ವಿಶ್ವದೆಲ್ಲೆಡೆ ಓಮಿಕ್ರಾನ್ ಆರ್ಭಟ, ಸಣ್ಣಪುಟ್ಟ ರೋಗ ಲಕ್ಷಣಗಳನ್ನು ನಿರ್ಲಕ್ಷಿಸಬೇಡಿ..!

Spread the love

ಬೆಂಗಳೂರು,ಡಿ.19- ಕೋವಿಡ್‍ನ ಮೊದಲ ಮತ್ತು 2ನೇ ಅಲೆಗಳು ಸರಿಸುಮಾರು ಇದೇ ಸಮಯಕ್ಕೆ ಉಲ್ಬಣಗೊಂಡು ಅನಾಹುತಕಾರಿ ಪರಿಣಾಮಗಳನ್ನು ಉಂಟು ಮಾಡಿದ್ದವು. ಹಾಗಾಗಿ ರೋಗ ಲಕ್ಷಣಗಳ ಸಣ್ಣಪುಟ್ಟ ಸಮಸ್ಯೆಗಳನ್ನು ನಿರ್ಲಕ್ಷಿಸದಂತೆ ತಜ್ಞರು ಎಚ್ಚರಿಕೆ ನೀಡಿದ್ದಾರೆ. ಜಾಗತಿಕವಾಗಿ ಬಹಳಷ್ಟು ಮಂದಿ ತಜ್ಞರು 2022ರ ಜನವರಿ, ಫೆಬ್ರವರಿ ವೇಳೆಗೆ ಓಮಿಕ್ರಾನ್ ಪ್ರಕರಣಗಳು ಹೆಚ್ಚಾಗುವ ಮುನ್ಸೂಚನೆ ನೀಡುತ್ತಿದ್ದಾರೆ.

ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ತಾಲ್ಲೂಕು ಕೇಂದ್ರಗಳಿಂದ ಆರೋಗ್ಯ ಸೌಲಭ್ಯಗಳನ್ನು ಹೆಚ್ಚಿಸಬೇಕು. ಓಮಿಕ್ರಾನ್‍ನಿಂದಾಗುವ ಪರಿಣಾಮಗಳ ಬಗ್ಗೆ ಕಾಲ ಕಾಲಕ್ಕೆ ಮಾಹಿತಿ ಪಡೆದು ಅದನ್ನು ನಿಭಾಯಿಸಲು ಅಗತ್ಯ ಸೌಲಭ್ಯಗಳನ್ನು ಕಲ್ಪಿಸಬೇಕು ಎಂದು ತಜ್ಞರು ಸಲಹೆ ನೀಡಿದ್ದಾರೆ. ಕೋವಿಡ್ 2ನೇ ಅಲೆಯಲ್ಲಿ ಅನಿರೀಕ್ಷಿತವಾಗಿ ಎದುರಾದ ಆಮ್ಲಜನಕದ ಬೇಡಿಕೆಯಿಂದ ದೇಶವೇ ತತ್ತರಿಸಿ ಹೋಗಿತ್ತು. ಕೊರತೆಯನ್ನು ನೀಗಿಸಲು ಆಗದಿದ್ದರಿಂದ ಸಾವಿರಾರು ಜೀವಗಳ ಹಾನಿಯಾಗಿತ್ತು.

ಓಮಿಕ್ರಾನ್ ಯಾವ ರೀತಿಯ ರೂಪಾಂತರಿ, ಅದರಿಂದಾಗುವ ಅಪಾಯಗಳೇನು, ಆರೋಗ್ಯದ ಮೇಲೆ ಉಂಟು ಮಾಡುವ ಪರಿಣಾಮಗಳು ಏನು ಎಂಬುದರ ಬಗ್ಗೆಯೂ ಈ ವರೆಗೂ ಸ್ಪಷ್ಟತೆ ಇಲ್ಲ. ಇದು ಮಾರಣಾಂತಿಕವಲ್ಲ ಎಂಬ ಸಮಾಧಾನದ ಮಾತುಗಳು ಕೇಳುಬರುತ್ತಿವೆ. ಆದರೆ ಸೋಂಕು ರೂಪಾಂತರಿಯಾಗಿ ಪರಿವರ್ತನೆಯಾದರೂ ಅಚ್ಚರಿಪಡಬೇಕಿಲ್ಲ. ಹಾಗಾಗಿ ಸೂಕ್ತ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ತಜ್ಞರು ಸಲಹೆ ನೀಡಿದ್ದಾರೆ.

ಆಸ್ಪತ್ರೆಗಳಿಗೆ ಬರುವ ಸೌಮ್ಯ ಮತ್ತು ಗಂಭೀರ ಗುಣಲಕ್ಷಣಗಳನ್ನು ನಿರ್ಲಕ್ಷಿಸಬಾರದು. ಸೂಕ್ತ ಪರೀಕ್ಷೆಗಳನ್ನು ಕೈಗೊಳ್ಳಬೇಕು. ಜೀವನ ಶೈಲಿಯ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವವರ ಮೇಲೆ ನಿಗಾವಹಿಸಬೇಕು. ಸಾರ್ವಜನಿಕರು ಕೂಡ ಎಚ್ಚರಿಕೆಯಿಂದ ಸರ್ಕಾರದ ಮಾರ್ಗಸೂಚಿಗಳನ್ನು ಪಾಲಿಸಬೇಕು ಎಂದು ತಜ್ಞರು ಸಲಹೆ ನೀಡಿದ್ದಾರೆ.

