ಬೆಂಗಳೂರು, ಜ.11- ಸಿಲಿಕಾನ್ ಸಿಟಿ, ಉದ್ಯಾನ ನಗರಿ, ಐಟಿ-ಬಿಟಿ ಎಂದೆಲ್ಲಾ ಹೆಸರು ಪಡೆದು ಜಗತ್ತಿನೆಲ್ಲೆಡೆ ವಿಶೇಷ ಗಮನ ಸೆಳೆದಿರುವ ನಮ್ಮ ಬೆಂಗಳೂರಿನ ಯಶವಂತಪುರದ ಎಪಿಎಂಸಿ ಮಾರುಕಟ್ಟೆ ಗಬ್ಬು ನಾರುತ್ತಿದೆ.
ಎಪಿಎಂಸಿ ಯಾರ್ಡ್ ಕಸದ ರಾಶಿಯಿಂದ ಕೊಳೆತು ರೋಗ-ರುಜಿನಗಳ ತಾಣವಾಗಿ ಪರಿಣಮಿಸಿದೆ. ತಿಂಗಳುಗಳಿಂದ ಕಸ ವಿಲೇವಾರಿ ಮಾಡಿಲ್ಲ, ಹಾಗಾಗಿ ಕಸ ಕೊಳೆತು ಗಬ್ಬು ವಾಸನೆ ಬೀರುತ್ತಿದೆ. ಇಲ್ಲಿ ಓಡಾಡುವವರು ಮೂಗು ಮುಚ್ಚಿಕೊಂಡೇ ಓಡಾಡುವುದು ಅನಿವಾರ್ಯ ವಾಗಿದೆ.
ತರಕಾರಿ ಮಾರುಕಟ್ಟೆ ದಾಸನಪುರಕ್ಕೆ ವರ್ಗಾವಣೆ ಯಾಗಿ ವರ್ಷಗಳು ಕಳೆದರೂ ಇಲ್ಲಿಯೇ ಕೆಲವರು ತರಕಾರಿ ಮಾರಾಟ ಮಾಡುತ್ತಿದ್ದಾರೆ. ಆದರೆ, ಇವರೆಲ್ಲ ಇನ್ನೂ ಏಕೆ ಇಲ್ಲೇ ವ್ಯಾಪಾರ ಮಾಡುತ್ತಿದ್ದಾರೆ ಎಂಬುದಕ್ಕೆ ಮಾತ್ರ ಉತ್ತರವಿಲ್ಲ.
ಕೊಳೆತ ಕಸದ ರಾಶಿಯಿಂದ ಮಾರಕ ರೋಗಗಳು ಹರಡುತ್ತವೆ ಎಂಬುದು ಎಪಿಎಂಸಿ ಅಧಿಕಾರಿಗಳಿಗೆ ತಿಳಿದಿದ್ದರೂ ಜಾಣಕುರುಡರಾಗಿರುವುದು ವಿಪರ್ಯಾಸವೇ ಸರಿ.
ಮೆಟ್ರೋ ಪಿಲ್ಲರ್ ದುರಂತ : NCC ಕಂಪೆನಿ, 7 ಮಂದಿ ವಿರುದ್ಧ FIR
ಇಲ್ಲಿರುವ ಅಂಗಡಿಯವರಿಂದ ಎಪಿಎಂಸಿ ಬಾಡಿಗೆ ಮಾತ್ರ ತೆಗೆದುಕೊಳ್ಳುತ್ತದೆ, ತರಕಾರಿ ಮಾರಾಟ ಮಾಡುವವರ ಹತ್ತಿರವೂ ಶುಲ್ಕ ಸಂಗ್ರಹಿಸುತ್ತದೆ. ಆದರೆ ಕಸವನ್ನು ಏಕೆ ವಿಲೇವಾರಿ ಮಾಡಿಸುತ್ತಿಲ್ಲ ಎಂಬುದು ಯಕ್ಷಪ್ರಶ್ನೆ ಯಾಗಿದೆ.
ಮಾರುಕಟ್ಟೆಯ ಕಾಂಪೌಂಡ್ಗೆ ಹೊಂದಿ ಕೊಂಡಂತಿರುವ ಮನೆಗಳಿಗೆ ಕೆಟ್ಟ ವಾಸನೆ ಬೀರುತ್ತಿದ್ದು, ನಿವಾಸಿಗಳು ರೋಗ-ರುಜಿನ ಬರುವ ಆತಂಕದಲ್ಲಿ ದಿನದೂಡುವಂತಾಗಿದೆ. ಬೆಂಗಳೂರಿನ ವಿವಿಧ ಭಾಗಗಳಿಂದ ಇದೇ
ಯಾರ್ಡ್ಗೆ ಬಂದು ಜನ ತರಕಾರಿ ತೆಗೆದುಕೊಂಡು ಹೋಗುವ ಜತೆಗೆ ಮಾರಕ ರೋಗವನ್ನೂ ಒಯ್ಯುವಂತಾಗಿದೆ.
ಇದಕ್ಕೆಲ್ಲ ಮುಕ್ತಿ ಯಾವಾಗ: ಈ ಯಾರ್ಡ್ ಆವರಣದಲ್ಲಿ ಕಳೆ ಗಿಡಗಳು ಬೆಳೆದಿದ್ದು, ವಿಷಜಂತುಗಳು ಯಾವಾಗ ಎಲ್ಲಿ ಬರುತ್ತವೆಯೋ ಎಂಬ ಆತಂಕ ಎದುರಾಗಿದೆ. ಸೊಳ್ಳೆ, ನೊಣಗಳ ಕಾಟದಿಂದ ಮಾರಕ ರೋಗಕ್ಕೆ ತುತ್ತಾಗುತ್ತೇವೋ ಎಂಬ ಭಯದ ನೆರಳಿನಲ್ಲೇ ವಾಸಿಸು ವಂತಾಗಿದೆ ಎಂದು ಈ ಸಂಜೆ ಪತ್ರಿಕೆಯೊಂದಿಗೆ ಇಲ್ಲಿನ ನಿವಾಸಿಗಳು ಅಳಲು ತೋಡಿ ಕೊಂಡಿದ್ದಾರೆ.
ಸ್ಯಾಂಟ್ರೋ ರವಿ ಬಂಧನಕ್ಕೆ 4 ವಿಶೇಷ ತಂಡ ರಚನೆ
ರಸ್ತೆಯಲ್ಲಿ ಓಡಾಡಬೇಕಾದರೆ ಮೂಗು ಮುಚ್ಚಿ ಓಡಾಡುವ ಸ್ಥಿತಿ ಇದೆ. ನಮ್ಮ ಸಮಸ್ಯೆಗಳನ್ನು ಕೇಳುವವರೇ ಇಲ್ಲದಂತಾಗಿದೆ. ತಕ್ಷಣ ಬಿಬಿಎಂಪಿ ಅಥವಾ ಸಂಬಂಧಪಟ್ಟವರು ಇತ್ತ ಗಮನ ಹರಿಸಿ ಪರಿಹಾರ ಒದಗಿಸಬೇಕೆಂದು ಸ್ಥಳೀಯರು ಮನವಿ ಮಾಡಿದ್ದಾರೆ.
Yeshwantpur, APMC, market, Garbage,