ಯಶಸ್ವಿನಿ ಯೋಜನೆ ಮರುಜಾರಿ ಮೂಲಕ ಜನರ ಮನ ತಲುಪಲು ಮುಂದಾದ ಸಿಎಂ..!

Social Share

ಬೆಂಗಳೂರು,ಮಾ.8-ಮುಂಬರಲಿರುವ ರಾಜ್ಯ ವಿಧಾನಸಭಾ ಸಾರ್ವತ್ರಿಕ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಜನಪ್ರಿಯ ಕಾರ್ಯಕ್ರಮಗಳತ್ತ ಗಮನಹರಿಸಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಯಶಸ್ವಿನಿ ಯೋಜನೆ ಮರುಜಾರಿ ಮೂಲಕ ಜಾತಿ, ಧರ್ಮಗಳನ್ನು ಮೀರಿ ಅರ್ಧ ಕೋಟಿ ಜನರ ಮನ ತಲುಪಲು ಮುಂದಾಗಿದ್ದಾರೆ.
ರಾಜ್ಯದಲ್ಲಿನ 30 ಜಿಲ್ಲೆಗಳಲ್ಲಿರುವ ಸಹಕಾರಿ ಸಂಘಗಳು, ಸೊಸೈಟಿಗಳು, ಪತ್ರಕರ್ತರ ಸಹಕಾರ ಸಂಘಗಳು, ಸಹಕಾರಿ ಬ್ಯಾಂಕ್, ಸ್ತ್ರೀ ಶಕ್ತಿ ಸಂಘ, ಸಾಂಸ್ಕೃತಿಕ ಸಹಕಾರ ಸೊಸೈಟಿಗಳ 43.42 ಲಕ್ಷ ಮಂದಿ ಯಶಸ್ವಿನಿ ಯೋಜನೆಯ ಫಲಾನುಭವಿಗಳಾಗಿದ್ದರು.
ಬಿಪಿಎಲ್ ಹಾಗೂ ಎಪಿಎಲ್ ತಾರತಮ್ಯವಿಲ್ಲದೇ ಪ್ರತಿಯೊಂದು ಕುಟುಂಬಕ್ಕೆ 2 ಲಕ್ಷ ರೂ.ವರೆಗೆ ವಾರ್ಷಿಕ ಚಿಕಿತ್ಸಾ ವೆಚ್ಚವನ್ನು ಸರ್ಕಾರ ಭರಿಸುತ್ತಿತ್ತು. ಈಗ ಮರಳಿ ಯೋಜನೆ ಅನುಷ್ಠಾನಕ್ಕೆ ತರುತ್ತಿರುವುದರಿಂದ ಫಲಾನುಭವಿಗಳ ಸಂಖ್ಯೆ 50 ಲಕ್ಷದ ಸನಿಹಕ್ಕೆ ಬರಲಿದೆ.
ಅಂತಾರಾಜ್ಯ ಜಲವಿವಾದ ಕಾಯ್ದೆಗೆ ತಿದ್ದುಪಡಿ ಅಗತ್ಯ : ಸಿಎಂ ಬೊಮ್ಮಾಯಿ
ಸದ್ಯ ರಾಜ್ಯದಲ್ಲಿ ಜಾರಿಯಲ್ಲಿರುವ ಆರೋಗ್ಯ ಕರ್ನಾಟಕ ಯೋಜನೆ ಅನುಷ್ಠಾನ ವಿಳಂಬದಿಂದಾಗಿ ರಾಜ್ಯದಲ್ಲಿದ್ದ 43.42 ಲಕ್ಷ ಯಶಸ್ವಿನಿ ಫಲಾನುಭವಿಗಳ ಪೈಕಿ 30 ಲಕ್ಷದಷ್ಟು ಜನರಿಗೆ ಆರೋಗ್ಯ ಸೇವೆ ಲಭ್ಯವಾಗದಂತಾಗಿದೆ.
