ಬೆಂಗಳೂರು, ಜ.29- ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಮೊಮ್ಮಗಳು ಡಾ.ಸೌಂದರ್ಯ ಅವರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪೊಲೀಸರು ತನಿಖೆ ಮುಂದುವರೆದಿದ್ದು, ಹಲವರ ಹೇಳಿಕೆ ಗಳನ್ನು ದಾಖಲಿಸುತ್ತಿದ್ದಾರೆ. ಎಂ.ಎಸ್.ರಾಮಯ್ಯ ಆಸ್ಪತ್ರೆಯಲ್ಲಿ ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದ ಡಾ.ಸೌಂದರ್ಯ ನಿನ್ನೆ ಬೆಳಗ್ಗೆ ತಮ್ಮ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು.
ಅಂತ್ಯಕ್ರಿಯೆ ವಿಧಿವಿಧಾನಗಳು ನಿನ್ನೆ ಸಂಜೆ ಮುಕ್ತಾಯವಾದವು. ಆತ್ಮಹತ್ಯೆಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ. ಮೂಲಗಳ ಪ್ರಕಾರ ಸೌಂದರ್ಯ ಖಿನ್ನತೆಯಿಂದ ಬಳಲುತ್ತಿದ್ದರು ಎಂದು ಹೇಳಲಾಗುತ್ತಿದೆ. ಪ್ರಕರಣ ದಾಖಲಿಸಿರುವ ಹೈಗ್ರೌಂಡ್ ಠಾಣೆಯ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಡಾ.ನೀರಜ್ ಮತ್ತು ಸೌಂದರ್ಯ ದಂಪತಿ ವಾಸಿಸುತ್ತಿದ್ದ ಅಪಾರ್ಟ್‍ಮೆಂಟ್‍ನ ನೆರೆ ಹೊರೆಯವರು, ಮನೆ ಕೆಲಸದವರು ಹಾಗೂ ಭದ್ರತಾ ಸಿಬ್ಬಂದಿಗಳ ಹೇಳಿಕೆ ದಾಖಲಿಸಿಕೊಂಡಿದ್ದಾರೆ. ಈ ಮೊದಲು ಸೌಂದರ್ಯ ಅವರು ಕೆಲಸ ಮಾಡುತ್ತಿದ್ದ ಎಂ.ಎಸ್.ರಾಮಯ್ಯ ಆಸ್ಪತ್ರೆಯಲ್ಲಿನ ಸಹದ್ಯೋಗಿಗಳಿಂದಲೂ ಮಾಹಿತಿ ಪಡೆಯಲಾಗುತ್ತಿದೆ.
ಮನೆಯನ್ನೂ ಸಂಪೂರ್ಣವಾಗಿ ಶೋಧ ನಡೆಸಲಾಗಿದ್ದು,ಯಾವುದೇ ಪತ್ರಗಳು ಪತ್ತೆಯಾಗಿಲ್ಲ ಎಂದು ಹಿರಿಯ ಅಧಿಕಾರಿಗಳು ಈ ಸಂಜೆಗೆ ಸ್ಪಷ್ಟ ಪಡಿಸಿದ್ದಾರೆ. ಆರು ತಿಂಗಳ ಮಗುವನ್ನು ಬಿಟ್ಟು ಸೌಂದರ್ಯ ಆತ್ಮಹತ್ಯೆ ಮಾಡಿಕೊಂಡಿದ್ದು, ಈ ಪ್ರಕರಣ ಜನ ಸಾಮಾನ್ಯರ ಮನಕುಲಕಿದೆ.
