RSS ಬಗ್ಗೆ ರಾಜಕೀಯ ನಾಯಕರು ಹಗುರವಾಗಿ ಮಾತನಾಡುವುದು ಸರಿಯಲ್ಲ : ಬಿಎಸ್‌ವೈ

Spread the love

ವಿಜಯಪುರ,ಅ.21- ಆರ್‌ಎಸ್‌ಎಸ್‌ ಬಗ್ಗೆ ರಾಜಕೀಯ ನಾಯಕರು ಹಗುರವಾಗಿ ಮನಬಂದಂತೆ ಮಾತನಾಡುವುದು ಸರಿಯಲ್ಲ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ. ಸುದ್ದಿಗಾರರ ಜೊತೆ ಮಾತನಾಡಿದ ಅವರು, ಆರ್ ಎಸ್ ಎಸ್ ಬಗ್ಗೆ ಮಾತನಾಡಿ ಸಿದ್ದರಾಮಯ್ಯ ಮತ್ತು ಕುಮಾರಸ್ವಾಮಿಯವರು ಜನರ ಮುಂದೆ ಇನ್ನಷ್ಟು ಚಿಕ್ಕವರಾಗುತ್ತಾರೆ. ಮಾಜಿ ಮುಖ್ಯಮಂತ್ರಿಗಳಾಗಿ ಅವರ ಘನತೆ, ಗೌರವಕ್ಕೆ ಇದು ಶೋಭೆ ತರುವ ವಿಚಾರವಲ್ಲ ಎಂದಿದ್ದಾರೆ.

ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಬಗ್ಗೆ ಹಗುರವಾಗಿ ಮತನಾಡಬಾರದು. ಸಂಘದ ಬಗ್ಗೆ ಟೀಕೆ ಮಾಡುವವರಿಗೆ ಗೊತ್ತಿರಲಿ, ಈ ದೇಶದ ರಾಷ್ಟ್ರಪತಿ ಕೂಡ ಸಂಘದ ಕಾರ್ಯಕರ್ತ. ದೇಶದ ಪ್ರಧಾನಿ ಕೂಡ ಆರ್‌ಎಸ್‌ಎಸ್‌ ಸಂಘದ ಹಿನ್ನೆಲೆಯವರೇ ಎಂದು ಕುಟುಕಿದರು.

ನಾನು ಸಹ ಆರ್‌ಎಸ್‌ಎಸ್‌ ನಿಂದ ಬಂದವನು. ಈ ದೇಶದಲ್ಲಿ 26 ರಾಜ್ಯಗಳಲ್ಲಿ ನಾವು ಅಧಿಕಾರದಲ್ಲಿದ್ದೇವೆ. ಎಲ್ಲರೂ ಆರ್‌ಎಸ್‌ಎಸ್‌ ನಿಂದ ಬಂದವರು. ಸಂಘದ ಬಗ್ಗೆ ಕೇಳುವ ನೈತಿಕ ಹಕ್ಕು ಕುಮಾರಸ್ವಾಮಿ ಅವರಿಗಿಲ್ಲ. ಸಂಘದ ಬಗ್ಗೆ ಕುಮಾರಸ್ವಾಮಿ ಪ್ರಶ್ನೆ ಮಾಡುವ ಅಗತ್ಯತೆ ಇಲ್ಲ, ಉತ್ತರ ನೀಡುವ ಅಗತ್ಯತೆಯೂ ಇಲ್ಲ ಎಂದು ತಿರುಗೇಟು ಕೊಟ್ಟರು. ಯಾವ ಪಕ್ಷದ ಬಗ್ಗೆಯೂ ಯಾರೂ ಹಗುರವಾಗಿ ಮಾತನಾಡಬಾರದು. ಮುಸ್ಲಿಮರ ಓಲೈಕೆಗೆ ಹೆಚ್‍ಡಿಕೆ ಹೀಗೆ ಮಾತನಾಡುತ್ತಿದ್ದಾರೆ. ಆರ್‌ಎಸ್‌ಎಸ್‌ ವಿರುದ್ಧ ಮಾತಾಡಿದರೆ ಮುಸ್ಲಿಂ ವೋಟು ಸಿಗುತ್ತವೆ ಎಂಬ ಭ್ರಮೆಯಲ್ಲಿದ್ದಾರೆ ಇದ್ದಾರೆ ಟಾಂಗ್ ಕೊಟ್ಟರು.

ಜನ ಬಿಜೆಪಿ ಕೈ ಹಿಡಿಯುತ್ತಾರೆ: ಉಪಚುನಾವಣೆ ಬಳಿಕ ರಾಜ್ಯ ಪ್ರವಾಸ ಶುರು ಮಾಡ್ತೀನಿ, ಮುಂಬರುವ ಸಾರ್ವತ್ರಿಕ ಚುನಾವಣೆಯ ದೃಷ್ಟಿಯಿಂದ ರಾಜ್ಯಪ್ರವಾಸ ಮಾಡುತ್ತೇನೆ. ಪ್ರತಿ ಜಿಲ್ಲೆ ಜಿಲ್ಲೆಗೂ ಭೇಟಿ ಕೊಡುತ್ತಿದ್ದೇನೆ ಎಂದು ಇದೇ ವೇಳೆ ತಿಳಿಸಿದರು. ಇನ್ನು ಎರಡು ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಗೆಲುವು ಸಾಸಲಿದ್ದಾರೆ.

