ಬೆಂಗಳೂರು, ಸೆ.19- ತನ್ನ ಮಾನ ಕಳೆದ ಪ್ರಿಯತಮನನ್ನು ಕೊಲೆ ಮಾಡಿದ ಆರೋಪದ ಮೇಲೆ ಪ್ರಿಯತಮೆ ಸೇರಿದಂತೆ ಮೂವರನ್ನು ಬೇಗೂರು ಠಾಣೆ ಪೊಲೀಸರು ಬಂಧಿಸಿದ್ದಾರೆ. ಪ್ರತಿಷಾ ಮತ್ತು ಈಕೆಯ ಸ್ನೇಹಿತರಾದ ಸುಶಿಲ್, ಗೌತಮ್ ಬಂಧಿತ ಆರೋಪಿಗಳು. ಮತ್ತೊಬ್ಬ ಆರೋಪಿ ಸೂರ್ಯ ಎಂಬಾತ ತಲೆಮರೆಸಿಕೊಂಡಿದ್ದಾನೆ.
ಉಕ್ರೇನ್‍ನಲ್ಲಿ ವೈದ್ಯಕೀಯ ಶಿಕ್ಷಣ ಮುಗಿಸಿದ್ದ ಡಾ.ವಿಕಾಸ್ ಚೆನ್ನೈನಲ್ಲಿ ವೃತ್ತಿ ಮಾಡಿಕೊಂಡಿದ್ದರು. ಪ್ರತಿಷಾ ಹಾಗೂ ವಿಕಾಸ್ ಪರಸ್ಪರ ಪ್ರೀತಿಸುತ್ತಿದ್ದರು. ಇವರಿಬ್ಬರ ಮದುವೆಗೆ ಎರಡು ಕುಟುಂಬದವರಿಂದಲೂ ಒಪ್ಪಿಗೆ ಸಿಕ್ಕಿತ್ತು. ಈ ನಡುವೆ ಪ್ರತಿಷಾಳ ಅಶ್ಲೀಲ ಫೋಟೋಗಳನ್ನು ವಿಕಾಸ್ ಸೆರೆ ಹಿಡಿದು ಸಾಮಾಜಿಕ ಜಾಲತಾಣಗಳಲ್ಲಿ ಅವುಗಳನ್ನು ಫೋಸ್ಟ್ ಮಾಡಿದ್ದನು.
ಇದೇ ವಿಚಾರಕ್ಕೆ ಆತನೊಂದಿಗೆ ಜಗಳ ಮಾಡಿಕೊಂಡಿದ್ದರು. ಪ್ರೀತಿಸಿದವನೆ ನನಗೆ ಮೋಸ ಮಾಡಿ, ನನ್ನ ಮಾನ ಕಳೆದನೆಂದು ಕೋಪಗೊಂಡು ಈ ವಿಷಯವನ್ನು ತನ್ನ ಸ್ನೇಹಿತರ ಜೊತೆ ಹೇಳಿ ಕೊಂಡಿದ್ದಳು.
ಆತನನ್ನು ಕೊಲೆ ಮಾಡಲು ಸಂಚು ರೂಪಿಸಿ ಸೆ.9ರಂದು ವಿಕಾಸ್‍ನನ್ನು ನ್ಯೂ ಮೈಕೋ ಲೇಔಟ್ 17ನೆ ಮುಖ್ಯರಸ್ತೆಯಲ್ಲಿರುವ ತನ್ನ ಮನೆಗೆ ಕೆರೆಸಿಕೊಂಡ ಪ್ರತಿಷಾ ತನ್ನ ಸ್ನೇಹಿತರ ಜೊತೆ ಸೇರಿ ಕೈಗಳಿಂದ ಹಾಗೂ ಮನೆ ಸ್ವಚ್ಛಗೊಳಿಸುವ ಮಾಪ್‍ನಿಂದ ಮತ್ತು ವಾಟರ್ ಬಾಟಲ್‍ಗಳಿಂದ ಮನಬಂದಂತೆ ಹಲ್ಲೆ ನಡೆಸಿ ಕೊಲೆ ಮಾಡಿದ್ದರು.
ಈ ಬಗ್ಗೆ ಬೇಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ಕೈಗೊಂಡ ಪೊಲೀಸರು ಮೂವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿ, ಹೆಚ್ಚಿನ ವಿಚಾರಣೆಗಾಗಿ ಪೊಲೀಸ್ ವಶಕ್ಕೆ ಪಡೆದು ಕುಲಂಕುಷವಾಗಿ ವಿಚಾರಣೆ ಮಾಡಿದಾಗ ಆರೋಪಿಗಳು ವೈದ್ಯರನ್ನು ಕೊಲೆ ಮಾಡಿರುವುದು ಬೆಳಕಿಗೆ ಬಂದಿದೆ.
ಆಗ್ನೇಯ ವಿಭಾಗದ ಉಪ ಪೊಲೀಸ್ ಆಯುಕ್ತರಾದ ಸಿ.ಕೆ. ಬಾಬಾ, ಎಲೆಕ್ಟ್ರಾನಿಕ್ ಸಿಟಿ ಉಪವಿಭಾಗದ ಎಸಿಪಿ ಸುಧಾಕರ್ ಅವರ ನೇತೃತ್ವದಲ್ಲಿ ಇನ್ಸ್‍ಪೆಕ್ಟರ್ ಅನಿಲ್‍ಕುಮಾರ್ ಅವರನ್ನೊಳಗೊಂಡ ತಂಡ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.