ಪೋಲೆಂಡ್ ವಿರುದ್ಧ ಕೊಲಂಬಿಯಾಗೆ ಗೆಲುವು

Poland

ಕೆಜನ್, ಜೂ.25-ರಷ್ಯಾದಲ್ಲಿ ನಡೆಯುತ್ತಿರುವ ಪ್ರತಿಷ್ಠಿತ ಫಿಫಾ ವಿಶ್ವಕಪ್ ಫುಟ್ಬಾಲ್ ಪಂದ್ಯದಲ್ಲಿ ಕೊಲಂಬಿಯಾ ಪೋಲೆಂಡ್ ವಿರುದ್ಧ ಭರ್ಜರಿ ಜಯ ದಾಖಲಿಸಿದೆ. ಕೆಜನ್ ಕ್ರೀಡಾಂಗಣದಲ್ಲಿ ನಿನ್ನೆ ತಡರಾತ್ರಿ ನಡೆದ ಚೊಚ್ಚಲ ಮುಖಾಮುಖಿಯಲ್ಲಿ ಹ್ಯಾಟ್ರಿಕ್ ಗೋಲು ಬಾರಿಸಿದ ಕೊಲಂಬಿಯಾ, ಪೋಲಿಷ್ ಆಟಗಾರರನ್ನು 3-0 ಗೋಲುಗಳಿಂದ ಮಣಿಸಿತು. ಸೋಲಿನೊಂದಿಗೆ ಪೋಲೆಂಡ್ ನಾಕೌಟ್ ಹಾದಿ ಬಹುತೇಕ ಬಂದ್ ಆದಂತಾಗಿದೆ.

ಪಂದ್ಯದ ಆರಂಭದಿಂದಲೂ ಕೊಲಂಬಿಯಾ ಆಟಗಾರರು ಕಾಲ್ಚೆಂಡಿನ ಮೇಲೆ ಸಂಪೂರ್ಣ ನಿಯಂತ್ರಣ ಸಾಧಿಸಿದರು. ಈ ತಂಡದ ಪಟುಗಳ ಕಾಲ್ಚೆಳಕಕ್ಕೆ ಪೋಲೆಂಡ್ ಸೋತು ಸುಣ್ಣವಾಯಿತು.   ಮೊದಲಾರ್ಧದ 40ನೇ ನಿಮಿಷದಲ್ಲಿ ಕೊಲಂಬಿಯಾದ ಎರಿ ಮಿನಾ ಹೆಡರ್ ಮೂಲಕ ಭರ್ಜರಿ ಗೋಲು ಬಾರಿಸಿ ತಂಡಕ್ಕೆ 1-0 ಮುನ್ನಡೆ ತಂದು ಕೊಟ್ಟರು.

ನಂತರ ದ್ವಿತೀಯಾರ್ಧದಲ್ಲೂ ಉತ್ತಮ ಪ್ರದರ್ಶನ ಮುಂದುವರಿಸಿದ ಕೊಲಂಬಿಯಾ ಇನ್ನೂ ಎರಡು ಗೋಲುಗಳನ್ನು ದಾಖಲಿಸಿತು. 70ನೇ ನಿಮಿಷದಲ್ಲಿ ರಾಡ್‍ಮೇಲ್ ಫಾಲ್ಕೋ ತಂಡಕ್ಕೆ ಎರಡನೇ ಗೋಲಿನ ಕೊಡುಗೆ ನೀಡಿದರು. ಅದಾದ 5 ನಿಮಿಷಗಳ ಬಳಿಕ ಜಾನ್ ಕೌಡ್ರುಡೋ ಮೂರನೇ ಗೋಲು ಬಾರಿಸಿ ಕೊಲಂಬಿಯಾ ಗೋಲು ಗಳಿಕೆಯನ್ನು 3ಕ್ಕೇರಿಸಿದರು. ಒಂದೇ ಒಂದು ಗೋಲು ಗಳಿಸಲು ವಿಫಲವಾದ ಪೋಲೆಂಡ್ ಈಗಾಗಲೇ ಸೆನೆಗಲ್ ವಿರುದ್ಧ ಪರಾಭವಗೊಂಡಿದೆ. ಈ ಸೋಲಿನೊಂದಿಗೆ ಈ ತಂಡದ ನಾಕೌಟ್ ಹಾದಿ ಬಹುತೇಕ ಮುಚ್ಚಿದಂತಾಗಿದೆ.

Sri Raghav

Admin