“ತಾಕತ್ತಿದ್ರೆ ನನ್ನ ಹಿಡಿಯಿರಿ” ಎಂದು ಪೊಲೀಸರಿಗೆ ಸವಾಲ್ ಹಾಕಿ ಸಿಕ್ಕಿಬಿದ್ದ ಕಾಮುಕ..!

Social Share

ಬೆಂಗಳೂರು,ಮಾ.5- ಮಹಿಳಾ ವಕೀಲರು, ಪೊಲೀಸ್ ಅಧಿಕಾರಿಗಳು ಸೆರಿ 100ಕ್ಕೂ ಹೆಚ್ಚು ಮಹಿಳೆಯರಿಗೆ ಕದ್ದ ಮೊಬೈಲ್‍ಗಳಿಂದ ಅಶ್ಲೀಲ ಸಂದೇಶ ಕಳುಹಿಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿ ಕಿರುಕುಳ ನೀಡುವುದರ ಜೊತೆಗೆ ತಾಕತ್ತಿದ್ದರೆ ನನ್ನನ್ನು ಹಿಡಿಯಿರಿ ಎಂದು ಪೊಲೀಸರಿಗೆ ನೇರ ಸವಾಲು ಹಾಕಿದ್ದ ಖತರ್ನಾಕ್ ಆರೋಪಿ ಸಿಕ್ಕಿಬಿದ್ದಿದ್ದಾನೆ.
ತುಮಕೂರು ಜಿಲ್ಲೆ ಮಧುಗಿರಿ ತಾಲ್ಲೂಕು ಕೊಡಿಗೆಹಳ್ಳಿ ಹೋಬಳಿ, ಮೈದುನಹಳ್ಳಿ ಗ್ರಾಮದ ಕೃಷ್ಣ ಅಲಿಯಾಸ್ ರಾಮಕೃಷ್ಣ ಅಲಿಯಾಸ್ ಮಂಜುನಾಥ ಅಲಿಯಾಸ್ ಚೂಲ್‍ಮಂಜ ಅಲಿಯಾಸ್ ಸೈಕೋ ಮಂಜ ಅಲಿಯಾಸ್ ಪ್ರಶಾಂತ ಅಲಿಯಾಸ್ ಪ್ರವೀಣ ಅಲಿಯಾಸ್ ದಿವ್ಯರಾಜ್(37) ಎಂಬಾತನನ್ನು ಬೆಂಗಳೂರಿನ ಪಶ್ಚಿಮ ವಿಭಾಗದ ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಈತನ ವಿರುದ್ಧ ಬೆಂಗಳೂರಿನ ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ 6, ಸಿಟಿ ಮಾರುಕಟ್ಟೆ , ಸಿಟಿ ರೈಲ್ವೆ , ವಿದ್ಯಾರಣ್ಯಪುರ, ಹಲಸೂರುಗೇಟ್ ಪೊಲೀಸ್ ಠಾಣೆಗಳಲ್ಲಿ ತಲಾ ಒಂದು, ಜಾಲಹಳ್ಳಿ ಹಗೂ ತುಮಕೂರಿನ ಮಹಿಳಾ ಪೊಲೀಸ್ ಠಾಣೆಯಲ್ಲಿ ತಲಾ ಎರಡು ಪ್ರಕರಣಗಳು ಸೇರಿ ಒಟ್ಟು 14 ಪ್ರಕರಣಗಳು ದಾಖಲಾಗಿವೆ.
ಆರೋಪಿ ವಿಕೃತ ಮನಸ್ಥಿತಿ ಹೊಂದಿದ್ದು, ವಕೀಲರಿಗೆ ಕರೆ ಮಾಡಿ ತಮ್ಮ ಕಡೆಯವರಿಗೆ ತುರ್ತಾಗಿ ಜಾಮೀನು ಕೊಡಿಸಬೇಕೆಂದು ಮಹಿಳಾ ವಕೀಲರ ಮೊಬೈಲ್ ನಂಬರ್ ಪಡೆದುಕೊಳ್ಳುತ್ತಿದ್ದ. ಪೊಲೀಸ್ ಠಾಣೆಗೆ ಕರೆ ಮಾಡಿ ದೂರು ದಾಖಲಿಸಬೇಕೆಂದು ಹೇಳಿ ಮಹಿಳಾ ಪೊಲೀಸ್ ಅಧಿಕಾರಿಗಳ ಮೊಬೈಲ್ ನಂಬರ್ ಪಡೆದುಕೊಳ್ಳುತ್ತಿದ್ದ. ನಂತರ ಅವರಿಗೆ ಅಶ್ಲೀಲ ವಿಡಿಯೋ ಮತ್ತು ಫೋಟೋಗಳನ್ನು ಕಳುಹಿಸಿ ಹಿಂಸೆ ನೀಡುವ ಜೊತೆಗೆ ಕರೆ ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಕಿರುಕುಳ ನೀಡುತ್ತಿದ್ದ.
ಸುಮಾರು 6 ತಿಂಗಳಿನಿಂದ ಈತನನ್ನು ಬಂಧಿಸಲು ತುಮಕೂರು ಹಾಗೂ ಹಲಸೂರು ಗೇಟ್ ಠಾಣೆಗಳ ಪೊಲೀಸರು ತಂಡಗಳನ್ನು ರಚಿಸಿ ಕಾರ್ಯಾಚರಣೆ ನಡೆಸುತ್ತಿದ್ದರು. ತಂಡದ ಅಧಿಕಾರಿಗಳಿಗೆ ಕರೆ ಮಾಡಿ ತಾಕತ್ತಿದ್ದರೆ ಬಂಧಿಸಿ ಎಂದು ಅವಾಜ್ ಹಾಕಿ ಸವಾಲು ಎಸೆದಿದ್ದ ಎಂದು ಪಶ್ಚಿಮ ವಿಭಾಗದ ಡಿಸಿಪಿ ಡಾ.ಸಂಜೀವ್ ಪಾಟೀಲ್ ತಿಳಿಸಿದ್ದಾರೆ.
ಆರೋಪಿಯ ಪತ್ತೆಗಾಗಿ ನೇಮಿಸಿದ್ದ ಪೊಲೀಸರು ಕಠಿಣ ಶ್ರಮಪಟ್ಟು ಮಾ.2ರಂದು ಆರೋಪಿಯನ್ನು ಬಂಧಿಸಿದ್ದಾರೆ. ವಿಚಾರಣೆ ವೇಳೆ ಮತ್ತಷ್ಟು ವಿಷಯಗಳನ್ನು ಬಾಯ್ಬಿಟ್ಟಿದ್ದಾನೆ. ತಮಗೆ ಸ್ಪಂದಿಸದೆ ಇದ್ದ ಮಹಿಳೆಯರಿಗೆ ಪದೇ ಪದೇ ಕರೆ ಮಾಡಿ ಅಶ್ಲೀಲವಾಗಿ ಮಾತನಾಡುವ ಜೊತೆಗೆ ಪ್ರಾಣಬೆದರಿಕೆ ಹಾಕಿ ಬ್ಲಾಕ್‍ಮೇಲ್ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ ಎಂದು ಹೇಳಿದ್ದಾರೆ.

Articles You Might Like

Share This Article