ಇವರೆಲ್ಲ ಸ್ವಂತ ಖರ್ಚಿನಲ್ಲಿ ಚಿಕಿತ್ಸೆ ಪಡೆಯಬೇಕಿದ್ದು, ಆರ್ಥಿಕ ದುರ್ಬಲರು, ಮಧ್ಯಮ ವರ್ಗದ ಜನರಿಗೆ ಇದು ತುಂಬಾ ದುಬಾರಿಯಾಗುತ್ತಿದೆ. ಈಗ ಇವರಿಗೆಲ್ಲ ಮತ್ತೆ ಯಶಸ್ವಿನಿ ಯೋಜನೆ ಜಾರಿಯಾದಲ್ಲಿ ಉಚಿತ ಚಿಕಿತ್ಸೆ ಪಡೆಯಲು ಅವಕಾಶ ಸಿಕ್ಕಂತಾಗಲಿದೆ. ಸರ್ಕಾರದ ಈ ನಿರ್ಧಾರದಿಂದಾಗಿ ಯೋಜನೆಯ ಫಲಾನುಭವಿಗಳು ದೊಡ್ಡ ಪ್ರಮಾಣದಲ್ಲಿ ಕೇಸರಿ ಪಕ್ಷದ ಕಡೆ ವಾಲುತ್ತಾರೆ. ಚುನಾವಣೆಗೆ ಇದು ಸಹಕಾರಿಯಾಗಲಿದೆ ಎನ್ನುವುದು ಬೊಮ್ಮಾಯಿ ಅವರ ಲೆಕ್ಕಾಚಾರವಾಗಿದೆ.
ಹಾಗಾಗಿ ಸ್ಥಗಿತಗೊಂಡಿದ್ದ ಜನಪ್ರಿಯ ಯೋಜನೆಯನ್ನೇ ಮರು ಜಾರಿ ಮಾಡಿ ಜನರ ಓಲೈಸಿಕೊಳ್ಳುವ ಮೂಲಕ ಒಂದೇ ಕಲ್ಲಿಗೆ ಎರಡು ಹಕ್ಕಿ ಹೊಡೆಯುತ್ತಿದ್ದಾರೆ. 2003ರಲ್ಲಿ ಅಂದಿನ ಮುಖ್ಯಮಂತ್ರಿ ಎಸ್.ಎಂ ಕೃಷ್ಣ ಅವರ ಮಹತ್ವಾಕಾಂಕ್ಷಿ ಯೋಜನೆ ಯಶಸ್ವಿನಿ ಆರೋಗ್ಯ ಕಾರ್ಡ್. ಗ್ರಾಮೀಣ ಪ್ರದೇಶಗಳಲ್ಲಿ ಸಹಕಾರಿ ಬ್ಯಾಂಕ್‍ಗಳ ಸದಸ್ಯರಾಗಿದ್ದವರು ತಮ್ಮ ಕುಟುಂಬದ ಆರೋಗ್ಯ ಭದ್ರಪಡಿಸಿಕೊಳ್ಳಲು ಯಶಸ್ವಿನಿ ಕಾರ್ಡ್ ಅತ್ಯಂತ ಸುಲಭ ಮಾರ್ಗವಾಗಿತ್ತು.
ವರ್ಷಕ್ಕೊಮ್ಮೆ ಕೇವಲ 300 ರೂ. ಪ್ರೀಮಿಯಂ ಪಾವತಿ ಮಾಡುವ ಮೂಲಕ ಯಶಸ್ವಿನಿ ಕಾರ್ಡ್‍ನ ಪ್ರಯೋಜನಗಳನ್ನು ಪಡೆಯಬಹುದಾಗಿತ್ತು. ನಂತರ 2015ರಲ್ಲಿ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಯೋಜನೆಯನ್ನು ನಗರ ಪ್ರದೇಶಕ್ಕೂ ವಿಸ್ತರಿಸಿದ್ದರು. ನಗರ ಪ್ರದೇಶದ ಪ್ರೀಮಿಯಂ 700 ರೂ. ಎಂದು ನಿಗದಿಯಾಗಿತ್ತು.
