ಮುಂದಿನ 3 ದಿನ ಭಾರಿ ಮಳೆ ಸಾಧ್ಯತೆ : ಕೊಡಗು, ಉಡುಪಿ, ಚಿಕ್ಕಮಗಳೂರಿನಲ್ಲಿ ಯೆಲ್ಲೊ ಅಲರ್ಟ್

ಬೆಂಗಳೂರು,ಆ.27- ರಾಜ್ಯದಲ್ಲಿ ನೈರುತ್ಯ ಮುಂಗಾರು ಚುರುಕಾಗಿದ್ದು, ಬಹುತೇಕ ಎಲ್ಲ ಜಿಲ್ಲೆಗಳಲ್ಲಿ ಚದುರಿದಂತೆ ಸಾಧಾರಣ ಮಳೆಯಾಗಿದೆ. ಹವಾ ಮುನ್ಸೂಚನೆ ಪ್ರಕಾರ ಮುಂದಿನ ಮೂರು ದಿನಗಳ ಕಾಲ ಉತ್ತಮ ಮಳೆಯಾಗಲಿದೆ. ಕೋಲಾರ,ಬೆಂಗಳೂರು ಗ್ರಾಮಾಂತರ, ಮಲೆನಾಡಿನ ಕೆಲವು ಭಾಗಗಳಲ್ಲಿ ಮಾತ್ರ ಹೆಚ್ಚಿನ ಪ್ರಮಾಣದ ಮಳೆಯಾಗಿದೆ. ಉಳಿದಂತೆ ಚದುರಿದಂತೆ ಹಗರದಿಂದ ಸಾಧಾರಣ ಮಳೆಯಾಗಿದೆ.

ಹವಾ ಮುನ್ಸೂಚನೆ ಪ್ರಕಾರ ಉಡುಪಿ, ದಕ್ಷಿಣ ಕನ್ನಡ, ಚಾಮರಾಜನಗರ, ಮೈಸೂರು, ಚಿಕ್ಕಮಗಳೂರು, ಕೊಡುಗು, ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಗಳಿವೆ.ಈ ಜಿಲ್ಲೆಗಳಲ್ಲಿ ನಾಳೆಯವರೆಗೆ ಹವಾಮಾನ ಇಲಾಖೆ ಯೆಲ್ಲೊ ಅಲರ್ಟ್ ಘೋಷಣೆ ಮಾಡಿದೆ. ಆ.29-30ರವರೆಗೆ ಆರೆಂಜ್ ಅಲರ್ಟ್ ಘೋಷಣೆ ಮಾಡಿರುವುದಾಗಿ ಬೆಂಗಳೂರಿನ ಭಾರತೀಯ ಹವಾಮಾನ ಇಲಾಖೆ ನಿರ್ದೇಶಕ ಸಿ.ಎಸ್.ಪಾಟೀಲ್ ತಿಳಿಸಿದ್ದಾರೆ.

ಉತ್ತರ ಕರ್ನಾಟಕ ಭಾಗದಲ್ಲಿ ಮುಂದಿನ ಮೂರು ದಿನಗಳ ಕಾಲ ಚದುರಿದಂತೆ ಸಾಧಾರಣ ಮಳೆಯಾದರೆ ಕರಾವಳಿ ಹಾಗೂ ದಕ್ಷಿಣ ಒಳನಾಡಿನ ಬಹುತೇಕ ಎಲ್ಲ ಕಡೆಗಳಲ್ಲಿ ವ್ಯಾಪಕ ಪ್ರಮಾಣದ ಮಳೆಯಾಗುವ ಲಕ್ಷಣಗಳು ಗೋಚರಿಸುತ್ತಿವೆ ಎಂದಿದ್ದಾರೆ. ಅರಬ್ಬಿ ಸಮುದ್ರದ ಕರ್ನಾಟಕ, ಕೇರಳ ಭಾಗದಲ್ಲಿ ಕಡಿಮೆ ಒತ್ತಡವಿರುವ ವಿಸ್ತರಿಸಿರುವ ಪ್ರದೇಶ ಉಂಟಾಗಿರುವ ಹಿನ್ನೆಲೆಯಲ್ಲಿ ಮೋಡ ಕವಿದ ವಾತಾವರಣ ಕಂಡುಬರುತ್ತಿದ್ದು, ಸಂಜೆ ಹಾಗೂ ರಾತ್ರಿ ವೇಳೆ ಮಳೆಯಾಗುತ್ತಿದೆ.

ಕಳೆದ ಮೂರ್ನಾಲ್ಕು ದಿನಗಳಿಂದ ಇದೇ ರೀತಿ ಮಳೆಯಾಗುತ್ತಿದ್ದು, ಸೋಮವಾರದವರೆಗೆ ಮಳೆ ಮುಂದುವರೆಯುವ ಮುನ್ಸೂಚನೆಗಳು ಕಂಡುಬರುತ್ತಿವೆ ಎಂದು ಹೇಳಿದ್ದಾರೆ.ಮುಂಗಾರು ಚುರುಕಾಗಿರುವುದರಿಂದ ಕಾವೇರಿ ಜಲಾನಯನ ಭಾಗದಲ್ಲಿ ಉತ್ತಮ ಮಳೆ ನಿರೀಕ್ಷಿಸಲಾಗಿದೆ. ಮುಂದಿನ ಮೂರು ದಿನಗಳ ಕಾಲ ನಿರೀಕ್ಷೆಯಂತೆ ಭಾರೀ ಮಳೆಯಾದರೆ ಪ್ರಮುಖ ಜಲಾಶಯಗಳಿಗೂ ಒಳಹರಿವು ಹೆಚ್ಚಾಗಲಿದೆ.

ಕಳೆದ ಮೂರು ವಾರಗಳಿಂದ ಮುಂಗಾರು ದುರ್ಬಲಗೊಂಡಿದ್ದರ ಪರಿಣಾಮ ರಾಜ್ಯದ ಪ್ರಮುಖ ಜಲಾಶಯಗಳ ಒಳಹರಿವಿನ ಪ್ರಮಾಣದಲ್ಲಿ ಗಣನೀಯವಾಗಿ ಇಳಿಕೆಯಾಗಿತ್ತು. ಮತ್ತೆ ಮುಂಗಾರು ಚೇತರಿಕೆ ಕಂಡಿರುವುದರಿಂದ ಜಲಾಶಯಗಳಿಗೆ ಹರಿದುಬರುವ ನೀರಿನ ಪ್ರಮಾಣ ಹೆಚ್ಚಾಗುವ ಸಂಭವವಿದ್ದು, ಜಲಾಶಯಗಳು ಭರ್ತಿಯಾಗುವ ಸಾಧ್ಯತೆಗಳು ಹೆಚ್ಚಾಗಿ ಕಂಡುಬರುತ್ತಿದೆ.