ನವದೆಹಲಿ,ಜ.29- ಮೂರು ತಿಂಗಳಿಗೂ ಹೆಚ್ಚಿನ ಗರ್ಭಿಣಿಯರನ್ನು ತಾತ್ಕಾಲಿಕವಾಗಿ ಅನರ್ಹ ಎಂದು ಪರಿಗಣಿಸಿ ಅವರನ್ನು ಹೆರಿಗೆಯಾದ ನಾಲ್ಕು ತಿಂಗಳ ಒಳಗೆ ಕೆಲಸಕ್ಕೆ ಸೇರ್ಪಡೆಗೊಳಿಸಲಾಗುವುದು ಎಂದು ನೂತನ ನಿಯಮ ಮಾಡಿರುವ ಸ್ಟೇಟ್‍ಬ್ಯಾಂಕ್ ಆಫ್ ಇಂಡಿಯಾ (ಎಸ್‍ಬಿಐ) ಈ ನಿಯಮ ವಾಪಸ್ ಪಡೆಯಬೇಕು ಎಂದು ಸೂಚಿಸಿ ದೆಹಲಿ ಮಹಿಳಾ ಆಯೋಗ (ಡಿಸಿಡಬ್ಲ್ಯೂ) ಇಂದು ನೋಟಿಸ್ ಜಾರಿ ಮಾಡಿದೆ.
ದೇಶದ ಅತಿದೊಡ್ಡ ಬ್ಯಾಂಕ್ ಆಗಿರುವ ಎಸ್‍ಬಿಐ ಈ ಬಗ್ಗೆ ತತ್‍ಕ್ಷಣದಲ್ಲಿ ಪ್ರತಿಕ್ರಿಯೆ ನೀಡಿಲ್ಲ. ಎಸ್‍ಬಿಐನ ಈ ಕ್ರಮ ತಾರತಮ್ಯದಿಂದ ಕೂಡಿದೆ ಮತ್ತು ಕಾನೂನು ಬಾಹಿರವಾಗಿದೆ. ಈ ಮಹಿಳಾ ವಿರೋಧಿ ನಿಯಮವನ್ನು ಹಿಂತೆಗೆದುಕೊಳ್ಳುವಂತೆ ನಾನು ಅವರಿಗೆ ನೋಟಿಸ್ ಕಳುಹಿಸಿದ್ದೇವೆ ಎಂದು ದೆಹಲಿ ಮಹಿಳಾ ಆಯೋಗದ ಮುಖ್ಯಸ್ಥೆ ಸ್ವಾತಿ ಮಲಿವಾಲ್ ಟ್ವೀಟ್ ಮಾಡಿದ್ದಾರೆ.
ನೋಟಿಸ್‍ನಲ್ಲಿ ಆಯೋಗವು ನೂತನ ಮಾರ್ಗಸೂಚಿಯ ಒಂದು ಪ್ರತಿ ಮತ್ತು ಇದಕ್ಕೆ ಮುನ್ನ ಜಾರಿಯಲ್ಲಿದ್ದ ಇದೇ ಬಗೆಯ ನಿಯಮಗಳ ಒಂದು ಪ್ರತಿಯನ್ನು ತನಗೆ ಸಲ್ಲಿಸಲು ಸೂಚಿಸಿದೆ. ಈ ವಿಷಯದ ಬಗ್ಗೆ ಕೈಗೊಂಡ ಕ್ರಮ ವರದಿಯನ್ನೂ ಅದು ಬಯಸಿದೆ. ಬ್ಯಾಂಕಿನ ಈ ಕ್ರಮಕ್ಕೆ ಅಖಿಲ ಭಾರತ ಎಸ್‍ಬಿಐ ಉದ್ಯೋಗಿಗಳ ಸಂಘ ಸೇರಿದಂತೆ ನಾಲ್ಕೂ ನಿಟ್ಟಿನಿಂದ ಆಕ್ರೋಶ ವ್ಯಕ್ತವಾಗಿದೆ.
