ವಿಶ್ವಸಮುದಾಯಕ್ಕೆ ಕಂಟಕವಾದ ಆಫ್ಘಾನ್ ಬಿಕ್ಕಟ್ಟು..!

Spread the love

ಕಾಬೂಲ್, ಆ.25- ಆಫ್ಘಾನಿಸ್ತಾನದ ಬಿಕ್ಕಟ್ಟು ಅಂತಾರಾಷ್ಟ್ರೀಯ ಮಟ್ಟದಲ್ಲಿ ದೊಡ್ಡ ತಲೆನೋವಾಗಿದ್ದು, ಜಿ-7 ರಾಷ್ಟ್ರಗಳ ನಡುವೆಯೇ ಭಿನ್ನಾಭಿಪ್ರಾಯಗಳಿಗೆ ಕಾರಣವಾಗಿದೆ.ಹೊಸ ಬೆಳವಣಿಗೆಯೊಂದರಲ್ಲಿ ಆಫ್ಘಾನಿಸ್ತಾನದ ಬಿಕ್ಕಟ್ಟು ಹಾಗೂ ಅಲ್ಲಿರುವ ವಿವಿಧ ದೇಶಗಳ ಪ್ರಜೆಗಳ ಸ್ಥಳಾಂತರ ಪ್ರಕ್ರಿಯೆಗೆ ಭಾರತ  ಮುಂಚೂಣಿ ನಾಯಕತ್ವ ವಹಿಸಲು ಅವಕಾಶ ನೀಡಬೇಕು ಎಂಬ ಒತ್ತಡಗಳು ಜಿ7 ರಾಷ್ಟ್ರಗಳಲ್ಲಿ ಕೇಳಿ ಬಂದಿವೆ.

ಸುಮಾರು ಎರಡು ದಶಕಗಳ ಸುದೀರ್ಘ ಹೋರಾಟದಿಂದ ಹಿಂದೆ ಸರಿದಿರುವ ಅಮೇರಿಕ ತನ್ನ ಸೇನೆ ಹಿಂತೆಗೆತವನ್ನು ಘೋಷಿಸಿತ್ತು. ಆ ಬಳಿಕ ತಾಲಿಬಾಲಿಗಳ ಅಟ್ಟಹಾಸ ಹೆಚ್ಚಾಗಿದ್ದು, ಆ.15ರಂದು ಕಾಬೂಲನ್ನು ವಶಪಡಿಸಿಕೊಂಡಿದ್ದಾರೆ. ಆ ಮೂಲಕ ಆಫ್ಘಾನಿಸ್ತಾನದ ಪಂಜ್‍ಶೀರ್ ಪ್ರದೇಶ ಹೊರತುಪಡಿಸಿ ಉಳಿದೆಲ್ಲಾ ಭೂ ಭಾಗ ತಾಲಿಬಾನಿಗಳ ಹಿಡಿತದಲ್ಲಿವೆ.

ಪಂಜ್‍ಶೀರನ್ನು ತಮ್ಮ ಹಿಡಿತಕ್ಕೆ ತೆಗೆದುಕೊಳ್ಳಲು ತಾಲಿಬಾನಿಗಳು ಯುದ್ಧೋಪಾದಿಯ ಕಾರ್ಯಾಚರಣೆಗೆ ಮುಂದಾಗಿದ್ದರು. ಆದರೆ, ಅದಕ್ಕೆ ಸ್ಥಳೀಯ ನಾಯಕ ಅಹಮ್ಮದ್ ಮಸೂದ್ ಪ್ರತಿರೋಧ ಒಡ್ಡಿದ್ದಾರೆ. ಈ ಸಂಘರ್ಷದಲ್ಲಿ ಸಾಕಷ್ಟು ಸಾವು -ನೋವುಗಳಾಗಿದ್ದು ತಾಲಿಬಾನಿಗಳಿಗೆ ಹಿನ್ನಡೆಯಾಗಿದೆ.

