ಬೆಳಗಾವಿ, ಜ.5- ಯಲ್ಲಮ್ಮನ ಗುಡ್ಡಕ್ಕೆ ನಡೆದುಕೊಂಡು ಹೋಗುತ್ತಿದ್ದ ಯಾತ್ರಾರ್ಥಿಗಳನ್ನು ಮಾರ್ಗಮಧ್ಯೆ ವಾಹನದಲ್ಲಿ ಹತ್ತಿಸಿಕೊಂಡ ಚಾಲಕನ ನಿಯಂತ್ರಣ ತಪ್ಪಿ ತಿರುವಿನಲ್ಲಿ ವಾಹನ ಮರಕ್ಕೆ ಅಪ್ಪಳಿಸಿದ ಪರಿಣಾಮ ಆರು ಮಂದಿ ಯಾತ್ರಾರ್ಥಿಗಳು ಮೃತಪಟ್ಟಿರುವ ದಾರುಣ ಘಟನೆ ಕಟಕೋಳ ಪೆಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇಂದು ಬೆಳಗಿನ ಜಾವ ನಡೆದಿದೆ.
ಮೃತರನ್ನು ಹನುಮವ್ವ ನಾಕಾಡಿ(25), ದೀಪಾ(31), ಸುಪ್ರಿತಾ(12), ಮಾರುತಿ(42), ಸವಿತಾ(17), ಇಂದ್ರವ್ವ(24) ಎಂದು ಗುರುತಿಸಲಾಗಿದೆ. ಮೃತರೆಲ್ಲರೂ ರಾಮದುರ್ಗ ತಾಲೂಕಿನ ಹುಲಕುಂದ ಗ್ರಾಮದವರು ಎಂದು ಪೊಲಿಸರು ತಿಳಿಸಿದ್ದಾರೆ.
ಹುಲಕುಂದ ಗ್ರಾಮದಿಂದ ಸವದತ್ತಿ ಯಲ್ಲಮ್ಮ ದೇವಸ್ಥಾನಕ್ಕೆ 23 ಮಂದಿ ನಡೆದುಕೊಂಡು ಹೋಗುತ್ತಿದ್ದರು. ಬೆಳಗಿನ ಜಾವ 3 ಗಂಟೆ ಸುಮಾರಿನಲ್ಲಿ ಇದೇ ಮಾರ್ಗವಾಗಿ ಬಂದ ಪಿಕಪ್ ಮಹೀಂದ್ರಾ ಗೂಡ್ಸ್ ವಾಹನದ ಚಾಲಕ ನಡೆದು ಹೋಗುತ್ತಿದ್ದವರನ್ನು ಗಮನಿಸಿ ವಾಹನ ನಿಲ್ಲಿಸಿದ್ದಾರೆ.
XBB.1.5 ವೈರಸ್ ಭಯ ಬೇಡ, ಆದರೆ, ಅನಗತ್ಯವಾಗಿ ಮನೆಯಿಂದ ಹೊರಹೋಗಬೇಡಿ
ಇವರೆಲ್ಲರೂ ಯಲ್ಲಮ್ಮನ ಗುಡ್ಡಕ್ಕೆ ಹೋಗುತ್ತಿರುವುದು ತಿಳಿದು ನನ್ನ ವಾಹನದಲ್ಲಿ ನಿಮಗೆ ಡ್ರಾಪ್ ಕೊಡುವುದಾಗಿ ಹೇಳಿ ಎಲ್ಲರನ್ನು ಹತ್ತಿಸಿಕೊಂಡಿದ್ದಾನೆ. ವಾಹನ ಸ್ವಲ್ಪ ದೂರ ಹೋಗುತ್ತಿದ್ದಂತೆ ರಾಮದುರ್ಗ ತಾಲೂಕಿನ ಚುಂಚನೂರ ಗ್ರಾಮದ ಬಳಿಯ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ವಾಹನ ರಸ್ತೆ ಪಕ್ಕದ ಆಲದ ಮರಕ್ಕೆ ಅಪ್ಪಳಿಸಿದ ಪರಿಣಾಮ ಸ್ಥಳದಲ್ಲೇ ಐದು ಮಂದಿ ಮೃತಪಟ್ಟಿದ್ದಾರೆ.
