ಬೆಂಗಳೂರು,ಜ.14- ಕೊರೊನಾ ಸೋಂಕು ದೃಢ ಪಟ್ಟಿರುವುದರಿಂದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವರ್ಕ್ ಫ್ರಮ್ ಹೋಂ ಮೂಲಕ ದೈನಂದಿನ ಕರ್ತವ್ಯ ನಿರ್ವಹಣೆ ಮಾಡುತ್ತಿದ್ದು, ಆಡಳಿತ ವ್ಯವಸ್ಥೆ ಮೇಲೆ ಯಾವುದೇ ರೀತಿಯ ಪ್ರತಿಕೂಲ ಪರಿಣಾಮ ಬೀರದಂತೆ ಎಚ್ಚರಿಕೆ ವಹಿಸಿದ್ದಾರೆ.
ಕಳೆದ ಮೂರು ದಿನಗಳ ಹಿಂದೆ ಕೊರೊನಾ ಸೋಂಕು ಕಾಣಿಸಿಕೊಂಡ ನಂತರ ಹೋಂ ಐಸೋಲೇಷನ್ ಆಗಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವರ್ಕ್ ಫ್ರಮ್ ಹೋಂ ಮೂಲಕ ಕಾರ್ಯ ನಿರ್ವಹಿಸಲು ಶುರು ಮಾಡಿದ್ದಾರೆ. ಈ ಹಿಂದೆ ಎರಡು ಅಲೆಗಳ ವೇಳೆ ಅಂದಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವರ್ಕ್ ಫ್ರಮ್ ಹಾಸ್ಪಿಟಲ್ ಮೂಲಕ ಕಡತ ವಿಲೇವಾರಿ, ವರ್ಚುವಲ್ ಮೀಟಿಂಗ್ ನಡೆಸಿ ಆಡಳಿತ ನಿರ್ವಹಣೆ ಮಾಡಿದ್ದರು. ಇದೀಗ ಬೊಮ್ಮಾಯಿ ಅದೇ ಹಾದಿ ಹಿಡಿದಿದ್ದಾರೆ.
ಪ್ರತಿ ದಿನ ಮುಂಜಾನೆ ದಿನಪತ್ರಿಕೆಗಳನ್ನು ಓದುವುದರಿಂದ ಆರಂಭಗೊಳ್ಳಲಿರುವ ಸಿಎಂ ದಿನಚರಿ, ಬೆಳಗ್ಗೆ ಗೃಹ ಸಚಿವರ ಜೊತೆ ದೂರವಾಣಿ ಮೂಲಕ ಮಾತುಕತೆ ನಡೆಸಿ ಕಾನೂನು ಸುವ್ಯವಸ್ಥೆ ಸೇರಿದಂತೆ ಕೊರೊನಾ ನಿರ್ವಹಣೆ ಮಾಹಿತಿ ಪಡೆಯುತ್ತಿದ್ದಾರೆ.
ಕಂದಾಯ ಸಚಿವ ಆರ್.ಅಶೋಕ್, ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ ಅವರಿಗೆ ಕೋವಿಡ್ ಪಾಸಿಟಿವ್ ಆಗಿರುವುದರಿಂದ ಗೃಹ ಸಚಿವ ಆರಗ ಜ್ಞಾನೇಂದ್ರಗೆ ಸಿಎಂ ಹೆಚ್ಚಿನ ಅಕಾರ ನೀಡಿದ್ದು, ಅಕಾರಿಗಳ ಸಭೆ ನಡೆಸುವುದು, ಅಗತ್ಯ ಕ್ರಮ ಕೈಗೊಳ್ಳುವ ಜೊತೆಗೆ ಮಾಧ್ಯಮಗಳಿಗೆ ವಿವರ ಒದಗಿಸುವ ಜವಾಬ್ದಾರಿ ನಿರ್ವಹಿಸಿತ್ತಿದ್ದಾರೆ. ಎಲ್ಲಾ ನಿರ್ಧಾರಗಳ ಬಗ್ಗೆ ನಿರಂತರವಾಗಿ ಸಿಎಂ ಜೊತೆ ಸಮಾಲೋಚನೆ ನಡೆಸಿಯೇ ಮುಂದುವರೆಯುತ್ತಿದ್ದಾರೆ.