ಈ ಎಲ್ಲದರ ಹೊರತಾಗಿ ಆಫ್ಘಾನಿಸ್ತಾನದಲ್ಲಿರುವ ವಿವಿಧ ದೇಶಗಳ ಪ್ರಜೆಗಳ ಸುರಕ್ಷತೆಯ ಬಗ್ಗೆ ಆತಂಕ ಕೇಳಿ ಬಂದಿದೆ. ಭಾರತ, ಇರಾನ್ ಸೇರಿದಂತೆ ವಿವಿಧ ರಾಷ್ಟ್ರಗಳ ಪ್ರಜೆಗಳನ್ನು ಸ್ಥಳಾಂತರಿಸುವ ಪ್ರಕ್ರಿಯೆಗಳಿಗೆ ತಾಲಿಬಾನಿಗಳು ಅಡ್ಡಿಪಡಿಸುತ್ತಿದ್ದಾರೆ. ಆದರೆ, ಅಮೇರಿಕಾ ಸೇರಿದಂತೆ ನ್ಯಾಟೋ ಪಡೆಗಳು ಭದ್ರತೆ ಒದಗಿಸಿ ವಿವಿಧ ದೇಶಗಳ ವಿಮಾನ ಸಂಚಾರಕ್ಕೆ ಅವಕಾಶ ನೀಡುತ್ತಿದ್ದು, ಪ್ರಜೆಗಳ ಸ್ಥಳಾಂತರ ಪ್ರಕ್ರಿಯೆ ಮುಂದುವರೆದಿದೆ.

ರಷ್ಯಾ ನಾಲ್ಕು ವಿಮಾನ ಕಳುಹಿಸಿ 500 ಪ್ರಜೆಗಳನ್ನು ಇಂದು ಸ್ಥಳಾಂತರಿಸಿದೆ. ಅದೇ ರೀತಿ ಅಮೇರಿಕಾ, ಜರ್ಮನಿ, ಭಾರತ, ಇರಾನ್, ಮೆಕ್ಸಿಕೋ ಸೇರಿದಂತೆ ವಿವಿಧ ದೇಶಗಳು ತಮ್ಮ ಪ್ರಜೆಗಳನ್ನು ವಾಪಸ್ ಕರೆಸಿಕೊಳ್ಳುತ್ತಿವೆ. ವಿದೇಶಿ ರಾಯಭಾರ ಕಚೇರಿಗಳನ್ನು ಮುಚ್ಚಲಾಗುತ್ತಿದೆ. ವಿದೇಶಗಳೊಂದಿಗೆ ವ್ಯವಹಾರಗಳನ್ನು ಸಂಪೂರ್ಣ ಸ್ಥಗಿತಗೊಳಿಸಿದ್ದೇ ಆದರೆ ಆಫ್ಘಾನಿಸ್ತಾನಕ್ಕೆ ಹಲವು ರೀತಿಯ ಸಂಕಷ್ಟಗಳು ಎದುರಾಗುವ ಆತಂಕವಿದೆ. ಹಾಗಾಗಿ ಬಹಳಷ್ಟು ವಿದೇಶಗಳ ಪ್ರಜೆಗಳನ್ನು ಆಫ್ಘಾನಿಸ್ತಾನದಲ್ಲೇ ಉಳಿಸಿಕೊಳ್ಳಲು ತಾಲಿಬಾನಿಗಳು ಬಲವಂತದ ಪ್ರಯತ್ನ ಮಾಡುತ್ತಿದ್ದಾರೆ. ನ್ಯಾಟೋ ಪಡೆಗಳು ಅದಕ್ಕೆ ಅವಕಾಶ ನೀಡುತ್ತಿಲ್ಲ.

ಈ ನಡುವೆ ಅಮೇರಿಕಾ ತನ್ನ ಎಲ್ಲಾ ಸೈನಿಕರನ್ನು ಆ.31ರೊಳಗೆ ವಾಪಸ್ ಕರೆಸಿಕೊಳ್ಳುವ ನಿರ್ಧಾರ ಮಾಡಿದೆ. ಗಡುವನ್ನು ಮತ್ತಷ್ಟು ವಿಸ್ತರಣೆ ಮಾಡುವಂತೆ ಜಿ-7 ರಾಷ್ಟ್ರಗಳು ಅಮೇರಿಕ ಅಧ್ಯಕ್ಷ ಜೋ ಬಿಡನ್ ಮೇಲೆ ಒತ್ತಡ ಹೇರುತ್ತಿವೆ. ಆದರೆ, ಅದಕ್ಕೆ ಅಮೇರಿಕ ಒಪ್ಪುತ್ತಿಲ್ಲ. ನಿಗದಿತ ಅವಧಿಯೊಳಗೆ ಆಫ್ಘಾನಿಸ್ತಾನದಲ್ಲಿರುವ ಸುಮಾರು ಆರು ಸಾವಿರ ಯೋಧರನ್ನು ವಾಪಸ್ ಕರೆಸುಕೊಳ್ಳುವುದಾಗಿ ಸ್ಪಷ್ಟಪಡಿಸಿದೆ.

