Saturday, September 23, 2023
Homeಇದೀಗ ಬಂದ ಸುದ್ದಿವೃದ್ಧೆ ಕೊಲೆ ಮಾಡಿ ಆಭರಣ ದೋಚಿದ್ದ: ಮೂವರು ಹಂತಕರ ಸೆರೆ

ವೃದ್ಧೆ ಕೊಲೆ ಮಾಡಿ ಆಭರಣ ದೋಚಿದ್ದ: ಮೂವರು ಹಂತಕರ ಸೆರೆ

- Advertisement -

ಬೆಂಗಳೂರು, ಜೂ.2- ಬಾಡಿಗೆಗೆ ಮನೆ ಕೇಳುವ ನೆಪದಲ್ಲಿ ಮನೆಗೆ ನುಗ್ಗಿ ಒಂಟಿಯಾಗಿ ವಾಸವಿದ್ದ ವೃದ್ಧೆಯನ್ನು ಕೊಲೆ ಮಾಡಿ ಆಭರಣಗಳನ್ನು ದೋಚಿ ಪರಾರಿಯಾಗಿದ್ದ ಪ್ಲಂಬರ್ ಸೇರಿದಂತೆ ಮೂವರನ್ನು ಮಹಾಲಕ್ಷ್ಮೀ ಲೇಔಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಪ್ಲಂಬರ್ ಕೆಲಸ ಮಾಡುತ್ತಿದ್ದ ಅಶೋಕ್(40), ಸ್ನೇಹಿತರಾದ ಸಿದ್ದರಾಜು(34) ಮತ್ತು ಅಂಜನಾ ಮೂರ್ತಿ(33) ಬಂಧಿತ ಆರೋಪಿಗಳು. ಆರೋಪಿ ಸಿದ್ದರಾಜು ಈ ಮೊದಲು ಆಟೋ ಚಾಲಕ ವೃತ್ತಿ ಮಾಡುತ್ತಿದ್ದನು. ಇದೀಗ ಕೂಲಿ ಕೆಲಸ ಮಾಡಿಕೊಂಡಿದ್ದನು. ಅಂಜನಾ ಮೂರ್ತಿ ಆಟೋ ಚಾಲಕನಾಗಿದ್ದು, ಅಶೋಕ್ ಪ್ಲಂಬಿಂಗ್ ಕೆಲಸ ಮಾಡಿಕೊಂಡಿದ್ದಾನೆ.

- Advertisement -

ಮಹಾಲಕ್ಷ್ಮೀ ಪುರಂ ವೆಸ್ಟ್ ಆಫ್ ಕಾರ್ಡ್ ರಸ್ತೆ, 2ನೇ ಹಂತ, 12ನೇ ಕ್ರಾಸ್ 4ನೇ ರಸ್ತೆಯಲ್ಲಿನ ಮನೆಯಲ್ಲಿ ಕಮಲ ಎನ್. ರಾವ್(82) ಎಂಬುವರು ಒಂಟಿಯಾಗಿ ವಾಸವಿದ್ದರು. ಇವರ ಮನೆಗೆ ಮೂರು ತಿಂಗಳ ಹಿಂದೆ ಪ್ಲಂಬಿಂಗ್ ಕೆಲಸ ಮಾಡಲು ಆರೋಪಿ ಅಶೋಕ್ ಬಂದಿದ್ದಾಗ ಒಬ್ಬರೇ ಇರುವುದು ಗಮನಿಸಿ ಇವರ ಬಳಿ ಹೆಚ್ಚು ಬಂಗಾರವಿರುತ್ತದೆ. ಅದನ್ನು ದೋಚಿದರೆ ಸಾಲ ತೀರಿಸಿ ನೆಮ್ಮದಿ ಜೀವನ ರೂಪಿಸಿಕೊಳ್ಳಬಹುದೆಂದು ಯೋಚಿಸಿದ್ದಾನೆ.

