ಮಹಿಳೆಯರ ಆತ್ಮರಕ್ಷಣೆಗಾಗಿ ಓಬವ್ವ ಆತ್ಮರಕ್ಷಣೆ ಕಲೆ ತರಬೇತಿ : ಸಿಎಂ

Social Share

ಬೆಂಗಳೂರು, ಫೆ.6- ರಾಜ್ಯದ ಪೊಲೀಸ್ ತರಬೇತಿ ಶಾಲೆಗಳಲ್ಲಿ ಮಹಿಳೆಯರ ಆತ್ಮರಕ್ಷಣೆಗಾಗಿ ವಿಶೇಷ ತರಬೇತಿ ನೀಡಲು ಗೃಹ ಇಲಾಖೆಗೆ ಸೂಚನೆ ನೀಡಿರುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಸಂಯುಕ್ತಾಶ್ರಯದಲ್ಲಿ ವಿವಧಾನಸೌಧದ ಮುಂಭಾಗ ಹಮ್ಮಿಕೊಂಡಿದ್ದ ಓಬವ್ವ ಆತ್ಮರಕ್ಷಣಾ ಕಲೆ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಹಾಗೂ ಲೋಗೋ ಬಿಡುಗಡೆ ಮಾಡಿ ಅವರು ಮಾತನಾಡಿದರು.
ರಾಜ್ಯದಲ್ಲಿ 12 ಪೊಲೀಸ್ ತರಬೇತಿ ಶಾಲೆಗಳಿದ್ದು, ವಿಶೇಷ ತರಬೇತಿ ನೀಡುವ ಮೂಲಕ ಮಹಿಳೆಯರ ಆತ್ಮರಕ್ಷಣೆಗೆ ಸನ್ನದ್ಧರನ್ನಾಗಿ ಮಾಡಲಾಗುವುದು. ಮಹಿಳೆಯರ ಬಗ್ಗೆ ಪೂಜ್ಯ ಭಾವನೆ ಹಾಗೂ ಗೌರವವಿದ್ದರೂ ದುಷ್ಟಶಕ್ತಿಗಳು ಅಮಾನುಷವಾಗಿ ನೋಡುವ ರೀತಿಯಿಂದ ಅಮಾಯಕ ಹೆಣ್ಣು ಮಕ್ಕಳು ನೋವು ಅನುಭವಿಸುತ್ತಿರುವುದನ್ನು ಇಡೀ ದೇಶವಲ್ಲ, ವಿಶ್ವದಲ್ಲೇ ನೋಡಿದ್ದೇವೆ. ಹಲವು ಕಾನೂನು ಹಾಗೂ ಕಾರ್ಯಕ್ರಮಗಳ ಮೂಲಕ ಇಂತಹ ದುಷ್ಟಶಕ್ತಿಗಳನ್ನು ತಡೆಯುವ ಪ್ರಯತ್ನ ಮತ್ತು ಆತ್ಮ ರಕ್ಷಣೆಗೆ ಆತ್ಮವಿಶ್ವಾಸ ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಕಾನೂನು, ಶಿಕ್ಷಣ ಸೇರಿದಂತೆ ವಿವಿಧ ಇಲಾಖೆಗಳ ಹಾಗೂ ಸರ್ಕಾರ ಒಗ್ಗೂಡಿ ಮಹಿಳೆಯರ ಆತ್ಮರಕ್ಷಣೆ ಮಾಡಬೇಕಾಗಿದೆ. ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಉತ್ತಮವಾಗಿದ್ದರೂ ಮಹಿಳೆಯರ ರಕ್ಷಣೆಗೆ ಹೆಚ್ಚಿನ ಪ್ರಾಶಸ್ತ್ಯ ಕೊಡುತ್ತೇವೆ. ಈ ನಿಟ್ಟಿನಲ್ಲಿ ಓಬವ್ವ ಆತ್ಮರಕ್ಷಣೆ ಕಲೆ ತರಬೇತಿ ಉತ್ತಮವಾದುದು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
# ಉತ್ಸವ:
ಕೆಳದಿ ಚೆನ್ನಮ್ಮ, ಬೆಳವಡಿ ಮಲ್ಲಮ್ಮ ಅವರ ಉತ್ಸವವನ್ನು ಇದೇ ತಿಂಗಳು ಮಾಡುತ್ತೇವೆ. ಅವರು ಶಕ್ತಿಯ ಪ್ರೇರಣೆಯ ಸ್ವರೂಪ. ಓಬವ್ವ ಒನಕೆಯನ್ನೇ ಅಸ್ತ್ರವಾಗಿ ಬಳಸಿ ಶತ್ರು ಸೈನಿಕರನ್ನು ದಮನ ಮಾಡಿದರು. ಇದರಿಂದ ದಿನನಿತ್ಯ ವಸ್ತುಗಳನ್ನೇ ಆತ್ಮರಕ್ಷಣೆಗಾಗಿ ಬಳಸಬಹುದು ಎಂಬುದಕ್ಕೆ ಪ್ರೇರಣೆ ನೀಡಿದಂತಾಗಿದೆ ಎಂದರು.
