‘ಲೋಕ’ಗೆಲುವಿಗಾಗಿ ರಾಷ್ಟ್ರ ನಾಯಕರ ಜೊತೆ ಚರ್ಚಿಸಲು ದೆಹಲಿಗೆ ಬಿಎಸ್ವೈ

Yadiyurappa--01

ಬೆಂಗಳೂರು,ಸೆ.29-ಲೋಕಸಭೆ ಚುನಾವಣೆಗೆ ಕೈಗೊಳ್ಳಬೇಕಾದ ಕಾರ್ಯತಂತ್ರಗಳ ಬಗ್ಗೆ ರಾಷ್ಟ್ರೀಯ ನಾಯಕರೊಂದಿಗೆ ಚರ್ಚಿಸಲು ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ನವದೆಹಲಿಗೆ ಪ್ರಯಾಣ ಬೆಳೆಸಲಿದ್ದಾರೆ. ಇಂದು ಸಂಜೆ ಅಥವಾ ನಾಳೆ ಬೆಳಗ್ಗೆ ನವದೆಹಲಿಗೆ ತೆರಳಿರುವ ಬಿಎಸ್‍ವೈ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಸೇರಿದಂತೆ ಕೆಲವು ಪ್ರಮುಖ ನಾಯಕರನ್ನು ಭೇಟಿ ಮಾಡಿ ಪಕ್ಷದ ಬೆಳವಣಿಗೆ ಕುರಿತಂತೆ ಮಾಹಿತಿ ನೀಡಲಿದ್ದಾರೆ. ಮುಂದಿನ ತಿಂಗಳು ಅಮಿತ್ ಷಾ ರಾಜ್ಯಕ್ಕೆ ಆಗಮಿಸಲಿದ್ದು, ಲೋಕಸಭೆ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ , ಪ್ರಚಾರದ ಕಾರ್ಯತಂತ್ರ ಸೇರಿದಂತೆ ಪ್ರಮುಖ ಕಾರ್ಯತಂತ್ರಗಳ ಬಗ್ಗೆ ರಾಜ್ಯ ನಾಯಕರಿಗೆ ಮಾಹಿತಿ ನೀಡಲಿದ್ದಾರೆ.

ಇದೀಗ ದೆಹಲಿಗೆ ತೆರಳಿರುವ ಯಡಿಯೂರಪ್ಪ ಇತ್ತೀಚಿನ ಪಕ್ಷದ ಬೆಳವಣಿಗೆಗಳು, ಕಾಂಗ್ರೆಸ್-ಜೆಡಿಎಸ್ ಅತೃಪ್ತ ಶಾಸಕರನ್ನು ಸೆಳೆದು ಸರ್ಕಾರ ರಚನೆ ಮಾಡುವ ವಿಷಯದಲ್ಲಿ ವಿಫಲರಾಗಿರುವುದು, 28 ಲೋಕಸಭಾ ಕ್ಷೇತ್ರಗಳ ಸ್ಥಿತಿಗತಿಗಳು, ಪಕ್ಷದ ಸಂಘಟನೆ ಸೇರಿದಂತೆ ಮತ್ತಿತರ ವಿಷಯಗಳ ಬಗ್ಗೆ ಚರ್ಚೆ ಮಾಡಲಿದ್ದಾರೆ. ರಾಜ್ಯದಲ್ಲಿ ಇನ್ನೇನು ಬಿಜೆಪಿ ದೋಸ್ತಿ ಸರ್ಕಾರವನ್ನು ಅಸ್ಥಿತರಗೊಳಿಸಿ ಅಧಿಕಾರಕ್ಕೆ ಬಂದೇಬಿಟ್ಟಿತು ಎಂಬ ವಾತಾವರಣ ಕಳೆದ ವಾರ ನಿರ್ಮಾಣವಾಗಿತ್ತು.

ಇದಕ್ಕೆ ಪುಷ್ಠಿ ನೀಡುವಂತೆ ಕಾಂಗ್ರೆಸ್‍ನ ಇಬ್ಬರು ಶಾಸಕರು ಹಾಗೂ ಓರ್ವ ಪಕ್ಷೇತರ ಶಾಸಕ ಚೆನ್ನೈಗೆ ತೆರಳಿ ಬಳಿಕ ವಾಪಸ್ಸಾಗಿದ್ದರು. ದೋಸ್ತಿ ಸರ್ಕಾರದಲ್ಲಿ ಎಷ್ಟೇ ಅಸಮಾಧಾನ, ಅಪಸ್ವರ ಕೇಳಿಬರುತ್ತಿದ್ದರೂ ಬಿಜೆಪಿಯನ್ನು ಅಧಿಕಾರಕ್ಕೆ ಬರದಂತೆ ತಡೆಯಲು ಉಭಯ ಪಕ್ಷಗಳು ತೀರ್ಮಾನಿಸಿವೆ. ಆಪರೇಷನ್ ಕಮಲದಿಂದ ಪಕ್ಷಕ್ಕೆ ತುಸು ಹಿನ್ನಡೆಯಾಗಿದೆ ಎಂಬ ಮಾತುಗಳು ಕೇಳಿ ಬರುತ್ತಿವೆಯಾದರೂ ಈ ಆಪಾದನೆಗಳ ಬಗ್ಗೆ ಬಿಎಸ್‍ವೈ ರಾಷ್ಟ್ರೀಯ ನಾಯಕರಿಗೆ ಮನವರಿಕೆ ಮಾಡಲಿದ್ದಾರೆ.

ಉಳಿದಂತೆ ಹಾಲಿ 17 ಕ್ಷೇತ್ರಗಳನ್ನು ಹೊರುತುಪಡಿಸಿ ಉಳಿದಿರುವ 11 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡುವುದು ಹಾಲಿ ಸಂಸದರಿಗೆ ಟಿಕೆಟ್ ನೀಡಬೇಕೆ? ಹೊಸ ಮುಖಗಳಿಗೆ ಮಣೆ ಹಾಕಬೇಕೆ? ಅನ್ಯ ಪಕ್ಷಗಳಿಂದ ಬರುವ ಮುಖಂಡರನ್ನು ಕರೆತರುವುದು ಸೇರಿದಂತೆ ಇನ್ನಿತರ ವಿಷಯಗಳ ಬಗ್ಗೆ ಉಭಯ ನಾಯಕರು ಚರ್ಚೆ ಮಾಡುವರು.

Sri Raghav

Admin