ಸುಮಾರು 2 ಲಕ್ಷ ರೂ.ವರೆಗಿನ ಚಿಕಿತ್ಸೆಯನ್ನು ಈ ಕಾರ್ಡ್ ಹೊಂದಿದವರು ಸಂಪೂರ್ಣ ಉಚಿತವಾಗಿ ಪಡೆಯುವ ಅವಕಾಶವಿತ್ತು. ಮೊದಲ ಬಾರಿಗೆ 2003ರಲ್ಲಿ ಪ್ರಾರಂಭವಾದ ಯೋಜನೆಯಲ್ಲಿ 2003-04ನೇ ಸಾಲಿನಲ್ಲಿಯೇ 16 ಲಕ್ಷ ಸದಸ್ಯರು ನೋಂದಣಿ ಮಾಡಿಕೊಂಡಿದ್ದರು. 2016-17ನೇ ಸಾಲಿಗೆ ಸದಸ್ಯರ ಸಂಖ್ಯೆ 43.42 ಲಕ್ಷದಷ್ಟಾಗಿದೆ.
# 2018ರಲ್ಲಿ ಸ್ಥಗಿತಗೊಂಡ ಯೋಜನೆ:
2016-17ನೇ ಸಾಲಿನಲ್ಲಿ ಯೋಜನೆಯಡಿ 2,71,776 ಮಂದಿ ಹೊರ ರೋಗಿಗಳು ಸೇವೆ ಪಡೆದಿದ್ದಾರೆ. ಜತೆಗೆ 1,94,129 ಮಂದಿ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದಾರೆ. ಈ ಹಣದಲ್ಲಿ ಸದಸ್ಯರ ವಿಮಾ ಕಂತಿನಿಂದ 105.32 ಕೋಟಿ ರೂ. ಹಾಗೂ ಸರ್ಕಾರದಿಂದ 170.43 ಕೋಟಿ ರೂ. ಭರಿಸಲಾಗಿದೆ. ಇದೆಲ್ಲದರ ನಡುವೆ 2018ರ ಮೇ 31ರಂದು ಯಶಸ್ವಿನಿ ಯೋಜನೆ ಸಂಪೂರ್ಣವಾಗಿ ಸ್ಥಗಿತಗೊಂಡಿತ್ತು.
ರಾಜ್ಯ ಸರ್ಕಾರ ತನ್ನ ಮತ್ತೊಂದು ಮಹತ್ವಾಕಾಂಕ್ಷಿ ಯೋಜನೆಯಾದ ¿ಆರೋಗ್ಯ ಕರ್ನಾಟಕ ಯೂನಿವರ್ಸಲ್ ಹೆಲ್ತ್ ಕಾರ್ಡ್ ಜಾರಿ ಮಾಡಿದೆ.ಈಗ ಮತ್ತೆ ಈ ಯೋಜನೆ ಕೆಲ ಮಾರ್ಪಾಡುಗಳೊಂದಿಗೆ ಮರಳಿ ಜಾರಿಯಾಗುತ್ತಿದ್ದು, ಅರ್ಧ ಕೋಟಿ ಜನರಿಗೆ ಇದರ ಉಪಯೋಗವಾಗಲಿದೆ.
ಭವಿಷ್ಯದ ಚುನಾವಣಾ ದೃಷ್ಟಿಯಿಂದ ಯಶಸ್ವಿನಿ ಯೋಜನೆ ಬೊಮ್ಮಾಯಿ ಲೆಕ್ಕಾಚಾರಗಳಲ್ಲೊಂದಾಗಿದ್ದು, ಎಷ್ಟರಮಟ್ಟಿಗೆ ಫಲಾನುಭವಿಗಳು ಬಿಜೆಪಿ ಸರ್ಕಾರದ ಪರ ವಾಲುತ್ತಾರೆ ಎಂಬುದು ಕಾದು ನೋಡಬೇಕು.
 

Articles You Might Like

Share This Article