ಸುಮಾರು 50 ಸಾವಿರ ಎನ್‍ಸಿಸಿ ಕೆಡೆಟ್‍ಗಳಿಗೆ ಮಿಲಿಟರಿ ಸಮಾನ ತರಬೇತಿ ನೀಡುವ ಉದ್ದೇಶವಿದ್ದು, ರಕ್ಷಣಾ ಸಚಿವರ ಅನುಮತಿ ಸಿಕ್ಕ ನಂತರ ಪ್ರಸಕ್ತ ಸಾಲಿನಲ್ಲಿ ತರಬೇತಿ ನೀಡಲಾಗುವುದು ಎಂದರು. ನೇತಾಜಿ ಸುಭಾಷ್‍ಚಂದ್ರ ಬೋಸ್ ಅವರ ಸ್ಮರಣಾರ್ಥ 7500 ಹೊಸ ಎನ್‍ಸಿಸಿ ಕೆಡೆಟ್‍ಗಳಿಗೆ ವಾರ್ಷಿಕ ತಲಾ 12 ಸಾವಿರ ರೂ. ನೀಡಲಾಗುವುದು. ಅಲ್ಲದೆ, 75 ಹೊಸ ಯುನಿಟ್ ಪ್ರಾರಂಭಿಸಲಾಗುವುದು ಎಂದರು.
ಭವ್ಯ ಪರಂಪರೆಯ ಇತಿಹಾಸವಿರುವ ನಮ್ಮ ನೆಲದಲ್ಲಿ ಹೋರಾಟ ಮಾಡಿದವರಿಗೆ ಪ್ರಶಂಸೆ ಮಾಡಲು ಹಿಂದೆ ಮುಂದೆ ನೋಡುತ್ತೇವೆ. ಕನ್ನಡಿಗರ ಆಸ್ಮಿತೆ, ಹೋರಾಟ, ಇತಿಹಾಸ ಮತ್ತೆ ಮರುಕಳಿಸುವಂತೆ ಪ್ರೇರಣೆ ತುಂಬುವ ಕಾಲ ಬಂದಿದೆ. ಸ್ವಾತಂತ್ರ್ಯೋತ್ಸವದ ಅಮೃತೋತ್ಸವದ ಸಂದರ್ಭದಲ್ಲಿ ಕರ್ನಾಟಕ ಅಗ್ರಮಾನ್ಯವಾಗಿರಬೇಕು. ಪ್ರತಿಯೊಬ್ಬ ನಾಗರಿಕರಿಗೆ ಕೈಗೆ ಕೆಲಸ, ಪ್ರೇರಣೆ ಕೊಡುವ ಅವಕಾಶ ಮಾಡಿಕೊಡಬೇಕಾಗಿದೆ ಎಂದು ಹೇಳಿದರು.
ವಿವಿಧ ಇಲಾಖೆಗಳ ಮೂಲಕ ಹೆಣ್ಣು ಮಕ್ಕಳು ಹಾಗೂ ಮಹಿಳೆಯರಿಗಾಗಿ ನೀಡುವ ಕಾರ್ಯಕ್ರಮವನ್ನು ಕ್ರೋಢೀಕರಿಸಿ ವಿನೂತನ ಯೋಜನೆ ಮಾಡಲಾಗುವುದು. ಜನಸಂಖ್ಯೆಯಲ್ಲಿ ಶೇ.50ರಷ್ಟಿರುವ ಮಹಿಳೆಯರು ಆರ್ಥಿಕವಾಗಿ ಸ್ವಾವಲಂಬನೆಯಾದಾಗ ಜಿಡಿಪಿ ಹೆಚ್ಚಾಗುತ್ತದೆ. ಸಾಮಾಜಿಕವಾಗಿಯೂ ಶ್ರೀಮಂತವಾಗಲು ಸಾಧ್ಯವಾಗುತ್ತದೆ ಎಂದರು.
