ಯುವಶಕ್ತಿ ಸರಿಯಾಗಿ ಬಳಸಿಕೊಳ್ಳದ ಮೋದಿ : ಸಿದ್ದರಾಮಯ್ಯ ಟೀಕೆ

Social Share

ಬೆಂಗಳೂರು,ಜು.11- ಪ್ರಧಾನಿ ನರೇಂದ್ರಮೋದಿ ಅವರು ಯುವಶಕ್ತಿಯನ್ನು ಸರಿಯಾಗಿ ಬಳಸಿಕೊಳ್ಳುತ್ತಿಲ್ಲ. ಉದ್ಯೋಗ ಸೃಷ್ಟಿಸುತ್ತಿಲ್ಲ. ಇದರಿಂದ ದೇಶ ಆರ್ಥಿಕತೆಯಲ್ಲಿ ಕುಸಿತ ಕಾಣುತ್ತಿದೆ ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದಾರೆ.

ನಗರದ ಅರಮನೆ ಮೈದಾನದಲ್ಲಿ ಯುವ ಕಾಂಗ್ರೆಸ್‍ನಿಂದ ಆಯೋಜಿಸಿದ್ದ ಯುವಜನೋತ್ಸವದಲ್ಲಿ ಮಾತನಾಡಿದ ಅವರು, ಭಾರತ ತನ್ನ ಸಂಖ್ಯೆಯಲ್ಲಿ ಶೇ.50ಕ್ಕಿಂತಲೂ ಹೆಚ್ಚಿನ ಯುವ ಶಕ್ತಿಯನ್ನು ಹೊಂದಿದೆ. ಜಗತ್ತಿನ ಯಾವ ದೇಶದಲ್ಲೂ ಇಷ್ಟು ಯುವ ಸಮುದಾಯವಿಲ್ಲ. ಅವರನ್ನು ಸಮರ್ಥವಾಗಿ ಬಳಸಿಕೊಂಡರೆ ಸದೃಢ ದೇಶ ಕಟ್ಟಲು ಸಾಧ್ಯ. ಆದರೆ ಮೋದಿ ಆ ಕೆಲಸ ಮಾಡುತ್ತಿಲ್ಲ ಎಂದರು.

ಈ ಹಿಂದೆ ಭಾರತ ಜಾಗತಿಕ ಆರ್ಥಿಕತೆಯಲ್ಲಿ 103ನೇ ಸ್ಥಾನದಲ್ಲಿತ್ತು. ಮನಮೋಹನ್ ಸಿಂಗ್ ಅವರ ಆರ್ಥಿಕ ನೀತಿಯಿಂದ ಹಣಕಾಸು ಸ್ಥಿತಿಯಲ್ಲಿ ನಾವು ಬಲಿಷ್ಠವಾಗಿದ್ದೆವು. ಬಿಜೆಪಿ ಆಡಳಿತದಲ್ಲಿ 144ನೇ ಸ್ಥಾನಕ್ಕೆ ಕುಸಿದಿದೆ. ಸಣ್ಣ, ಮಧ್ಯಮ, ಸೂಕ್ಷ್ಮ ಕೈಗಾರಿಕೆಗಳು 10 ಕೋಟಿ ಉದ್ಯೋಗ ಸೃಷ್ಟಿಸಿದ್ದವು. ಬಿಜೆಪಿ ಆಡಳಿತದಲ್ಲಿ ಉದ್ಯೋಗ ಕಡಿತವಾಗಿ ಈಗ 2.3 ಕೋಟಿ ಮಾತ್ರ ಉಳಿದಿವೆ ಎಂದು ಆತಂಕ ವ್ಯಕ್ತಪಡಿಸಿದರು.

