ಬೆಂಗಳೂರು, ಜು.16- ತನ್ನ ತಂಗಿಯನ್ನು ಚುಡಾಯಿಸುತ್ತಿದ್ದ ಯುವಕನ ತಲೆಗೆ ದೊಣ್ಣೆಯಿಂದ ಹೊಡೆದು ಕೊಲೆ ಮಾಡಿರುವ ಘಟನೆ ಬಯ್ಯಪ್ಪನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿ ಯಲ್ಲಿ ರಾತ್ರಿ ನಡೆದಿದೆ. ನಾಗಶೆಟ್ಟಿಹಳ್ಳಿಯ ನಿವಾಸಿ ಪ್ರಜ್ವಲ್(21) ಕೊಲೆಯಾದ ಯುವಕ. ಪರಾರಿಯಾಗಿರುವ ಆರೋಪಿಗಾಗಿ ಪೊಲೀಸರು ಶೋಧ ಕೈಗೊಂಡಿದ್ದಾರೆ.
ಆರೋಪಿ ತಂಗಿಯನ್ನು ಪ್ರಜ್ವಲ್ ಚುಡಾಯಿಸುತ್ತಿದ್ದ. ಈ ವಿಷಯವನ್ನು ಆಕೆ ತನ್ನ ಸಹೋದರನ ಬಳಿ ಹೇಳಿಕೊಂಡಿದ್ದಳು. ಇದೇ ಕೋಪದಿಂದ ಆತನ ಮೇಲೆ ದ್ವೇಷ ಸಾಸುತ್ತಿದ್ದನು. ರಾತ್ರಿ 10.30ರ ಸುಮಾರಿನಲ್ಲಿ ನ್ಯೂ ಬಯ್ಯಪ್ಪನಹಳ್ಳಿಯ ಮೆಟ್ರೋ ರೈಲು ನಿಲ್ದಾಣದ ಬಳಿ ತಂಗಿಯನ್ನು ಚುಡಾಯಿಸುತ್ತಿದ್ದ ಪ್ರಜ್ವಲ್ ಜೊತೆ ಜಗಳವಾಡಿದ ಆರೋಪಿ ದೊಣ್ಣೆಯಿಂದ ಆತನ ತಲೆ ಹಾಗೂ ಇತರೆ ಭಾಗಗಳಿಗೆ ಮನಬಂದಂತೆ ಹೊಡೆದಿದ್ದಾನೆ.
ಹಲ್ಲೆಯಿಂದ ಗಂಭೀರ ಗಾಯಗೊಂಡಿದ್ದ ಪ್ರಜ್ವಲ್‍ನನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾನೆ. ಸಿ.ವಿ.ರಾಮನ್ ಆಸ್ಪತ್ರೆಯಲ್ಲಿ ಮೃತದೇಹ ಇರಿಸಲಾಗಿದೆ. ಈ ಸಂಬಂಧ ಬಯ್ಯಪ್ಪನಹಳ್ಳಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಪರಾರಿಯಾಗಿರುವ ಆರೋಪಿಗಾಗಿ ಶೋಧ ಕೈಗೊಂಡಿದ್ದಾರೆ.