ಆತ್ಮರಕ್ಷಣೆ ಪ್ರತಿಯೊಂದು ಜೀವ ಸಂಕುಲದ ಗುಣಧರ್ಮ. ನಮ್ಮ ರಕ್ಷಣೆಗೆ ಮೊದಲು ನಾವು ಆದ್ಯತೆ ನೀಡಿ ಆನಂತರ ಸಮಾಜಕ್ಕೆ ಒತ್ತು ಕೊಡಬೇಕು. ಆತ್ಮವಿಶ್ವಾಸವಿದ್ದಾಗ ಆತ್ಮರಕ್ಷಣೆಯನ್ನು ಸಮರ್ಥವಾಗಿ ಮಾಡಲು ಸಾಧ್ಯ. ಈ ತರಬೇತಿ ಆತ್ಮರಕ್ಷಣೆಗೆ ಟಾನಿಕ್ ಇದ್ದಂತೆ. ಹಿಂದುಳಿದ ವರ್ಗಗಳ ಮತ್ತು ಸಮಾಜ ಕಲ್ಯಾಣ ಇಲಾಖೆಯ ತಲಾ 50 ಸಾವಿರ ವಿದ್ಯಾರ್ಥಿನಿಯರಿಗೆ ತರಬೇತಿ ನೀಡಲಾಗುತ್ತದೆ.
ಒನಕೆ ಓಬವ್ವ ಅವರ ಹೆಸರಲ್ಲೇ ಶಕ್ತಿ ಅಡಗಿದೆ. ಧಾನ್ಯ ಕುಟ್ಟುವ ಒನಕೆಯಿಂದಲೇ ಶತ್ರುಗಳನ್ನು ದಮನ ಮಾಡಿ ಕೋಟೆ ರಕ್ಷಣೆ ಮಾಡಿರುವುದನ್ನು ಓದಿದ್ದೇವೆ. ಹಾಗೆಯೇ ಕನ್ನಡ ನಾಡಿನಲ್ಲಿ ಕಿತ್ತೂರು ರಾಣಿ ಚೆನ್ನಮ್ಮ, ಕೆಳದಿ ಚೆನ್ನಮ್ಮ, ಬೆಳವಡಿ ಮಲ್ಲಮ್ಮ, ಒನಕೆ ಓಬವ್ವರಂತಹವರು ಶಕ್ತಿಗಳ ಪ್ರತೀಕವಾಗಿದ್ದಾರೆ. ಪುರುಷರನ್ನು ಮೀರಿಸುವ ಶೌರ್ಯ ತೋರಿಸಿದವರು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಮಾತನಾಡಿ, ಒನಕೆ ಓಬವ್ವ ಹೆಸರಿನಲ್ಲಿ 1.80 ಲಕ್ಷ ವಿದ್ಯಾರ್ಥಿನಿಯರಿಗೆ ಆತ್ಮರಕ್ಷಣಾ ಕಲೆ ತರಬೇತಿಯನ್ನು ನುರಿತ ತರಬೇತಿದಾರರಿಂದ ನೀಡಲಾಗುವುದು. ತರಬೇತಿ ಪಡೆದ ವಿದ್ಯಾರ್ಥಿನಿಯರು ಓಬವ್ವರಂತಾಗಬೇಕು. ಅದಕ್ಕಾಗಿ ಕರಾಟೆ ತರಬೇತಿ ನೀಡಲಾಗುತ್ತಿದೆ. ಇದೇ ಕಾರ್ಯಕ್ರಮ ನಾಳೆ ಎಲ್ಲ ಜಿಲ್ಲಾ ಕೇಂದ್ರಗಳಲ್ಲೂ ಉದ್ಘಾಟನೆಯಾಗಲಿದೆ ಎಂದರು.
ಚಿಕ್ಕಬಳ್ಳಾಪುರ ಜಿಲ್ಲೆಯ ಕುಲುವೇನಹಳ್ಳಿ ಮೊರಾರ್ಜಿ ವಸತಿ ಶಾಲೆಯ ವಿದ್ಯಾರ್ಥಿನಿಯರು ಕರಾಟೆ ಪ್ರಾತ್ಯಕ್ಷಿಕೆ ನೀಡಿದರು.
ಸಚಿವ ಹಾಲಪ್ಪ ಆಚಾರ್, ವಿಧಾನ ಪರಿಷತ್ ಸದಸ್ಯರಾದ ರವಿಕುಮಾರ್, ತುಳಸಿ ಮುನಿರಾಜುಗೌಡ, ಬಿಜೆಪಿ ಮುಖಂಡ ಚಲುವಾದಿ ನಾರಾಯಣಸ್ವಾಮಿ, ಸಮಾಜ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿ ಟಿ.ಕೆ.ಅನಿಲ್‍ಕುಮಾರ್, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿ ವಿ.ರಶ್ಮಿ ಮಹೇಶ್, ಸಮಾಜ ಕಲ್ಯಾಣ ಇಲಾಖೆ ಆಯುಕ್ತ ಡಾ.ರವಿಕುಮಾರ್ ಸುರಪುರ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಆಯುಕ್ತ ಕೆ.ಎ.ದಯಾನಂದ, ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಕಾರ್ಯನಿರ್ವಾಹಕ ನಿರ್ದೇಶಕ ರಮೇಶ್ ದೇಸಾಯಿ ಮತ್ತಿತರರಿದ್ದರು.

Articles You Might Like

Share This Article