ಮತ್ತೊಂದು ಜೀವವನ್ನು ಬಲಿಪಡೆದ ಬೆಂಗಳೂರಿನ ರಸ್ತೆಗುಂಡಿಗಳು..!

Social Share

ಬೆಂಗಳೂರು,ಜ.30- ನಗರದಲ್ಲಿ ರಸ್ತೆ ಗುಂಡಿಯಿಂದಾಗಿ ಮತ್ತೊಮ್ಮೆ ಮಹಿಳೆಯೊಬ್ಬರು ಪ್ರಾಣ ಕಳೆದುಕೊಂಡ ಘಟನೆ ಬ್ಯಾಡರಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಕೊಟ್ಟಿಗೆಪಾಳ್ಯದ ಶರ್ಮಿಳಾ (38) ಮಾಗಡಿ ಮುಖ್ಯರಸ್ತೆ ಅಂಜನಾನಗರದಲ್ಲಿ ರಸ್ತೆ ಗುಂಡಿಯಿಂದಾಗಿ ಪ್ರಾಣ ಕಳೆದುಕೊಂಡಿದ್ದಾರೆ.
ದ್ವಿಚಕ್ರ ವಾಹನದ ಹಿಂಬದಿಯಲ್ಲಿ ಕುಳಿತು ತಾವರೆಕೆರೆ ಕಡೆಗೆ ಮಹಿಳೆ ತೆರಳುತ್ತಿದ್ದರು. ಕಾವೇರಿ ನೀರಿನ ಪೈಪ್‍ಲೈನ್ ಅಳವಡಿಕೆಗಾಗಿ ಮಾಗಡಿ ಮುಖ್ಯರಸ್ತೆಯ ಅಂಜನಾನಗರದಿಂದ ದೊಡ್ಡ ಗೊಲ್ಲರಹಟ್ಟಿಯವರೆಗೆ ರಸ್ತೆಯನ್ನು ಅಗೆದು ಮುಚ್ಚದೆ ಹಾಗೇ ಬಿಡಲಾಗಿದೆ. ಇಲ್ಲಿನ ಹರಿಹರ ಪುತ್ರ ಅಯ್ಯಪ್ಪಸ್ವಾಮಿ ದೇವಸ್ಥಾನದ ಸಮೀಪ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ ಬೈಕ್ ಸವಾರ ರಸ್ತೆಯ ಗುಂಡಿ ತಪ್ಪಿಸಲು ಹೋಗಿ ಆಯತಪ್ಪಿದಾಗ ಹಿಂಬದಿಯಲ್ಲಿ ಕುಳಿತಿದ್ದ ಮಹಿಳೆ ರಸ್ತೆಗೆ ಬಿದ್ದಿದ್ದಾರೆ.

ಈ ವೇಳೆ ಹಿಂಬದಿಯಿಂದ ಬಂದ ಬೊಲೆರೋ ವಾಹನ ಆಕೆಯ ಮೇಲೆ ಹರಿದು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಅದೃಷ್ಟವಶಾತ್ ಬೈಕ್ ಸವಾರ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಬೊಲೆರೋ ಚಾಲಕ ಮಾದೇಶ್‍ನ್ನು ಬಂಧಿಸಿದ ಬ್ಯಾಡರಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.ರಸ್ತೆ ಗುಂಡಿಗಳಿಂದಾಗಿ ನಾಗರಿಕರು ಪ್ರಾಣ ಕಳೆದುಕೊಳ್ಳುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಹೈಕೋರ್ಟ್ ಗುಂಡಿಗಳನ್ನು ಮುಚ್ಚಲು ಅಗತ್ಯ ಕ್ರಮ ಕೈಗೊಳ್ಳುವಂತೆ ಬಿಬಿಎಂಪಿಗೆ ಎಚ್ಚರಿಕೆ ನೀಡಿದೆ.
ಆದಾಗ್ಯೂ ಬಿಬಿಎಂಪಿ, ಬಿಡಬ್ಲ್ಯುಎಸ್ ಎಸ್ ಬಿ ಇತರೆ ಇಲಾಖೆಗಳ ನಡುವಿನ ಸಮನ್ವಯತೆಯ ಕೊರತೆಯಿಂದಾಗಿ ಹದಗೆಟ್ಟಿರುವ ರಸ್ತೆಗಳಲ್ಲಿ ವಾಹನ ಸವಾರರು ನರಕಯಾತನೆ ಅನುಭವಿಸುವಂತಾಗಿದೆ. ಪ್ರತಿನಿತ್ಯ ಇಲ್ಲಿ ಅಪಘಾತಗಳು ಸಂಭವಿಸುತ್ತಿವೆ. ಎರಡು ತಿಂಗಳಿಂದೀಚೆಗೆ ಅಬಕಾರಿ ಅಕಾರಿ ಕೃಷ್ಣಪ್ಪ ಸೇರಿದಂತೆ ಐದಾರು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ ಎಂದು ಸ್ಥಳೀಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Articles You Might Like

Share This Article