ಬೆಂಗಳೂರು,ಫೆ.8-ಬಿಜೆಪಿ ಶಾಸಕ ರಾಜ್‍ಕುಮಾರ್ ಪಾಟೀಲ ತೇಲ್ಕೂರ ಬ್ಲಾಕ್‍ಮೇಲ್ ಪ್ರಕರಣ ಕುರಿತಂತೆ ಮಹಿಳಾ ಆಯೋಗ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿದೆ. ಶಾಸಕ ರಾಜ್‍ಕುಮಾರ್ ವಿರುದ್ಧ 40 ವರ್ಷದ ಮಹಿಳೆ ಕಿರುಕುಳ ಆರೋಪ ಮಾಡಿರುವುದನ್ನು ಗಂಭೀರವಾಗಿ ಪರಿಗಣಿಸಿ ನಾವು ಸುಮೋಟೊ ಪ್ರಕರಣ ದಾಖಲಿಸಿಕೊಂಡಿದ್ದೇವೆ ಎಂದು ಮಹಿಳಾ ಆಯೋಗದ ಅಧ್ಯಕ್ಷೆ ಪ್ರಮೀಳಾ ನಾಯ್ಡು ತಿಳಿಸಿದ್ದಾರೆ.
ಶಾಸಕರ ವಿರುದ್ಧ ದೂರು ನೀಡಿರುವ ಮಹಿಳೆಗೆ ರಕ್ಷಣೆ ನೀಡುವಂತೆ ಪೊಲೀಸರಿಗೆ ಸೂಚಿಸಿದ್ದೇವೆ. ಈ ಕುರಿತಂತೆ ನಾನು ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಅವರೊಂದಿಗೆ ಮಾತನಾಡಿದ್ದೇನೆ ಎಂದು ನಾಯ್ಡು ಹೇಳಿದರು.
ರಾಜ್‍ಕುಮಾರ್ ಅವರು ನನಗೆ ಕಿರುಕುಳ ನೀಡಿದ್ದಾರೆ ಎಂದು ಸಂತ್ರಸ್ಥ ಮಹಿಳೆ ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಅವರಿಗೆ ದೂರು ನೀಡಿದ್ದಾರೆ. ಹೀಗಾಗಿ ನಾನು ಶೀಘ್ರ ಪಂತ್ ಅವರನ್ನು ಭೇಟಿಯಾಗಿ ಮಹಿಳೆ ರಕ್ಷಣೆಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿಕೊಳ್ಳುತ್ತೇನೆ ಎಂದು ಪ್ರಮೀಳಾನಾಯ್ಡು ಹೇಳಿದರು.
ಮಹಿಳೆ ನೀಡಿರುವ ದೂರಿನ ಬಗ್ಗೆ ಮತ್ತಷ್ಟು ತನಿಖೆ ನಡೆಸಿ ಪ್ರಕರಣದಲ್ಲಿ ಏನಾಗಿದೆ ಎಂಬ ಬಗ್ಗೆ ಮಾಹಿತಿ ಕಲೆ ಹಾಕಿದ ನಂತರ ಯಾವ ಸೆಕ್ಷನ್ ಅಡಿ ಕ್ರಮ ಕೈಗೊಳ್ಳಬೇಕು ಎಂಬುದನ್ನು ನಿರ್ಧರಿಸಲಾಗುವುದು ಎಂದು ಅವರು ತಿಳಿಸಿದರು. ಸದ್ಯಕ್ಕೆ, ಪ್ರಕರಣ ಕುರಿತಂತೆ ನಮ್ಮ ಆಯೋಗದಿಂದ ಮಾಡಬೇಕಾದ ಎಲ್ಲಾ ಕೆಲಸಗಳನ್ನು ಮಾಡಲಾಗಿದೆ ಎಂದು ಅವರು ವಿವರಣೆ ನೀಡಿದರು.