ಸಿಎಂ ಸಿದ್ಧರಾಮಯ್ಯರನ್ನು ಭೇಟಿಯಾದ ಕೆಂಪಣ್ಣ ನೇತೃತದ ನಿಯೋಗ

ಈ ವಿಷಯವನ್ನು ಸ್ನೇಹಿತರಾದ ಸಿದ್ದರಾಜು ಹಾಗೂ ಅಂಜನಾ ಮೂರ್ತಿಗೆ ತಿಳಿಸಿದಾಗ ಅವರೂ ಸಹ ಈತನ ಸಂಚಿಗೆ ಒಪ್ಪಿಗೆ ಸೂಚಿಸಿದ್ದಾರೆ. ಅದರಂತೆ ಸಂಚು ರೂಪಿಸಿಕೊಂಡು ಕಮಲ ಅವರ ಮನೆ ಬಳಿ ಎರಡು- ಮೂರು ದಿನ ಓಡಾಡಿ ಅವರ ಮನೆಗೆ ಯಾರಾದರೂ ಬರುತ್ತಾರೆಯೇ ಎಂದು ಗಮನಿಸಿದ್ದಾರೆ.

ಮೇ 27ರಂದು ಬೆಳಗ್ಗೆ ಈ ಮೂವರು ಕಮಲ ಅವರಿಗೆ ಸೇರಿದ ಕಾರ್ಶೆಡ್ನ್ನು ಬಾಡಿಗೆಗೆ ಕೇಳುವ ನೆಪದಲ್ಲಿ ಅವರ ಮನೆಗೆ ಹೋಗಿದ್ದಾರೆ. ಕಮಲ ಅವರು ಬಾಗಿಲು ತೆಗೆದಾಗ ಕಾರ್ ಶೆಡ್ನ್ನು ಬಿಸ್ಕೇಟ್ ಗೋದಾಮು ಮಾಡಿಕೊಳ್ಳುವುದಾಗಿ ಬಾಡಿಗೆಗೆ ಕೇಳಿದಾಗ ಕೊಡುವುದಿಲ್ಲ ಎಂದು ಹೇಳಿ ಕಳುಹಿಸಿದ್ದಾರೆ.

ಮತ್ತೆ ಸಂಜೆ 4 ಗಂಟೆ ಸುಮಾರಿಗೆ ಸಿದ್ದರಾಜು ಮತ್ತು ಅಂಜನಾ ಮೂರ್ತಿ ಹೋಗಿ ಕಾಲಿಂಗ್ ಬೆಲ್ ಒತ್ತಿದ್ದಾರೆ. ಬೆಳಗ್ಗೆ ಬಂದವರೇ ಮತ್ತೆ ಬಂದಿದ್ದಾರೆ ಎಂದು ಕಮಲ ಅವರು ಬಾಗಿಲು ತೆಗೆಯುತ್ತಿದ್ದಂತೆ ಕಮಲ ಅವರನ್ನು ತಳ್ಳಿಕೊಂಡು ಒಳಗೆ ಹೋಗಿ ಕೈಗಳನ್ನು ಸೀರೆಯಿಂದ ಕಟ್ಟಿ ಬಾಯಿಗೆ ಬಟ್ಟೆ ತುರುಕಿ ಉಸಿರುಗಟ್ಟಿಸಿ ಕೊಲೆ ಮಾಡಿ ಅವರ ಮೈಮೇಲಿದ್ದ 40 ಗ್ರಾಂ ತೂಕದ 2 ಚಿನ್ನದ ಸರಗಳು ಹಾಗೂ 2 ಚಿನ್ನದ ಬಳೆಗಳನ್ನು ದೋಚಿ ಪರಾರಿಯಾಗಿದ್ದರು.

ಈ ಘಟನೆಯಿಂದ ಸುತ್ತ-ಮುತ್ತಲಿನ ನಿವಾಸಿಗಳು ಭಯಭೀತರಾಗಿದ್ದಾರೆ. ಸುದ್ದಿ ತಿಳಿದು ಸ್ಥಳಕ್ಕೆ ಬಂದ ಕಮಲ ಅವರ ಮಗ ಗುರುಪ್ರಸಾದ್ ಅವರು ಘಟನೆ ಬಗ್ಗೆ ಮಹಾಲಕ್ಷ್ಮೀ ಲೇಔಟ್ ಠಾಣೆ ಪೊಲೀಸರಿಗೆ ದೂರು ನೀಡಿದ್ದರು.

