ವಾಯು ಸಾರಿಗೆಯಲ್ಲೂ ಮಹಿಳಾ ಪೈಲೆಟ್‍ಗಳ ಮೇಲುಗೈ

ಬೆಂಗಳೂರು, ಜ.11- ನಾರಿಯರು ಯಾವುದಕ್ಕೂ ಅಂಜುವುದಿಲ್ಲ. ಸಾಧನೆಗೆ ಅಳುಕುವುದಿಲ್ಲ. ಇದಕ್ಕೆ ಪದೇ ಪದೇ ಅಂತಹ ಸುದ್ದಿಗಳು ಸಿಗುತ್ತಲೇ ಇರುತ್ತವೆ.  ಇಡೀ ವಿಶ್ವದಲ್ಲಿಯೇ ಕೊರೊನಾ ಸಂಕಷ್ಟದ ಸಂದರ್ಭದಲ್ಲಿ ಕಾಯಕವೇ ಕೈಲಾಸವೆಂಬಂತೆ ವೃತ್ತಿ ಬದುಕನ್ನು ಅತಿ ಹೆಚ್ಚು ಹುಮ್ಮಸ್ಸಿನಿಂದ ನಿರ್ವಹಿಸಿರುವ ಮಹಿಳೆಯರ ಸಾಲಿನಲ್ಲಿ ಈಗ ಏರ್ ಇಂಡಿಯಾದ ಮಹಿಳಾ ಪೈಲೆಟ್‍ಗಳು ಸೇರಿದ್ದಾರೆ.

ವಿದೇಶಗಳಲ್ಲಿ ನೆಲೆಸಿರುವ ಭಾರತೀಯರನ್ನು ಸುರಕ್ಷಿತವಾಗಿ ತಮ್ಮ ತಾಯ್ನಾಡಿಗೆ ಕರೆ ತರುವ ಸೇವೆಯಲ್ಲಿ ಏರ್ ಇಂಡಿಯಾದ ಸಿಬ್ಬಂದಿಗಳು ತಮ್ಮದೇ ಆದ ಪಾತ್ರ ವಹಿಸಿದ್ದಾರೆ.ಅದರಲ್ಲಿ ಮಹಿಳೆಯರೂ ಕೂಡ ಯಾವುದಕ್ಕೂ ಅಳುಕದೆ ತಮ್ಮ ಸೇವೆಯನ್ನು ಸಲ್ಲಿಸಿದ್ದಾರೆ. ಇಂದು ಬೆಳಗ್ಗೆ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸ್ಯಾನ್‍ಫ್ರಾನ್ಸಿಸ್ಕೋದಿಂದ ಆಗಮಿಸಿದ ನಾಲ್ಕು ಮಹಿಳಾ ಪೈಲೆಟ್‍ಗಳು ಹಾಗೂ 12 ಗಗನಸಖಿಯರು ಮಾಧ್ಯಮದ ಮುಂದೆ ತಮ್ಮ ಸಂತೋಷವನ್ನು ತೋಡಿಕೊಂಡರು.

ಏರ್ ಇಂಡಿಯಾ 176 ಬೋಯಿಂಗ್ 777/200 ವಿಮಾನವನ್ನು ಸ್ಯಾನ್‍ಫ್ರಾನ್ಸಿಸ್ಕೋದಿಂದ 278 ಪ್ರಯಾಣಿಕರನ್ನು ಕರೆದುಕೊಂಡು ಬೆಂಗಳೂರಿಗೆ ಬಂದಿದ್ದೇವೆ. ನಾವು ಪುರುಷರಂತೆ ಸರಿ ಸಮಾನವಾಗಿ ಯಾವುದೇ ಕೆಲಸವನ್ನಾದರೂ ಮಾಡುವ ಛಲ ಇದೆ. ಅದನ್ನು ಸಾಬೀತುಪಡಿಸುತ್ತಿದ್ದೇವೆ ಎಂದು ಕ್ಯಾಪ್ಟನ್ ಪೈಲೆಟ್‍ಗಳಾದ ಜೋಯ ಅಗರವಾಲ್, ಪಾಪಗರಿತನ್ಮಯï, ಆಕಾಂಶ ಸೋನವೇರ್, ಮತ್ತು ಶಿವಾನಿ ಮನ್ಹಾಸ್ ಹೇಳಿದರು.

ನಮಗಿದೇನು ಹೊತಲ್ಲ. 13993 ಕಿಲೋ ಮೀಟರ್ ದೂರವನ್ನು 17 ಗಂಟೆಗಳ ನಿರಂತರ ಪಯಣದ ಮೂಲಕ ಬೆಳಗ್ಗೆ 3 ಗಂಟೆಗೆ ಬಂದಿದ್ದೇವೆ. ವಾರದಲ್ಲಿ ಈ ರೀತಿ ಎರಡು ಬಾರಿ ಹಾರಾಡುತ್ತೇವೆ ಎಂದು ತಮ್ಮ ಅನುಭವ ಹಂಚಿಕೊಂಡರು. ವಿಮಾನ ನಿಲ್ದಾಣ ಸಿಬ್ಬಂದಿಗಳು ಕೂಡ ಇವರನ್ನು ಭವ್ಯವಾಗಿ ಸ್ವಾಗತಿಸಿದರು.