“ಡ್ರಗ್ಸ್ ಪ್ರಕರಣದಲ್ಲಿ ನನ್ನ ಪಾತ್ರ ಸಾಬೀತಾದರೆ ಆಸ್ತಿಯನ್ನೆಲ್ಲ ಸರ್ಕಾರಕ್ಕೆ ಬರೆದುಕೊಡ್ತೀನಿ”

ಬೆಂಗಳೂರು, ಸೆ.11-ನಟಿ ಸಂಜನಾರನ್ನು ನಾನು ಭೇಟಿಯಾಗಿಲ್ಲ ಎಂದು ಸ್ಪಷ್ಟ ಪಡಿಸಿರುವ ಶಾಸಕ ಜಮೀರ್ ಅಹಮದ್ ಖಾನ್, ಡ್ರಗ್ಸ್ ಪ್ರಕರಣದಲ್ಲಿ ನನ್ನ ಪಾತ್ರ ಇರುವುದನ್ನು ಸಾಬೀತು ಪಡಿಸಿದರೆ ಸರ್ಕಾರಕ್ಕೆ ನನ್ನ ಆಸ್ತಿ ಬರೆದುಕೊಡುತ್ತೇನೆ ಎಂದು ಸವಾಲು ಹಾಕಿದ್ದಾರೆ.

ಬೆಂಗಳೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶ್ರೀಲಂಕಾದ ಕ್ಯಾಸಿನೋದಲ್ಲಿ ನಾನು ಸಂಜನಾರನ್ನು ಭೇಟಿ ಮಾಡಿದ್ದೆ ಎಂದು ಪ್ರಚಾರ ಮಾಡುತ್ತಿದ್ದಾರೆ. ಶ್ರೀಲಂಕದಲ್ಲಿ ಬಿಡಿ ಬೆಂಗಳೂರಿನಲ್ಲೂ ನಾನು ಆಕೆಯನ್ನು ಮುಖಾಮುಖಿ ಭೇಟಿಯಾಗಿಲ್ಲ.

ಏರ್ಪೋರ್ಟ್ನಲ್ಲಿ, ಬಸ್‍ಸ್ಟ್ಯಾಂಡ್‍ನಲ್ಲೂ ಭೇಟಿಯಾಗಿಲ್ಲ ಎಂದು ಸಿಡಿಮಿಡಿಗೊಂಡರು. ಸಂಜನಾ ಈಗ ಎಲ್ಲಿದ್ದಾರೆ? ಪೊಲೀಸ್ ಕಸ್ಟಡಿಯಲ್ಲಿ ತಾನೇ? ತನಿಖೆ ಮಾಡಲಿ. ನಾನು ಯಾವಾಗ ಭೇಟಿಯಾಗಿದ್ದೆ ಎಂದು ತಿಳಿದುಕೊಳ್ಳಲಿ. ಸುಮ್ಮನೆ ಆರೋಪ ಮಾಡಿ ತೇಜೋವಧೆ ಮಾಡಬಾರದು ಎಂದರು.

ನಾನು ಮುಸಲ್ಮಾನ ಎನ್ನುವ ಕಾರಣಕ್ಕೆ ನನ್ನನ್ನ ಟಾರ್ಗೆಟ್ ಮಾಡಲಾಗುತ್ತಿದೆ. ಕೆಲವರಿಗೆ ನನ್ನ ಬೆಳವಣಿಗೆಯನ್ನು ಸಹಿಸಲು ಆಗುತ್ತಿಲ್ಲ. ಈಗ ರಾಜ್ಯದಲ್ಲಿ, ಕೇಂದ್ರದಲ್ಲಿ ಎರಡು ಕಡೆ ಬಿಜೆಪಿಯ ಸರ್ಕಾರವೇ ಇದೆ. ತನಿಖೆ ಮಾಡಲಿ. ಡ್ರಗ್ಸ ಪ್ರಕರಣದಲ್ಲಿ ನನ್ನ ಪಾತ್ರ ಇರುವ ಬಗ್ಗೆ ಸಾಬೀತು ಪಡಿಸಲಿ.

ಒಂದು ವೇಳೆ ನನ್ನ ಮೇಲಿನ ಆರೋಪ ಸಾಬೀತಾದರೆ ಸರ್ಕಾರಕ್ಕೆ ನನ್ನ ಆಸ್ತಿ ಬರೆದು ಕೊಡ್ತೇನೆ ಎಂದು ಸವಾಲ್ ಹಾಕಿದರು. ಅವನ್ಯಾರೋ ಸಂಬರಗಿ ಆಂತೆ. ಕಾಂಜಿಪೀಂಜಿಗಳ ಮಾತು ಕೇಳಿಕೊಂಡು ಕೂರೋದ್ಯಾಕೆ. ಸರ್ಕಾರ ತನಿಖೆ ಮಾಡಲಿ. ತನಿಖೆಗೆ 200 ಪರ್ಸೆಂಟ್ ಸಹಕಾರ ನೀಡುತ್ತೇನೆ.

ಸುಳ್ಳು ಆರೋಪಗಳ ವಿರುದ್ಧ ನಾನು ಕಾನೂನು ಹೋರಾಟ ಮಾಡುತ್ತೇನೆ ಎಂದು ಹೇಳಿದರು. ಡ್ರಗ್ಸ್ ದಂಧೆಯ ಪ್ರಮುಖ ಆರೋಪಿ ಫಾಜಿಲ್ ನನಗೆ ಆತ್ಮೀಯನಲ್ಲ. ನಾಲ್ಕು ವರ್ಷದ ಹಿಂದೆ ನನಗೆ ಪರಿಚಯ. ಆದರೆ ಈಗ ಇಲ್ಲ.

ನಾಲ್ಕು ವರ್ಷದಿಂದ ಒಂದು ಫೋನ್ ಕೂಡ ಮಾಡಿಲ್ಲ. ನನ್ನ ಹತ್ತಿರ ಯಾರ್ಯಾರೋ ಬರುತ್ತಿರುತ್ತಾರೆ. ಅವರನ್ನೇಲ್ಲಾ ಆತ್ಮೀಯರು ಎಂದು ಹೇಳಲಾಗುತ್ತಾ ಎಂದು ಪ್ರಶ್ನಿಸಿದರು.