ನಗ್ನ ವಿಡಿಯೋ ಮಾಡಿ 5 ಲಕ್ಷ ಹಣಕ್ಕೆ ಬೇಡಿಕೆ ಇಟ್ಟಿದ್ದ ಯುವತಿಯರ ಗ್ಯಾಂಗ್ ಅಂದರ್..!

Spread the love

ಬೆಳಗಾವಿ, ಡಿ.4- ಸಾಲದ ಹಣ ಮರಳಿಸುವುದಾಗಿ ಹೇಳಿ ಬಟ್ಟೆ ವ್ಯಾಪಾರಿಯೊಬ್ಬನನ್ನು ಮನೆಗೆ ಕರೆದೊಯ್ದು, ಬೆತ್ತಲುಗೊಳಿಸಿ ನಗ್ನ ವಿಡಿಯೋ ಮಾಡಿ ಆತನಿಗೇ ಹಣಕ್ಕೆ ಬೇಡಿಕೆಯಿಟ್ಟಿದ್ದ ಖತರ್ನಾಕ್ ಗ್ಯಾಂಗನ 6 ಮಂದಿಯನ್ನು ಬೆಳಗಾವಿಯ ಮಾಳಮಾರುತಿ ಠಾಣಾ ಪೊಲೀಸರು ಬಂಧಿಸಿದ್ದಾರೆ.

ಮಹಾಂತೇಶ ನಗರದ ಬಿಬಿ ಆಯೇಷಾ ಶೇಖ್, ಆಶ್ರಯ ಕಾಲೋನಿ ರುಕ್ಮಿಣಿ ನಗರ ನಿವಾಸಿ ಹೀನಾ ಅಕ್ಬರ್ ಸವಣೂರ, ಅಲೀಶಾನ್ ಶಾಬುದ್ದೀನ್, ಅಖೀಬ್ ಅಲ್ಲಾಭ ಬೇಪಾರಿ, ಸಲ್ಮಾನ್ ಗುಲಾಜ್ಬೇಗ್ ಹಾಗೂ ಓರ್ವ ಅಪ್ರಾಪ್ತ ಬಾಲಕ ಬಂಧಿತ ಆರೋಪಿಗಳಾಗಿದ್ದಾರೆ.

ಬಟ್ಟೆ ವ್ಯಾಪಾರಿ ಎಂ.ಎಂ. ಮುಜಾವರ್‍ಗೆ 6 ಲಕ್ಷ ರೂ. ನೀಡಬೇಕಿದ್ದ ಆರೋಪಿ ಬಿಬಿ ಆಯೇಷಾ, ನಿಮಗೆ ಕೊಡಬೇಕಾಗಿರುವ ಹಣ ಮನೆಯಲ್ಲಿದೆ ಬನ್ನಿ ಹಣ ಕೊಡುತ್ತೇವೆ ಎಂದು ಕರೆದುಕೊಂಡು ಹೋಗಿ ತನ್ನ ಗ್ಯಾಂಗ್ ಜೊತೆ ಸೇರಿಕೊಂಡು ಬಟ್ಟೆ ವ್ಯಾಪಾರಿಯನ್ನು ಮನೆಯೊಂದರಲ್ಲಿ ಕೂಡಿಹಾಕಿದ್ದಳು. ನಂತರ ಬಟ್ಟೆ ವ್ಯಾಪಾರಿಯ ನಗ್ನ ವಿಡಿಯೋ ಮಾಡಿ ತಾವೇ 5 ಲಕ್ಷ ರೂ. ಹಣಕ್ಕೆ ಬೇಡಿಕೆ ಇಟ್ಟಿದ್ದರು. ಹಣ ನೀಡದಿದ್ದರೆ ಅತ್ಯಾಚಾರ ಪ್ರಕರಣ ದಾಖಲಿಸುವುದಾಗಿ ಬೆದರಿಕೆಯನ್ನೂ ಹಾಕಿದ್ದರು.

ಗ್ಯಾಂಗ್ ಹಾಕಿದ ಬೆದರಿಕೆಗೆ ಹೆದರಿದ ಬಟ್ಟೆ ವ್ಯಾಪಾರಿ ಮುಜಾವರ್ ಮನೆಗೆ ಹೋಗಿ ಹಣ ತರುವುದಾಗಿ ಹೇಳಿ ಅಲ್ಲಿಂದ ವಾಪಾಸ್ ಬಂದಿದ್ದರು. ಬಳಿಕ ನೇರವಾಗಿ ಮಾಳಮಾರುತಿ ಠಾಣೆಗೆ ತೆರಳಿ ದೂರು ನೀಡಿದ್ದರು. ದೂರು ಆಧರಿಸಿ ಕಾರ್ಯಾಚರಣೆ ನಡೆಸಿದ ಪೊಲೀಸರು 6 ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ.

ಬಟ್ಟೆ ವ್ಯಾಪಾರಿಯಿಂದ ಕಸಿದುಕೊಂಡಿದ್ದ 16,500 ಹಣ, ಕೈಗಡಿಯಾರ, ವಿಡಿಯೋ ಮಾಡಲು ಬಳಸಿದ ಮೊಬೈಲ್‍ಗಳು, ಅಪರಾಧಕ್ಕೆ ಉಪಯೋಗಿಸಿದ 3 ಮೋಟರ್ ಸೈಕಲ್‍ಗಳನ್ನು ಜಪ್ತಿ ಮಾಡಿ ಆರೋಪಿಗಳೆಲ್ಲರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗಿದೆ.

Facebook Comments