ಹಣಕ್ಕಾಗಿ ಮಹಿಳೆ ಕೊಲೆ ; ಮೂವರ ಸೆರೆ

Spread the love

ಬೆಂಗಳೂರು,ಏ.30- ಮಹಿಳೆಯ ಬಳಿ ಹೆಚ್ಚಿನ ಹಣ ಇರಬಹುದೆಂದು ಆಕೆಯನ್ನು ಕೊಲೆ ಮಾಡಿ ತಲೆಮರೆಸಿಕೊಂಡಿದ್ದ ಮೂವರನ್ನು ವರ್ತೂರು ಠಾಣೆ ಪೊಲೀಸರು ಬಂಧಿಸಿದ್ದಾರೆ. ಕಿರಣ್‍ಕುಮಾರ್(35), ಶೇಖ್ ಇಮ್ರಾನ್(23) ಮತ್ತು ವೆಂಕಟೇಶ್(52) ಬಂಧಿತ ಆರೋಪಿಗಳು.

ಬಾಲಾಜಿ ಎಂಬುವರ ಅಣ್ಣನ ಮಗಳಾದ ಸುನೀತ ಎಂಬುವರಿಗೆ ವಯಸ್ಸಾಗಿದ್ದು, ನಡೆಯಲು ಕಷ್ಟವಾಗುತ್ತಿದ್ದ ಕಾರಣ ಸುನೀತ ಎಲ್ಲಿಗಾದರೂ ಹೋಗಬೇಕಾದರೆ ಕಿರಣ್ ಮತ್ತು ಆತನ ಸ್ನೇಹಿತರಾದ ಇಮ್ರಾನ್ ಮತ್ತು ವೆಂಕಟೇಶ್ ಎಂಬುವರ ಸಹಾಯ ಪಡೆಯುತ್ತಿದ್ದರು.

ಸುನೀತ ಅವರು ಒಂಟಿಯಾಗಿ ಓಡಾಡುತ್ತಿದ್ದರಿಂದ ಅವರ ಬಳಿ ಹೆಚ್ಚಿನ ಹಣ ಇರಬಹುದೆಂದು ತಿಳಿದು ಹಣದ ಆಸೆಗಾಗಿ
ಅವರನ್ನು ಕೊಲೆ ಮಾಡಿದ್ದಾರೆ. ಈ ಬಗ್ಗೆ ಬಾಲಾಜಿ ಅವರು ಕಿರಣ್ ಮತ್ತು ಅವರ ಸ್ನೇಹಿತರ ಮೇಲೆ ಅನುಮಾನ ವ್ಯಕ್ತಪಡಿಸಿ ವರ್ತೂರು ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿ ವಿಚಾರಣೆಗೊಳಪಡಿಸಿದಾಗ ಕೊಲೆ ಮಾಡಿರುವುದು ಕಂಡುಬಂದಿದೆ. ಇನ್‍ಸ್ಪೆಕ್ಟರ್ ಸೋಮಶೇಖರ್ ಅವರನ್ನೊಳಗೊಂಡ ತಂಡ ಈ ಕಾರ್ಯಾಚರಣೆ ಕೈಗೊಂಡಿತ್ತು.

Facebook Comments