ಸಿಎಎ ವಿರೋಧಿಸಿ ದೇಶವ್ಯಾಪಿ ಯಾತ್ರೆ : ಯಶ್ವಂತ್ ಸಿನ್ಹ
ನವದೆಹಲಿ, ಜ.5- ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ), ನಾಗರಿಕರ ರಾಷ್ಟ್ರೀಯ ನೋಂದಣಿ (ಎನ್ಆರ್ಸಿ) ಮತ್ತು ರಾಷ್ಟ್ರೀಯ ಜನಸಂಖ್ಯಾ ನೋಂದಣಿಯನ್ನು (ಎನ್ಪಿಆರ್) ವಿರೋಧಿಸಿ ರಾಷ್ಟ್ರ ವ್ಯಾಪಿ ಯಾತ್ರೆ ನಡೆಸುವುದಾಗಿ ಕೇಂದ್ರದ ಮಾಜಿ ಸಚಿವ ಯಶವಂತ್ ಸಿನ್ಹಾ ಘೋಷಿಸಿದ್ದಾರೆ.
ಇದಕ್ಕೆ ರಾಜಕೀಯ ರಂಗದ ಫೈರ್ ಬ್ರ್ಯಾಂಡ್ ನಾಯಕ ಶಾಟ್ ಗನ್ ಖ್ಯಾತಿಯ ಶತ್ರುಘ್ನ ಸಿನ್ಹಾ ಸಹ ಸಾಥ್ ನೀಡಿದ್ದಾರೆ. ತಮ್ಮ ಸಂಸ್ಥೆ ರಾಷ್ಟ್ರ ಮಂಚ್ ಬ್ಯಾನರ್ ಅಡಿಯಲ್ಲಿ ಆಯೋಜಿಸಲಾಗಿರುವ ಈ ಅಭಿಯಾನವನ್ನು ಗಾಂಧಿ ಶಾಂತಿ ಯಾತ್ರೆ ಎಂದು ಕರೆಯಲಾಗುವುದು ಎಂದು ಸಿನ್ಹಾ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಜ.9ರಂದು ಮುಂಬೈನ ಅಪೋಲೋ ಬಂದರ್ನಿಂದ ಯಾತ್ರೆ ಆರಂಭವಾಗಲಿದ್ದು, ಮಹಾರಾಷ್ಟ್ರ, ಗುಜರಾತ್, ರಾಜಸ್ತಾನ, ಉತ್ತರಪ್ರದೇಶ, ಹರಿಯಾಣ ಮೂಲಕ ದೆಹಲಿಯಲ್ಲಿ ಅಂತ್ಯಗೊಳ್ಳಲಿದೆ ಎಂದು ಸಿನ್ಹಾ ಹೇಳಿದ್ದಾರೆ.
ಸುಮಾರು 3000 ಕಿ. ಮೀ. ಸಾಗಲಿರುವ ಈ ಯಾತ್ರೆ ಜನವರಿ 30ರಂದು ದೆಹಲಿಯ ರಾಜ್ಘಾಟ್ ಬಳಿ ಸಮಾಪ್ತಿಯಾಗಲಿದೆ ಎಂದು ಅವರು ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾಜಿ ಸಂಸದ ಶತ್ರುಘ್ನ ಸಿನ್ಹಾ ಹಾಗೂ ಗುಜರಾತ್ ಮಾಜಿ ಮುಖ್ಯಮಂತ್ರಿ ಸುರೇಶ್ ಮೆಹ್ತಾ ಉಪಸ್ಥಿತರಿದ್ದರು.