ಹಿಂದಿನ ಎರಡು ಅಲೆಗಳು ಕೂಡಾ ಇದೇ ಅವಯಲ್ಲಿ ಗರಿಷ್ಠ ಹಂತಕ್ಕೆ ತಲುಪಿದ್ದವು. ಇತರ ರಾಷ್ಟ್ರಗಳಲ್ಲಿ ಹೆಚ್ಚಾಗುತ್ತಿರುವ ಓಮಿಕ್ರಾನ್ ಪ್ರಕರಣಗಳು ನಮಗೆ ಎಚ್ಚರಿಕೆಯ ಗಂಟೆಯಾಗಿದೆ. ಕೋವಿಡ್ ನಿಯಮ ಪಾಲನೆಯನ್ನು ನಾವು ಮರೆಯಬಾರದು ಎಂದು ತಜ್ಞರು ಪುನರುಚ್ಚರಿಸಿದ್ದಾರೆ.

2019ರ ಡಿಸೆಂಬರ್ ತಿಂಗಳಲ್ಲಿಯೇ ಕೋವಿಡ್ ಕಾಣಿಸಿಕೊಂಡಿತ್ತು. ತದನಂತರ ಕೋವಿಡ್ ರೂಪಾಂತರಿ ಡೆಲ್ಟಾ ಪ್ರಕರಣಗಳು ಇದೇ ಅವಯಲ್ಲಿ 2ನೇ ಅಲೆಯಾಗಿ ಪರಿವರ್ತನೆಯಾಗಿತ್ತು. ಇದೀಗ ಓಮಿಕ್ರಾನ್ ಕಂಡುಬರುತ್ತಿದೆ.

ಹೆಚ್ಚಿನ ಅಪಾಯಕಾರಿ ಸನ್ನಿವೇಶ ಎದುರಾಗದಂತೆ ಪೂರ್ವ ಸಿದ್ದತೆಗಳನ್ನು ಕೈಗೊಳ್ಳಬೇಕಾದ ಅಗತ್ಯವಿದೆ. ಹೀಗಾಗಿ ಮುಂದಿನ ಮೂರು ತಿಂಗಳ ಕಾಲ ಸಾರ್ವಜನಿಕರು ಎಚ್ಟರಿಕೆ ವಹಿಸಬೇಕಾಗಿದೆ. ಹೀಗಾಗಿ ಕೋವಿಡ್ ಶಿಷ್ಟಾಚಾರ ಪಾಲನೆ ಮಹತ್ವದ್ದು ಎಂದು ತಾಂತ್ರಿಕ ಸಲಹಾ ಸಮಿತಿ ಸದಸ್ಯರು ತಿಳಿಸಿದ್ದಾರೆ.

ಓಮಿಕ್ರಾನ್ ಹರಡುವಿಕೆ ಅಥವಾ ತೀವ್ರತೆ ಬಗ್ಗೆ ಇನ್ನೂ ಅಧ್ಯಯನ ನಡೆಸಲಾಗುತ್ತಿದೆ. ಅದು ಸೌಮ್ಯ ಅಥವಾ ಸಾವಿನ ತೀವ್ರತೆ ಕಡಿಮೆಯಿದೆ ಎಂದು ನಿರ್ಲಕ್ಷ್ಯ ವಹಿಸಬಾರದು. ಮುನ್ನೆಚಚರಿಕಾ ಕ್ರಮವಾಗಿ ಐಸಿಯು ಬೆಡ್, ಆಕ್ಸಿಜನ್ ಲಭ್ಯತೆ, ಸೂಕ್ತ ಆರೋಗ್ಯ ಸಿಬ್ಬಂದಿ ಸೇರಿದಂತೆ ಮತ್ತಿತರ ಆರೋಗ್ಯ ಸೌಲಭ್ಯಗಳ ಸಿದ್ಧತೆ ಮಾಡಿಕೊಳ್ಳಬೇಕೆಂದು ಸಲಹೆ ನೀಡಿದ್ದಾರೆ.

ಓಮಿಕ್ರಾನ್‍ಗಾಗಿ ಜೀನೋಮಿಕ್ ಸಿಕ್ವೆನ್ಸಿಂಗ್ ವರದಿ ಪಡೆಯಲು ವಿಳಂಬವಾಗುತ್ತಿರುವುದಕ್ಕೆ ಯಾರೂ ಆತಂಕಪಡಬಾರದು. ಮಾದರಿ ಸಂಗ್ರಹಣೆಯಲ್ಲಿ ಎದುರಾಗುವ ಸವಾಲುಗಳಿಂದಾಗಿ ವಿಳಂಬವಾಗಿರುತ್ತದೆ ಎಂದು ಅವರು ವಿವರಿಸಿದ್ದಾರೆ.

ಜೀನೋಮಿಕ್ ಸೀಕ್ವೆನ್ಸಿಂಗ್ ಕೇವಲ 8-12 ಗಂಟೆಗಳನ್ನು ತೆಗೆದುಕೊಳ್ಳುತ್ತದೆ. ಬಯೋ ಇನ್‍ಫಾಮ್ರ್ಯಾಟಿಕ್ಸ್‍ನಿಂದ ಡೇಟಾದ ವಿಶ್ಲೇಷಣೆಯು ಇನ್ನೂ 48-72 ಗಂಟೆಗಳನ್ನು ತೆಗೆದುಕೊಳ್ಳುತ್ತದೆ ಎಂದು ಅವರು ತಿಳಿಸಿದ್ದಾರೆ.

Facebook Comments