಯಿತು ಎಂದು ಗ್ರಾಮಸ್ಥರು ಅಳಲು ತೋಡಿಕೊಂಡಿದ್ದಾರೆ.