ವಾಹನದೊಳಗೆ ಗಾಯಗೊಂಡು ಚೀರಾಡುತ್ತಿದ್ದವರನ್ನು ಗಮನಿಸಿದ ದಾರಿ ಹೋಕರು ತಕ್ಷಣ ಗಾಯಾಳುಗಳನ್ನು ಆಸ್ಪತ್ರೆಗೆ ಕರೆದೊಯ್ಯುತ್ತಿದ್ದಾಗ ಮಾರ್ಗಮಧ್ಯೆ ಮತ್ತೊಬ್ಬರು ಮೃತಪಟ್ಟಿದ್ದಾರೆ. ಉಳಿದ 16 ಮಂದಿಯನ್ನು ಸ್ಥಳೀಯ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ.
ಕಟಕೋಳ ಠಾಣೆ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸುವಲ್ಲಿ ನೆರವಾದರು. ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ಎಸ್ಪಿ ಡಾ. ಸಂಜೀವ ಪಾಟೀಲ ಪರಿಶೀಲಿಸಿದರು.
ಯಮನಂತೆ ಎದುರಾದ ವಾಹನ:
23 ಮಂದಿ ಯಾತ್ರಾರ್ಥಿಗಳು ನಡೆದುಕೊಂಡು ಯಲ್ಲಮ್ಮ ದೇವಸ್ಥಾನಕ್ಕೆ ಹೋಗುತ್ತಿದ್ದಾಗ ಯಮನಂತೆ ಎದುರಾದ ವಾಹನದೊಳಗೆ ಕುಳಿತ ಕೆಲವೇ ನಿಮಿಷಗಳಲ್ಲಿ ಅಪಘಾತ ಸಂಭವಿಸಿ ಆರು ಜನ ಮೃತಪಟ್ಟಿರುವುದು ವಿಷಾದಕರ.
ಮೃತ ಕುಟುಂಬಗಳಿಗೆ 5 ಲಕ್ಷ ಪರಿಹಾರ
ಬೆಂಗಳೂರು, ಜ.5- ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಹುಲಕುಂದ ಗ್ರಾಮ ಯಾತ್ರಾರ್ಥಿಗಳು ಸವದತ್ತಿ ಯಲ್ಲಮ್ಮನ ದೇವಸ್ಥಾನಕ್ಕೆ ಹೋಗುವಾಗ ವಾಹನ ಅಪಘಾತದಿಂದ 6 ಮಂದಿ ಮೃತಪಟ್ಟಿರುವ ಕುಟುಂಬಕ್ಕೆ ರಾಜ್ಯ ಸರ್ಕಾರ 5 ಲಕ್ಷ ಪರಿಹಾರ ಘೋಷಣೆ ಮಾಡಿದೆ.
ರೌಡಿಗಳಿಗೆ ಖಾಕಿ ಚಾಟಿ : ಗೂಂಡಾ ಕಾಯ್ದೆಯಡಿ 23 ಮಂದಿ ಬಂಧನ, 13 ಮಂದಿ ಗಡಿಪಾರು
ಈ ಘಟನೆಯಲ್ಲಿ 16ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದು, ಮೃತರ ಕುಟುಂಬಕ್ಕೆ 5 ಲಕ್ಷ ಪರಿಹಾರವನ್ನು ಘೋಷಣೆ ಮಾಡಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸೂಚನೆ ನೀಡಿದ್ದಾರೆ ಎಂದು ಬೃಹತ್ ನೀರಾವರಿ ಹಾಗೂ ಜಿಲ್ಲಾ ಉಸ್ತುವರಿ ಸಚಿವ ಗೋವಿಂದ ಕಾರಜೋಳ ಹೇಳಿದ್ದಾರೆ.
ಗಾಯಗೊಂಡಿರುವ ಗಾಯಾಳುಗಳಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲು ವ್ಯವಸ್ಥೆ ಮಾಡಲಾಗಿದೆ. ಈ ಸಂಬಂಧ ಜಿಲ್ಲಾಧಿಕಾರಿಗಳಿಗೆ ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸೂಚನೆ ಕೊಟ್ಟಿದ್ದಾನೆ ಎಂದರು.
ಮೃತರ ಕುಟುಂಬಕ್ಕೆ ಆಗಿರುವ ದುಃಖ ಹಾಗೂ ನೋವಿನಲ್ಲಿ ನಾನು ಭಾಗಿಯಾಗಿದ್ದೇನೆ. ಮೃತರ ಆತ್ಮಕ್ಕೆ ಭಗವಂತ ಶಾಂತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಗೋವಿಂದ ಕಾರಜೋಳ ಅವರು ಹೇಳಿದರು.