ಬೆಂಗಳೂರು,ಆ.29- ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ದಿಢೀರನೇ ಮಾಜಿ ಸಿಎಂ ಯಡಿಯೂರಪ್ಪ ಅವರನ್ನು ಭೇಟಿಯಾಗಿ ಕೆಲವು ಮಹತ್ವದ ವಿದ್ಯಮಾನಗಳ ಬಗ್ಗೆ ಚರ್ಚೆ ನಡೆಸಿದ್ದಾರೆ. ಏಕಾಏಕಿ ಕಾವೇರಿ ನಿವಾಸಕ್ಕೆ ಆಗಮಿಸಿದ ಅವರು, ಸುಮಾರು ಅರ್ಧಗಂಟೆಗೂ ಹೆಚ್ಚು ಕಾಲ ಪಕ್ಷದ ಹಿರಿಯ ನಾಯಕರೂ ಅಗಿರುವ ಬಿಎಸ್‍ವೈ ಬಳಿ ಮಾತುಕತೆ ನಡೆಸಿರುವುದು ಮಹತ್ವ ಪಡೆದುಕೊಂಡಿದೆ.
ರಾಜ್ಯದ ಪ್ರಮುಖ ಮಠಾೀಧಿಶರ ವಿರುದ್ಧ ಕೇಳಿಬಂದಿರುವ ಲೈಂಗಿಕ ಪ್ರಕರಣ ದಿನದಿಂದ ದಿನಕ್ಕೆ ಹೊಸ ತಿರುವು ಪಡೆದುಕೊಳ್ಳುತ್ತಿದ್ದು, ಸರ್ಕಾರದ ನಿಲುವಿನ ಬಗ್ಗೆಯೂ ಉಭಯ ನಾಯಕರು ಕಾನೂನು ಕ್ರಮದ ಬಗ್ಗೆ ಚರ್ಚೆ ನಡೆಸಿದ್ದಾರೆಂದು ತಿಳಿದುಬಂದಿದೆ.
ಪ್ರಕರಣದಲ್ಲಿ ಸರ್ಕಾರದ ನಿಲುವು ಏನಾಗಿರಬೇಕು, ಶ್ರೀಗಳಿಗೆ ನೈತಿಕ ಬೆಂಬಲ ನೀಡಬೇಕೆ ಇತ್ಯಾದಿ ಕಾನೂನಿನ ಅಂಶಗಳ ಬಗ್ಗೆ ಮಾತುಕತೆ ನಡೆಸಲಾಗಿದೆ. ಇದೇ ವೇಳೆ ರಾಜ್ಯದ ವಿವಿಧೆಡೆ ಜನೋತ್ಸವ ನಡೆಸುವ ಬಗ್ಗೆಯೂ ಉಭಯ ನಾಯಕರು ಚರ್ಚೆ ಮಾಡಿದರು.
ಇತ್ತೀಚೆಗೆ ಯಡಿಯೂರಪ್ಪ ಅವರು ದೆಹಲಿಗೆ ತೆರಳಿ ಪ್ರಧಾನಿ ನರೇಂದ್ರಮೋದಿ, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜ.ಪಿ.ನಡ್ಡಾ, ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಮತ್ತಿತರರನ್ನು ಭೇಟಿಯಾಗಿದ್ದರು. ದೆಹಲಿ ಭೇಟೆ ಬಗ್ಗೆಯೂ ಮಾತುಕತೆ ನಡೆಸಲಾಗಿದೆ ಎಂದು ಮೂಲಗಳು ತಿಳಿಸಿವೆ.