ದಲಿತರ ಆತಿಥ್ಯ ಸ್ವೀಕರಿಸಿದ ಮುಖ್ಯಮಂತ್ರಿ ಬೊಮ್ಮಾಯಿ

Social Share

ಹೊಸಪೇಟೆ, ಅ.12- ಕಮಲಾಪುರ ಗ್ರಾಮದ ಅಂಬೇಡ್ಕರ್ ನಗರದ ಹಿರಾಳ ಕೊಲ್ಲಾರಪ್ಪ ಅವರ ಮನೆಯಲ್ಲಿ ಬೆಳಿಗ್ಗೆಯಿಂದಲೇ ಸಡಗರದ ವಾತಾವರಣ. ಅಡುಗೆ ಮನೆಯಲ್ಲಿ ಅವರ ಪುತ್ರಿಯರಾದ ಹುಲಿಗೆಮ್ಮ ಹಾಗೂ ರೇಣುಕಾ ಬೆಳಗಿನ ಉಪಾಹಾರದ ತಯಾರಿಯಲ್ಲಿ ನಿರತರು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗಾಗಿ ಕೇಸರಿಬಾತ್, ಮಂಡಕ್ಕಿ ಒಗ್ಗರಣೆ, ಮಿರ್ಚಿ, ಉಪ್ಪಿಟ್ಟಿನ ತಯಾರಿಯಲ್ಲಿದ್ದರು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಸಚಿವರಾದ ಗೋವಿಂದ ಕಾರಜೋಳ, ಆನಂದ್ ಸಿಂಗ್ ಅವರೊಂದಿಗೆ ಆಗಮಿಸಿದ ಮುಖ್ಯಮಂತ್ರಿಗಳು ಕಮಲಾಪುರ ಅಂಬೇಡ್ಕರ್ ನಗರದ ದಲಿತ ಹಿರಾಳ ಕೊಲ್ಲಾರಪ್ಪ ಅವರ ಮನೆಯಲ್ಲಿ ಬೆಳಗಿನ ಉಪಾಹಾರ ಸವಿದರು. ಕೊಲ್ಲಾರಪ್ಪ ಕುಟುಂಬದವರೊಂದಿಗೆ ಕುಶಲೋಪರಿ ವಿಚಾರಿಸಿದರು.

ಕೊಲ್ಲಾರಪ್ಪನವರ ಮೊಮ್ಮಗಳು ಅಶ್ವಿನಿ ತಡಕಲ್ ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಓದುತ್ತಿರುವ ವಿಷಯ ತಿಳಿದು ಮೆಚ್ಚುಗೆ ವ್ಯಕ್ತಪಡಿಸಿದರು. ಅವಳ ಶಿಕ್ಷಣ, ಕಾಲೇಜು ವಾತಾವರಣ ಮೊದಲಾದ ಕುರಿತು ಮಾಹಿತಿ ಪಡೆದರು.

ಕಾಲೇಜು ಚೆನ್ನಾಗಿದೆ. ಆದರೆ ಮೆಸ್‍ಬಿಲ್ ದುಬಾರಿ ಎಂದು ಆಕೆ ಮುಖ್ಯಮಂತ್ರಿಯವರ ಗಮನ ಸೆಳೆದಾಗ ಇದನ್ನು ಸರಿಪಡಿಸುವುದಾಗಿ ಭರವಸೆ ನೀಡಿದರು. ಮನೆಯವರು ಪ್ರೀತಿಯಿಂದ ಉಣಬಡಿಸಿದ ಉಪಾಹಾರ, ಚಹಾ ಸೇವಿಸಿ ಮುಂದಿನ ಕಾರ್ಯಕ್ರಮಕ್ಕೆ ತೆರಳಿದರು.

Articles You Might Like

Share This Article