ನಾನು ಪ್ರಚಾರಕ್ಕೆ ಹೋದ ಸಮಯದಲ್ಲಿ ಉತ್ತಮ ಜನ ಬೆಂಬಲ ವ್ಯಕ್ತವಾಗಿದೆ. ಜನರು ಈ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿಸಲಿದ್ದಾರೆ. ನಿರೀಕ್ಷೆ ಮಿರಿ ಜನ ಮೆರವಣಿಗೆಯಲ್ಲಿ ಭಾಗವಹಿಸಿದ್ದಾರೆ. ನನ್ನ ಅಧಿವಯಲ್ಲಾದ ಅಭಿವೃದ್ಧಿ ಕೆಲಸ ಹಾಗೂ ಬೊಮ್ಮಾಯಿ ಸರ್ಕಾರದಲ್ಲಿ ನಡೆಯುತ್ತಿರುವ ಉತ್ತಮ ಕೆಲಸದಿಂದಾಗಿ ಜನ ಮತ್ತೆ ಪಕ್ಷವನ್ನು ಬೆಂಬಲಿಸುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಯಾವುದೇ ಪಕ್ಷದ ಬಗ್ಗೆ ಯಾರೂ ಹಗುರವಾಗಿ ಮಾತನಾಡಬಾರದು. ದೇವೇಗೌಡರು ಸಹಿತ ಮತಕ್ಷೇತ್ರದಲ್ಲೇ ಉಳಿದು ತಮ್ಮ ಅಭ್ಯರ್ಥಿಯ ಪರವಾಗಿ ಪ್ರಚಾರ ಆರಂಭಿಸಿದ್ದಾರೆ. ಆದರೆ ಇಂದು ಜನರ ಒಲವು ಬಿಜೆಪಿಯತ್ತ ಇದೆ ಎಂದರು. ಎರಡೂ ಚುನಾವಣೆಯಲ್ಲಿ ಜನ ನಮ್ಮ ಪರವಾಗಿ ತೀರ್ಪು ನೀಡುತ್ತಾರೆ ಎಂಬ ವಿಶ್ವಾಸವಿದೆ. ಪ್ರಧಾನಿ ಮೋದಿ ಸಾಧನೆ, ರಾಜ್ಯ ಸರ್ಕಾರದ ಸಾಧನೆಗಳ ಬಗ್ಗೆ ಜನರಿಗೆ ಮನವರಿಕೆ ಮಾಡುವ ಕೆಲಸ ಮಾಡುತ್ತೇವೆ ಎಂದು ಹೇಳೀದರು.

ನನ್ನ ರಾಜಕೀಯ ಜೀವನದಲ್ಲಿ ಅಲ್ಪಸಂಖ್ಯಾತ ಮುಸ್ಲಿಂ ಬಂಧುಗಳಿಗೆ ಅನ್ಯಾಯ ಮಾಡುವ ಕೆಲಸ ಮಾಡಿಲ್ಲ. ನಾವು ಅಥವಾ ಪ್ರಧಾನಿ ಮೋದಿಯವರು ಹಿಂದೂಗಳಿಗೆ ಕೊಟ್ಟು ಅಲ್ಪಸಂಖ್ಯಾತರ ಕೊಡದೇ ಇರುವ ಯಾವುದಾದರೂ ಒಂದು ಕಾರ್ಯಕ್ರಮ ತೋರಿಸಿ ಎಂದು ಸವಾಲು ಹಾಕಿದರು.

ಪ್ರಧಾನಿ ಮೋದಿಯವರಾಗಲಿ, ನಾವಾಗಲಿ ಎಲ್ಲ ಕಾಲದಲ್ಲೂ ಎಲ್ಲ ಯೋಜನೆಗಳನ್ನು ಹಿಂದು ಮುಸ್ಲಿಂ ಕ್ರೈಸ್ತ ರೆಂದು ಬೇಧ ಭಾವ ಮಾಡದೇ ಕೊಟ್ಟಿದ್ದೇವೆ ಎಂದರು.

ಅನ್ನ ಭಾಗ್ಯದ ಅಕ್ಕಿ ಕೊಟ್ಟಿದ್ದು ಕೇಂದ್ರ ಸರ್ಕಾರ. ಯಡಿಯೂರಪ್ಪ ಅಥವಾ ಸಿದ್ದರಾಮಯ್ಯ ಕೊಟ್ಟ ಯೋಜನೆ ಅಲ್ಲ. ಭಾಗಲಕ್ಷ್ಮೀ ಯೋಜನೆ, ಕಿಸಾನ್ ಸಮ್ಮಾನ್ ಯೋಜನೆ ಸೇರಿದಂತೆ ಹಲವು ಕಾರ್ಯಕ್ರಮ ಕೊಟ್ಟಿದ್ದೇವೆ. ಈ ಕಾರ್ಯಕ್ರಮದ ಫಲವಾಗಿಯೇ ಇಂದು ದೇಶದಲ್ಲಿ ಬಿಜೆಪಿಯ ಪರವಾಗಿ ಜನರ ಒಲವಿದೆ ಎಂದು ತಿಳಿಸಿದರು.

Facebook Comments