Friday, October 4, 2024
Homeರಾಜ್ಯಚೂರಿ ಇರಿದು ಪರಾರಿಯಾಗಲು ಯತ್ನಿಸಿದವನಿಗೆ ಪೊಲೀಸರ ಗುಂಡೇಟು..

ಚೂರಿ ಇರಿದು ಪರಾರಿಯಾಗಲು ಯತ್ನಿಸಿದವನಿಗೆ ಪೊಲೀಸರ ಗುಂಡೇಟು..

ಹುಬ್ಬಳ್ಳಿ,ಸೆ.26- ತಾನು ಪ್ರೀತಿಸುತ್ತಿದ್ದ ಯುವತಿ ತಾಯಿಗೆ ಚಾಕುವಿನಿಂದ ಇರಿದಿದ್ದ ಪ್ರಕರಣದಲ್ಲಿ ಬಂಧನಕ್ಕೊಳಗಾದ ಆರೋಪಿಯನ್ನು ಸ್ಥಳ ಮಹಜರಿಗೆ ಕರೆದೊಯ್ಯುತ್ತಿದ್ದಾಗ ಸಿಬ್ಬಂದಿ ಮೇಲೆಯೇ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ ಆರೋಪಿ ಪೊಲೀಸರ ಗುಂಡೇಟಿನಿಂದ ಗಾಯಗೊಂಡು ಸಿಕ್ಕಿ ಬಿದಿದ್ದಾನೆ. ಆರೋಪಿ ಮಹೇಶ ಮೇಟಿ ಗುಂಡೇಟಿನಿಂದ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

ಲೋಹಿಯಾ ನಗರದ ನಿವಾಸಿ ನೀಲಾ ಅವರಿಗೆ ನಾಲ್ಕು ಮಂದಿ ಮಕ್ಕಳಿದ್ದು, ಒಬ್ಬ ಮಗಳನ್ನು ಆರೋಪಿ ಪ್ರೀತಿಸುತ್ತಿದ್ದನು. ಆದರೆ ಯುವತಿ ಹಾಗೂ ಆಕೆಯ ತಾಯಿಗೂ ಇಷ್ಟವಿರಲಿಲ್ಲ. ಆದರೂ ಆರೋಪಿ ಮಹೇಶ ಇವರ ಮನೆಗೆ ಹೋಗಿ ತಮ ಮಗಳನ್ನು ಮದುವೆ ಮಾಡಿಕೊಡುವಂತೆ ನೀಲಾ ಅವರನ್ನು ಪೀಡಿಸಿದ್ದಾನೆ. ಮಹೇಶನಿಗೆ ಬುದ್ದಿವಾದ ಹೇಳಿದ್ದಕ್ಕೆ ಕೋಪಗೊಂಡು ಯುವತಿಯ ತಾಯಿ ನೀಲಾ ಅವರಿಗೆ ಚಾಕುವಿನಿಂದ ಇರಿದು ಪರಾರಿಯಾಗಿದ್ದನು.

ಚಾಕು ಇರಿತದಿಂದ ಗಂಭೀರ ಗಾಯಗೊಂಡಿರುವ ನೀಲಾ ಅವರನ್ನು ಕಿಮ್ಸೌ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ.
ಸುದ್ದಿ ತಿಳಿದು ಘಟನಾ ಸ್ಥಳಕ್ಕೆ ಹಿರಿಯ ಪೊಲೀಸರು ಭೇಟಿ ನೀಡಿ ಮಾಹಿತಿ ಪಡೆದಿದಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಘಟನೆ ಕುರಿತು ಮಾಹಿತಿ ಪಡೆದು ಆರೋಪಿಯ ಬಂಧನಕ್ಕೆ ಬಲೆ ಬೀಸಿ ನಿನ್ನೆ ಸಂಜೆ ಕೊನೆಗೂ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ವಿಚಾರಣೆ ವೇಳೆ ಈ ಕೃತ್ಯ ಎಸಗಿ ಪರಾರಿಯಾಗಲು ಸ್ನೇಹಿತರ ಬಳಿ ಹಣ ಪಡೆದಿರುವುದಾಗಿ ಆರೋಪಿ ಪೊಲೀಸರಿಗೆ ತಿಳಿಸಿದ್ದು, ನಂತರ ಸ್ನೇಹಿತರನ್ನು ತೋರಿಸುವುದಾಗಿ ಹೇಳಿದ್ದಾನೆ. ಪೊಲೀಸರು ಆತನನ್ನು ಸ್ಥಳ ಮಹಜರಿಗೆ ಕರೆದುಕೊಂಡು ಹೋದ ಸಂದರ್ಭದಲ್ಲಿ ಪೊಲೀಸರ ಮೇಲೆಯೇ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ್ದಾನೆ.

ಆ ಸಂದರ್ಭದಲ್ಲಿ ಹಳೇ ಹುಬ್ಬಳ್ಳಿ ಇನ್‌ಸ್ಪೆಕ್ಟರ್‌ ಸುರೇಶ ಯಳ್ಳೂರು ಅವರು ಗಾಳಿಯಲ್ಲಿ ಒಂದು ಸುತ್ತು ಗುಂಡು ಹಾರಿಸಿ ಶರಣಾಗುವಂತೆ ಎಚ್ಚರಿಸಿದರಾದರೂ ಪೊಲೀಸರ ಮಾತಿಗೆ ಕಿವಿಗೊಡದೆ ಮತ್ತೆ ಹಲ್ಲೆಗೆ ಯತ್ನಿಸಿದಾಗ ಇನ್‌ಸ್ಪೆಕ್ಟರ್‌ ಹಾರಿಸಿದ ಗುಂಡು ಆರೋಪಿ ಕಾಲಿಗೆ ತಗುಲಿ ಕುಸಿದುಬಿದಿದ್ದಾನೆ. ತಕ್ಷಣ ಪೊಲೀಸರು ಆತನನ್ನು ಸುತ್ತುವರೆದು ವಶಕ್ಕೆ ಪಡೆದು ಚಿಕಿತ್ಸೆಗೆ ದಾಖಲಿಸಿದ್ದಾರೆ.
ಕಾರ್ಯಾಚರಣೆ ವೇಳೆ ಹಳೇ ಹುಬ್ಬಳ್ಳಿ ಇನ್‌ಸ್ಪೆಕ್ಟರ್‌ ಸುರೇಶ ಹಾಗೂ ಸಿಬ್ಬಂದಿ ಗಾಯಗೊಂಡಿದ್ದು ಅವರು ಸಹ ಕಿಮ್ಸೌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

RELATED ARTICLES

Latest News