ಪ್ರಕರಣ ದಾಖಲಿಸಿಕೊಂಡ ಪೊಲೀಸರು ಕಮಲ ಅವರ ಮನೆಯ ಸುತ್ತ- ಮುತ್ತಲಿನ ರಸ್ತೆಯಲ್ಲಿರುವ ಸಿಸಿ ಟಿವಿಗಳನ್ನು ಪರಿಶೀಲಿಸಿದ್ದಾರೆ. ಆರೋಪಿಗಳ ಬಂಧನಕ್ಕೆ ವಿಶೇಷ ತಂಡ ರಚಿಸಲಾಗಿತ್ತು.

ವೃದ್ಧೆ ಕಮಲ ಅವರನ್ನು ಕೊಲೆ ಮಾಡಿ ಆಭರಣ ದೋಚಿಕೊಂಡು ಆರೋಪಿಗಳು ಮೈಸೂರಿಗೆ ಪರಾರಿಯಾಗಿದ್ದಾರೆ ಎಂಬ ಮಾಹಿತಿ ಪೊಲೀಸರಿಗೆ ಲಭಿಸಿದೆ. ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ಮೈಸೂರಿಗೆ ತೆರಳಿ ಕಾರ್ಯಾಚರಣೆ ಕೈಗೊಂಡು ತಲೆಮರೆಸಿಕೊಂಡಿದ್ದ ಮೂವರನ್ನು ಬಂಧಿಸಿ ನಗರಕ್ಕೆ ಕರೆ ತಂದು ವಿಚಾರಣೆಗೊಳಪಡಿಸಿದ್ದಾರೆ.

ಹಿಂದೂ ವಿದ್ಯಾರ್ಥಿನಿಯರಿಗೆ ಹಿಜಾಬ್ ಧಾರಣೆ

ಆರೋಪಿಗಳು ಸಾಲ ಮಾಡಿಕೊಂಡಿದ್ದು, ಹಣಕಾಸಿನ ಸಮಸ್ಯೆಗೊಳಗಾಗಿದ್ದರು. ಸಾಲದ ಹಣ ತೀರಿಸಲು ಅಪರಾಧ ಕೃತ್ಯ ಮಾಡಲು ಯೋಚಿಸುತ್ತಿದ್ದಾಗ ಅಶೋಕ್ಗೆ ಕಮಲ ಅವರ ಮನೆಯ ನೆನಪು ಬಂದಿದೆ.
ಅವರ ಮನೆಗೆ ಹೋಗಿ ಆಭರಣ ದೋಚಲು ಸಂಚು ರೂಪಿಸಿ ತನ್ನ ಗೆಳೆಯರಿಗೂ ಹೇಳಿದ್ದಾನೆ. ಎಲ್ಲರೂ ಒಪ್ಪಿಕೊಂಡು ಮೇ 27ರಂದು ಅಂದುಕೊಂಡಂತೆ ಕಮಲ ಅವರ ಮನೆಗೆ ನುಗ್ಗಿ ಅವರನ್ನು ಕೊಲೆ ಮಾಡಿ ಆಭರಣ ದೋಚಿ ಪರಾರಿಯಾಗಿದ್ದರು.

ಆಭರಣ ದೋಚಿಕೊಂಡು ಅವುಗಳನ್ನು ಮಾರಾಟ ಮಾಡಿ ಬಂದ ಹಣದಿಂದ ಸಾಲವನ್ನು ತೀರಿಸಿ ಉಳಿದ ಹಣವನ್ನು ಹಂಚಿಕೊಂಡಿರುವುದಾಗಿ ವಿಚಾರಣೆ ವೇಳೆ ಪೊಲೀಸರ ಮುಂದೆ ಬಾಯ್ಬಿಟ್ಟಿದ್ದಾರೆ.
ಈ ಕಾರ್ಯಾಚರಣೆಯನ್ನು ಮಹಾಲಕ್ಷ್ಮೀ ಲೇಔಟ್ ಠಾಣೆ ಇನ್ಸ್ಪೆಕ್ಟರ್ ರಾಜು ಹಾಗೂ ಸಿಬ್ಬಂದಿ ಕೈಗೊಂಡು ಆರೋಪಿಗಳ ಹೆಡೆಮುರಿ ಕಟ್ಟುವಲ್ಲಿ ಯಶಸ್ವಿಯಾಗಿದ್ದಾರೆ.

woman, #murder, #Three, #arrested,

- Advertisement -
RELATED ARTICLES
- Advertisment -

Most Popular