ಬೆಂಗಳೂರು,ಜು.30- ಕಾಂಗ್ರೆಸ್ ಸರ್ಕಾರ ಇದ್ದಿದ್ದರೆ ಕಲ್ಲು ಹೊಡೆಸಬಹುದಿತ್ತು ಎಂದು ಹೇಳಿಕೆ ನೀಡಿದ್ದ ಸಂಸದ ತೇಜಸ್ವಿ ಸೂರ್ಯ ಅವರ ಮನೆ ಎದುರು ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ.ನಗರದಲ್ಲಿರುವ ಸಂಸದರ ನಿವಾಸದತ್ತ ಮೆರವಣಿಗೆ ಹೊರಟ ಕಾಂಗ್ರೆಸ್ ಕಾರ್ಯಕರ್ತರು ಕಲ್ಲುಗಳನ್ನು ಕೊಟ್ಟು, ಹೊಡೆಸುವಂತೆ ಸವಾಲು ಹಾಕುವ ಪ್ರಯತ್ನ ಮಾಡಿದ್ದಾರೆ. ಜೊತೆಗೆ ಕಲ್ಲು ಹೊಡೆಯುವ ಮನಸ್ಥಿತಿ ಬೇಡ ಎಂದು ತಿಳಿ ಹೇಳಲು ಹೂಗಳನ್ನು ಉಡುಗೊರೆ ನೀಡಲು ಯತ್ನಿಸಿದ್ದಾರೆ.
ಸಂಸದರ ಮನೆಯತ್ತ ಹೊರಟಿದ್ದ ಕಾಂಗ್ರೆಸ್ ಕಾರ್ಯಕರ್ತರನ್ನು ಪೊಲೀಸರು ಅರ್ಧ ದಾರಿಯಲ್ಲೇ ತಡೆದು ವಶಕ್ಕೆ ಪಡೆದುಕೊಂಡಿದ್ದಾರೆ. ಹೀಗಾಗಿ ಪ್ರತಿಭಟನೆಗೆ ಅವಕಾಶ ಸಿಗದೆ ಕಾರ್ಯಕರ್ತರು ಪೊಲೀಸರೊಂದಿಗೆ ವಾಗ್ವಾದ ನಡೆಸಿದ್ದಾರೆ. ತಳ್ಳಾಟ, ನೂಕಾಟ ಕೂಡ ನಡೆದಿದೆ.
ಈ ನಡುವೆ ಕಾಂಗ್ರೆಸ್ ಕಾರ್ಯಕರ್ತೆ ಮೀನಾ ಅವರು ಸಂಸದರ ಮನೆಯ ಒಳಗೆ ಹೋಗಿ ಹೂಗಳನ್ನು ಇಟ್ಟು ಹೊರಬಂದಿದ್ದಾರೆ. ಈ ಸಂದರ್ಭದಲ್ಲಿ ಪೊಲೀಸರು ಆಕೆಯನ್ನು ವಶಕ್ಕೆ ಪಡೆದಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಮೀನಾ, ಕಾಂಗ್ರೆಸ್ ಸರ್ಕಾರವಿದ್ದರೆ ಕಲ್ಲು ಹೊಡೆಸಬಹುದಿತ್ತು ಎಂದು ಸಂಸದರು ಬೇಜಾವಬ್ದಾರಿ ಹೇಳಿಕೆ ನೀಡಿದ್ದಾರೆ. ಅವರು ನಮಗೆ ಕಲ್ಲು ಹೊಡೆಸಿದರೂ ಪರವಾಗಿಲ್ಲ ನಾವು ಅವರಿಗೆ ಹೂಗಳನ್ನು ಕೊಡುತ್ತೇವೆ ಎಂದು ಹೇಳಿದ್ದಾರೆ.
ಸಂಸದ ತೇಜಸ್ವಿ ಸೂರ್ಯ ಇತ್ತೀಚೆಗೆ ಚಿಕ್ಕಮಗಳೂರು ಜಿಲ್ಲೆಯ ಬಿಜೆಪಿ ಯುವ ಘಟಕದ ಪದಾಕಾರಿಗಳೊಂದಿಗೆ ಸಂಭಾಷಣೆ ನಡೆಸುವಾಗ ಆಕ್ಷೇಪಾರ್ಹ ಹೇಳಿಕೆಗಳನ್ನು ಹೇಳಿದ್ದರು. ಕಾಂಗ್ರೆಸ್ ಸರ್ಕಾರವಿದ್ದರೆ ನಾವು ಕಲ್ಲು ಹೊಡೆಯಬಹುದಿತ್ತು. ಆದರೆ ಬಿಜೆಪಿ ಸರ್ಕಾರವಿದೆ. ಸಹನೆಯಿಂದ ವರ್ತಿಸಿ ಎಂದು ಮನವೊಲಿಸುವ ಯತ್ನ ನಡೆಸಿದರು.
ದಕ್ಷಿಣ ಕನ್ನಡದಲ್ಲಿ ನಡೆದ ಸರಣಿ ಹತ್ಯೆಗಳ ಹಿನ್ನೆಲೆಯಲ್ಲಿ ಬಿಜೆಪಿಯ ಪದಾಕಾರಿಗಳು ರಾಜೀನಾಮೆ ನೀಡುತ್ತಿದ್ದಾರೆ. ಇದನ್ನು ತಡೆಯುವ ಯತ್ನದಲ್ಲಿ ಸಂಸದ ತೇಜಸ್ವಿ ಸೂರ್ಯ ಪಕ್ಷದ ಪದಾಕಾರಿಗಳ ಜೊತೆ ಸಂಭಾಷಣೆ ನಡೆಸಿದರು.