ಧರ್ಮೇಗೌಡರ ಡೆತ್‌ನೋಟ್‌ನಲ್ಲಿ ಸೀಕ್ರೆಟ್ ಮಾಹಿತಿಗಳಿವೆ : ಸಿಎಂ

Spread the love

ಬೆಂಗಳೂರು,ಡಿ.29-ವಿಧಾನಪರಿಷತ್‍ನ ಉಪಸಭಾಪತಿ ಎಸ್.ಎಲ್.ಧರ್ಮೇಗೌಡ ಅವರು ಆತ್ಮಹತ್ಯೆಗೂ ಮುನ್ನ ಬರೆದಿಟ್ಟಿರುವ ಡೆತ್‍ನೋಟ್ ಸಿಕ್ಕಿದೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ತಿಳಿಸಿದ್ದಾರೆ.  ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉಪಸಭಾಪತಿ ಧರ್ಮೇಗೌಡ ಅವರು ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಸುದೀರ್ಘವಾದ ವಿವರವುಳ್ಳ ಡೆತ್‍ನೋಟ್ ಬರೆದಿಟ್ಟಿದ್ದಾರೆ.

ಅದರಲ್ಲಿ ತಮ್ಮ ಕುಟುಂಬದ ಸದಸ್ಯರಿಗೆ ಯಾರ್ಯಾರಿಗೆ ಆಸ್ತಿ ಸೇರಬೇಕು ಸೇರಿದಂತೆ ಕೆಲ ಗೌಪ್ಯ ಮಾಹಿತಿಗಳನ್ನು ಬರೆದಿಟ್ಟಿದ್ದಾರೆ. ಹೆಚ್ಚಿನ ವಿವರಗಳನ್ನು ಮಾಧ್ಯಮಗಳ ಮುಂದೆ ಬಹಿರಂಗಪಡಿಸುವುದಿಲ್ಲ ಎಂದರು.  ಇಂದು ಸಂಜೆ ಧರ್ಮೆಗೌಡ ಅವರ ಅಂತ್ಯಕ್ರಿಯೆ ಸಕಲ ಸರ್ಕಾರಿ ಗೌರವಗಳೊಂದಿಗೆ ನಡೆಯಲಿದೆ.

ಕೋವಿಡ್ ನಿಯಮದಂತೆ ಅಂತ್ಯಕ್ರಿಯೆಯನ್ನು ನಡೆಸುವಂತೆ ಜಿಲ್ಲಾ ಆಡಳಿತಕ್ಕೆ ಸೂಚನೆ ನೀಡಲಾಗಿದೆ. ನಾನು ಕೂಡ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲಿದ್ದೇನೆ ಎಂದರು. ಮೂಲತಃ ಧರ್ಮೆಗೌಡ ಅವರು ಸ್ಥಳೀಯ ಸಂಸ್ಥೆ ಮೂಲಕ ರಾಜಕಾರಣ ಆರಂಭಿಸಿದವರು.

ಗ್ರಾಮ ಪಂಚಾಯ್ತಿಯಿಂದ ಹಿಡಿದು ವಿಧಾನಸಭೆವರೆಗೂ ತಮ್ಮದೇ ಆದ ಸೇವೆ ಸಲ್ಲಿಸಿದ್ದಾರೆ. ಮೃಧು ಸ್ವಭಾವದವರಾಗಿದ್ದು, ಯಾವ ಕಾರಣಕ್ಕಾಗಿ ಇಂತಹ ದೃಢ ನಿರ್ಧಾರ ಕೈಗೊಂಡಿದ್ದರೋ ಗೊತ್ತಿಲ್ಲ. ಇಂಥ ಘಟನೆ ನಡೆಯಬಾರದಿತ್ತು ಎಂದು ವಿಷಾದಿಸಿದರು.

ಧರ್ಮೇಗೌಡ ಅವರ ಆತ್ಮಹತ್ಯೆ ರಾಜಕೀಯ ಕಗ್ಗೊಲೆ ಎಂಬ ಎಚ್.ಡಿ.ಕುಮಾರಸ್ವಾಮಿ ಅವರ ಆರೋಪಕ್ಕೆ ಯಡಿಯೂರಪ್ಪ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ.