ಬೆಂಗಳೂರು,ಸೆ.20- ನಗರದ ನಡುರಸ್ತೆಯಲ್ಲೇ ಯುವಕರು ತಲ್ವಾರ್ ಹಿಡಿದು ಪುಂಡಾಟ ಮೆರೆದಿದ್ದು, ದಾರಿಹೋಕರು ಭಯಭೀತರಾಗಿದ್ದಾರೆ. ಕ್ವೀನ್ಸ್ ರಸ್ತೆಯ ಬಾಳೆಕುಂದ್ರಿ ಸರ್ಕಲ್ ಬಳಿ ರಾತ್ರಿ 10 ಗಂಟೆ ಸುಮಾರಿನಲ್ಲಿ ಈ ಘಟನೆ ನಡೆದಿದ್ದು, ಪುಂಡಾಟ ಮೆರೆದ ಮೂವರು ಯುವಕರು ಪರಾರಿಯಾಗಿದ್ದಾರೆ.
ಬೈಕ್ ಸವಾರನೊಬ್ಬ ಯುವತಿಯನ್ನು ಬೈಕ್‍ನಲ್ಲಿ ಕರೆದುಕೊಂಡು ಹೋಗುತ್ತಿದ್ದಾಗ ಬಾಳೆಕುಂದ್ರಿ ಸರ್ಕಲ್ ಬಳಿ ಮೂವರು ಯುವಕರು ಬೈಕ್ ಅಡ್ಡಗಟ್ಟಿ ಸವಾರನನ್ನು ಹಿಡಿದುಕೊಂಡು ಥಳಿಸಿದ್ದು, ಒಬ್ಬಾತ ತಲ್ವಾರ್‍ನಿಂದ ಹಲ್ಲೆಗೆ ಯತ್ನಿಸಿದ್ದಾನೆ.
ಪೊಲೀಸ್ ಆಯುಕ್ತರ ಕಚೇರಿ ಸಮೀಪದಲ್ಲೇ, ಜನಸಂದಣಿ ಇರುವ ಈ ರಸ್ತೆಯಲ್ಲಿ ವಾಹನಗಳು ಸಂಚರಿಸುತ್ತಿದ್ದರೂ, ಯಾವುದನ್ನೂ ಲೆಕ್ಕಿಸದೆ, ಯಾರ ಭಯವೂ ಇಲ್ಲದಂತೆ ತಲ್ವಾರ್ ಹಿಡಿದು ಯುವಕರು ಓಡಾಡುತ್ತಿದ್ದುದನ್ನು ಕಂಡು ಭಯಭೀತರಾದ ಸಾರ್ವಜನಿಕರು ಒಂದು ಕ್ಷಣವೂ ಸ್ಥಳದಲ್ಲಿ ನಿಲ್ಲದೆ ಮುಂದೆ ಸಾಗಿದರು.
ಸುದ್ದಿ ತಿಳಿದು ವಿಧಾನಸೌಧ ಠಾಣೆ ಪೊಲೀಸರು ಸ್ಥಳಕ್ಕೆ ಹೋಗುವಷ್ಟರಲ್ಲಿ ಮೂವರು ಪುಂಡರು ಪರಾರಿಯಾಗಿದ್ದಾರೆ.
ಘಟನೆಯ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದ್ದು, ಪೊಲೀಸರು ಪರಿಶೀಲನೆ ನಡೆಸಿ, ತಲ್ವಾರ್ ಹಿಡಿದು ದಾಂದಲೆ ನಡೆಸಿರುವ ಮೂವರ ಪತ್ತೆಕಾರ್ಯ ಕೈಗೊಂಡಿದ್ದಾರೆ. ಹುಡುಗಿ ವಿಚಾರದಲ್ಲಿ ಈ ಘಟನೆ ನೆದಿರಬಹುದೆಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.