ಬೆಂಗಳೂರು,ಫೆ.24- ಇಂತಹ ಇಳಿವಯಸ್ಸಿನಲ್ಲೂ ನಾಡಿನ ಜಲ, ನೆಲ, ಭಾಷೆ, ರೈತರ ಬಗ್ಗೆ ಚಿಂತನೆ ನಡೆಸುವ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ನಮ್ಮೆಲ್ಲರಿಗೂ ಆದರ್ಶಪ್ರಾಯರು ಎಂದು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ವಿಧಾನಸಭೆಯಲ್ಲಿಂದು ಮುಕ್ತಕಂಠದಿಂದ ಹೊಗಳಿಸಿದರು.
ವಿಧಾನಸಭೆಯಲ್ಲಿಂದು ತಮ್ಮ ಕೊನೆಯ ಭಾಷಣ ಮಾಡಿದ ಅವರು, ಸದನದಲ್ಲಿರುವ ಪ್ರತಿಯೊಬ್ಬರಿಗೂ ಅವರು ಆದರ್ಶಪ್ರಾಯರು. ಇಂಥ ವಯಸ್ಸಿನಲ್ಲೂ ಅವರು ನಾಡಿನ ಬಗ್ಗೆ ಇಟ್ಟುಕೊಂಡಿರುವ ಕಳಕಳಿ, ರೈತರ ಬಗ್ಗೆ ಚಿಂತನೆ, ಬದ್ದತೆ, ನಮಗೆ ಪ್ರೇರಣೆ ಎಂದು ಶ್ಲಾಘಿಸಿದರು.
ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರು ಸದನದಲ್ಲಿ ಸರ್ಕಾರಕ್ಕೆ ಸಾಕಷ್ಟು ಸಲಹೆಗಳನ್ನು ನೀಡಿದ್ದಾರೆ. ಕಲಾಪದಲ್ಲಿ ಅವರು ಚರ್ಚಿಸುವ ವೇಳೆ ಸಾಕಷ್ಟ ಸಿದ್ದತೆ ಮಾಡಿಕೊಂಡು ತಪ್ಪು ಮಾಡಿದಾಗ ಕಿವಿ ಹಿಂಡುತ್ತಿದ್ದರು. ಅಗತ್ಯ ಬಿದ್ದಾಗ ಸದನಕ್ಕೆ ಸಲಹೆಗಳನ್ನು ಕೊಟ್ಟಿದ್ದಾರೆ. ಇದರಿಂದ ಸಾಕಷ್ಟು ಲಾಭವಾಗಿದೆ ಎಂದರು.
ರಾಜ್ಯದಲ್ಲಿ ಬಿಜೆಪಿಗೆ ಮತ್ತೆ ಅಧಿಕಾರ : ಯಡಿಯೂರಪ್ಪ ಶಪಥ
ಸಭಾಧ್ಯಕ್ಷರಾಗಿ ನೀವು(ವಿಶ್ವೇಶ್ವರ ಹೆಗಡೆ ಕಾಗೇರಿ) ಉತ್ತಮವಾಗಿ ಮುನ್ನಡೆಸಿದ್ದೀರಿ. ಈಗ ಅಧ್ಯಕ್ಷರಾಗಿ ಉತ್ತಮ ಕಾರ್ಯ ಮಾಡಿದ್ದೀರಿ. ಮುಂದೆ ಚುನಾವಣೆಯಲ್ಲಿ ಗೆದ್ದು ಮಂತ್ರಿಯಾಗಿ ನಿಮ್ಮ ಅನುಭವವನ್ನು ರಾಜ್ಯಕ್ಕೆ ಧಾರೆ ಎರೆಯಿರಿ ಎಂದು ಆಶಿಸಿದರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ. ಪ್ರಜಾಪ್ರಭುತ್ವದಲ್ಲಿ ಟೀಕೆಟಿಪ್ಪಣಿಗಳು ಸರ್ವೆ ಸಾಮಾನ್ಯ. ಆದರೂ ರಾಜ್ಯವನ್ನು ಅಭಿವೃದ್ಧಿಯತ್ತ ಕೊಂಡೊಯ್ಯುತ್ತಿದ್ದಾರೆ. ಅವರಿಗೆ ಸಚಿವರು, ಶಾಸಕರು ಬೆಂಬಲ ಕೊಟ್ಟಿದ್ದಾರೆ.
ಅನೇಕ ಕ್ರಾಂತಿಕಾರಕ ನಿರ್ಧಾರಗಳನ್ನು ತೆಗೆದುಕೊಂಡಿದ್ದಾರೆ. ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗಕ್ಕೆ ಮೀಸಲಾತಿ ಹೆಚ್ಚಳ ಸೇರಿದಂತೆ ಹಲವಾರು ಕ್ರಮಗಳನ್ನು ತೆಗೆದುಕೊಂಡಿದ್ದಾರೆ ಎಂದು ಹೇಳಿ ಭಾಷಣವನ್ನು ಮುಕ್ತಾಯಗೊಳಿಸಿದರು.
#Yediyurappa, #Devegowda, #praised, #Assembly,