ಆಡಳಿಯ ಯಂತ್ರ ಸುಗಮ ಸರ್ಕಾರದ ಮುಖ್ಯ ಕಾರ್ಯದರ್ಶಿ ರವಿಕುಮಾರ್ ಜೊತೆಗೆ ದೂರವಾಣಿ ಮೂಲಕವೇ ಸಿಎಂ ಮಾತುಕತೆ ನಡೆಸಿ ಆಡಳಿತಾತ್ಮಕ ನಿರ್ಧಾರಗಳ ಕುರಿತು ಸಲಹೆ ಸೂಚನೆ ನೀಡುತ್ತಿದ್ದಾರೆ. ಇತ್ತೀಚೆಗೆ ಸಚಿವ ಸಂಪುಟ ಸಭೆ ನಡೆಸಿ ಬಹುತೇಕ ಎಲ್ಲ ಮುಖ್ಯ ಕಡತಗಳಿಗೆ ಸಹಿ ಹಾಕಿರುವ ಹಿನ್ನೆಲೆಯಲ್ಲಿ ತುರ್ತು ವಿಲೇವಾರಿ ಆಗಬೇಕಾಗಿರುವ ಕಡತಗಳು ಇಲ್ಲ ಎನ್ನಲಾಗುತ್ತಿದ್ದು, ಆಡಳಿಯ ಯಂತ್ರ ಮುಂದುವರೆಯಲು ಬೇಕಿರುವ ಎಲ್ಲ ವ್ಯವಸ್ಥೆಯನ್ನು ಸಿಎಂ ಹಾಗೂ ಸಿಎಸ್ ರವಿಕುಮಾರ್ ಮಾಡಿಕೊಂಡಿದ್ದಾರೆ.
ಪ್ರತಿ ಹಂತದಲ್ಲಿಯೂ ಸಂಪುಟ ಸದಸ್ಯರ ಜೊತೆ ಚರ್ಚಿಸಿ ನಿರ್ಧಾರಗಳನ್ನು ಸಿಎಂ ಕೈಗೊಳ್ಳುತ್ತಿದ್ದಾರೆ. ಕಾಂಗ್ರೆಸ್ ಪಾದಯಾತ್ರೆ ತಡೆ ಕುರಿತು ಹಲವು ಸುತ್ತಿನ ಸಭೆ ನಡೆಸಿ ನಂತರವೇ ಪಾದಯಾತ್ರೆ ನಿಷೇಧಿಸಿ ಆದೇಶ ಹೊರಡಿಸಲು ಸೂಚನೆ ನೀಡಿದರು.
ನಿನ್ನೆ ಬೆಳಗ್ಗೆ ಸಚಿವರ ಜೊತೆ ಸಭೆ ನಡೆಸಿ ಅಗತ್ಯ ಮಾಹಿತಿ ಪಡೆದುಕೊಂಡ ನಂತರವೇ ಸಂಜೆ ಪ್ರಧಾನಿ ಮೋದಿ ವರ್ಚುವಲ್ ಸಭೆಯಲ್ಲಿ ಸಿಎಂ ಭಾಗಿಯಾಗಿದ್ದರು.
ಅಂದು ಯಡಿಯೂರಪ್ಪ, ಇಂದು ಬೊಮ್ಮಾಯಿ ಕೋವಿಡ್ ಪಾಸಿಟಿವ್ ಆದರೂ ದೈನಂದಿನ ಕೆಲಸ ಕಾರ್ಯಕ್ಕೆ ತೊಂದರೆಯಾಗದಂತೆ ನೋಡಿಕೊಂಡು ಹೋಗುತ್ತಿದ್ದಾರೆ. ನಿರಂತರ ಸಭೆಗಳನ್ನು ನಡೆಸಿ ಸಲಹೆ ಸೂಚನೆ ನೀಡುತ್ತಾ ನಿವಾಸದಿಂದಲೇ ಆಡಳಿತ ಯಂತ್ರವನ್ನು ಬೊಮ್ಮಾಯಿ ಮುನ್ನಡೆಸುತ್ತಿದ್ದಾರೆ.