ಇದಕ್ಕೂ ಮೊದಲು ತಾಲಿಬಾನಿಗಳು ಹೇಳಿಕೆಯೊಂದನ್ನು ನೀಡಿ ಆ.31ರ ಬಳಿಕವೂ ಅಮೇರಿಕಾ ಪಡೆಗಳು ಆಫ್ಘಾನಿಸ್ತಾನದಲ್ಲಿ ಉಳಿದಿದ್ದೇ ಆದರೆ ಕೆಟ್ಟ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದ್ದವು. ಇದು ಅಮೇರಿಕಕಷ್ಟೇ ಅಲ್ಲದೆ ಬೇರೆ ಬೇರೆ ದೇಶಗಳಿಗೂ ಎಚ್ಚರಿಕೆಯ ಗಂಟೆಯಾಗಿದೆ. ಅಮೇರಿಕಾದ ಸೈನಿಕರು ವಾಪಸ್ ಬಂದ ಬಳಿಕ ಆಪ್ಘಾನಿಸ್ತಾನದಿಂದ ವಿದೇಶಿ ಪ್ರಜೆಗಳ ಸ್ಥಳಾಂತರಕ್ಕೆ ಅಡ್ಡಿಯಾಗುವ ಅಥವಾ ಸ್ಥಳೀಯವಾಗಿ ಅವರನ್ನು ಹಿಡಿದಿಟ್ಟುಕೊಂಡು ಬೇರೆ ಬೇರೆ ಬೇಡಿಕೆಗಳನ್ನು ತಾಲಿಬಾನಿಗಳು ಅಂತಾರಾಷ್ಟ್ರೀಯ ಸಮುದಾಯದ ಮುಂದಿಡುವ ಅಪಾಯ ಇದೆ. ಹೀಗಾಗಿ ಸೇನಾ ಹಿಂತೆಗೆತದ ಗಡುವನ್ನು ಮತ್ತಷ್ಟು ವಿಸ್ತರಣೆ ಮಾಡುವಂತೆ ಅಮೇರಿಕಾದ ಮೇಲೆ ಒತ್ತಡ ಹೇರಲಾಗುತ್ತಿದೆ.

ಈ ನಡುವೆ ಜಿ-7 ರಾಷ್ಟ್ರಗಳು ಆಫ್ಘಾನಿಸ್ತಾನದ ಬಿಕ್ಕಟ್ಟು ಪರಿಹಾರಕ್ಕೆ ಭಾರತ ನಾಯಕತ್ವ ವಹಿಸಿಕೊಳ್ಳಲು ಅವಕಾಶ ನೀಡಬೇಕು ಎಂಬ ಮನವಿಯನ್ನು ಮಾಡಿವೆ. ಅಂತಾರಾಷ್ಟ್ರೀಯ ಸಮುದಾಯದಲ್ಲಿ ಪ್ರಭಾವಿಯಾಗಿ ಬೆಳೆದಿರುವ ಭಾರತ ಬಹಳಷ್ಟು ಸಮಸ್ಯೆಗಳಿಗೆ ಪರಿಹಾರ ದೊರಕಿಸಿಕೊಡಬಲ್ಲದು ಎಂಬ ವಿಶ್ವಾಸವನ್ನು ಮೂಡಿಸಿದೆ. ಹೀಗಾಗಿ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಮುಂಚೂಣಿಯಲ್ಲಿ ನಿಂತು ಆಫ್ಘಾನಿಸ್ತಾನದಿಂದ ಬೇರೆ ಬೇರೆ ದೇಶದ ಪ್ರಜೆಗಳನ್ನು ಆಯಾ ದೇಶಗಳಿಗೆ ಕಳುಹಿಸುವ ಕಾರ್ಯಾಚರಣೆ ಮುಂದುವರೆಸಬೇಕೆಂದು ಅಂತಾರಾಷ್ಟ್ರೀಯ ನಾಯಕರು ಬೇಡಿಕೆ ಸಲ್ಲಿಸಿದ್ದಾರೆ.
ನರೇಂದ್ರ ಮೋದಿಯವರು ರಷ್ಯಾದ ಅಧ್ಯಕ್ಷ ವ್ಲಾಡಿಮೀರ್‍ಪುಟೀನ್ ಅವರೊಂದಿಗೂ ಆಫ್ಘಾನಿಸ್ತಾನ ವಿಷಯದ ಬಗ್ಗೆ ಚರ್ಚೆ ಮಾಡಿದ್ದಾರೆ.

Facebook Comments