ಕೇಂದ್ರ ಸರ್ಕಾರ ಸೇನಾ ನೇಮಕಾತಿಯಲ್ಲಿ ಅಗ್ನಿಪಥ್ ಯೋಜನೆಯನ್ನು ಜಾರಿಗೊಳಿಸಿದೆ. ಈ ಮೊದಲಿದ್ದ 17 ವರ್ಷದ ಸೇವೆಯನ್ನು 4 ವರ್ಷಗಳಿಗೆ ಇಳಿಸಲಾಗಿದೆ. 4 ವರ್ಷದ ಬಳಿಕ ಅಗ್ನಿವೀರರು ಏನು ಮಾಡಬೇಕು ಎಂದು ಪ್ರಶ್ನಿಸಿದರು.
ಪ್ರಧಾನಿಯವರು ಎಲ್ಲಿಯೂ ರೈತರು, ಯುವಕರ ಬಗ್ಗೆ ಮಾತನಾಡಿಲ್ಲ. 2014ರ ಮೊದಲು ಯುವಕರು ಮೋದಿ ಮೋದಿ ಎಂದು ಕೂಗುತ್ತಿದ್ದರು. ಈಗ ಅವರಿಗೆ ದುಸ್ಥಿತಿಯನ್ನು ತಂದಿಡಲಾಗಿದೆ ಎಂದರು.

ಚೀನಾದಲ್ಲಿ ತಲಾ ಆದಾಯ 12500 ಡಾಲರ್ ಇದೆ. ಭಾರತದಲ್ಲಿ ಅದು 1850 ಡಾಲರ್ ಮಾತ್ರ. ತಲಾ ಆದಾಯವನ್ನು ಹೆಚ್ಚಿಸುವ ಪ್ರಯತ್ನವನ್ನು ಮೋದಿ ಸರ್ಕಾರ ಮಾಡಿಲ್ಲ. ರಾತ್ರೋರಾತ್ರಿ ಸಂಸತ್‍ನ ಉಭಯ ಸದನಗಳಲ್ಲಿ ಕಾಯ್ದೆ ಅಂಗೀಕರಿಸಿ ಶೇ.2ರಷ್ಟು ಜನಸಂಖ್ಯೆ ಇರುವ ಮೇಲ್ವರ್ಗಗಳಿಗೆ ಶೇ. 10ರಷ್ಟು ಮೀಸಲಾತಿ ನೀಡುವ ನಿರ್ಣಯ ಕೈಗೊಂಡರು. ಇದು ಇವರ ಸಾಮಾಜಿಕ ನ್ಯಾಯದ ಪಾಲನೆ.

ರಾಜ್ಯದಲ್ಲಿ ಎಲ್ಲ ಕಾಮಗಾರಿಗಳಿಗೂ ಶೇ.40ರಷ್ಟು ಕಮೀಷನ್ ಕೊಡಬೇಕಾಗಿದೆ. ಈ ಬಗ್ಗೆ ಗುತ್ತಿಗೆದಾರರ ಸಂಘ ಪ್ರಧಾನಿಗೆ ನೇರವಾಗಿ ಪತ್ರ ಬರೆದಿದ್ದರೂ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಪಿಎಸ್‍ಐ ನೇಮಕಾತಿಯಲ್ಲಂತೂ ಸಚಿವರಾದ ಅಶ್ವಥ್ ನಾರಾಯಣ, ಆರ್.ಅಶೋಕ್, ಯಡಿಯೂರಪ್ಪ ಸೇರಿದಂತೆ ಎಲ್ಲರೂ ದುಡ್ಡು ಹೊಡೆದಿದ್ದಾರೆ. ಉತ್ತರ ಪತ್ರಿಕೆ ತಿದ್ದಿ ಅವ್ಯವಹಾರ ಮಾಡಿದ್ದಾರೆ ಎಂದು ಅವರು ಗಂಭೀರವಾಗಿ ಆರೋಪಿಸಿದರು.

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಕಾರ್ಯಾಧ್ಯಕ್ಷರಾದ ಸಲೀಂ ಅಹಮ್ಮದ್, ಧ್ರುವನಾರಾಯಣ, ಯುವ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಬಿ.ವಿ.ಶ್ರೀನಿವಾಸ್, ರಾಜ್ಯಾಧ್ಯಕ್ಷ ನಲಪಾಡ್ ಮತ್ತಿತರರು ಉಪಸ್ಥಿತರಿದ್ದರು.

Articles You Might Like

Share This Article