ಬೆಂಗಳೂರು,ಜು.26- ಶಾಸಕ ಜಮೀರ್ ಅಹಮ್ಮದ್‍ಖಾನ್ ಅವರಿಗೆ ಕಾಂಗ್ರೆಸ್ ಹೈಕಮಾಂಡ್ ಖಡಕ್ ಎಚ್ಚರಿಕೆ ನೀಡುವ ಮೂಲಕ ಮುಖ್ಯಮಂತ್ರಿ ಹುದ್ದೆಯ ಚರ್ಚೆಯ ವಿವಾದಗಳಿಗೆ ತೆರೆ ಎಳೆಯುವ ಪ್ರಯತ್ನ ನಡೆಸಿದ್ದರೂ ಮಳೆ ನಿಂತರೂ ಹನಿ ನಿಲ್ಲುವುದಿಲ್ಲ ಎಂಬಂತೆ ತೆರೆಮರೆಯಲ್ಲಿ ಭಿನ್ನರೀತಿಯ ಚಟುವಟಿಕೆಗಳು ನಡೆಯುತ್ತಲೇ ಇವೆ.
ಕೆಪಿಸಿಸಿ ಅಧ್ಯಕ್ಷರಿಗೇ ಸವಾಲು ಹೊಡ್ಡುವಂತೆ ಜಮೀರ್ ಅಹಮ್ಮದ್‍ಖಾನ್ ಮುಖ್ಯಮಂತ್ರಿ ಹುದ್ದೆ ಕುರಿತಂತೆ ಹೇಳಿಕೆಗಳನ್ನು ನೀಡುತ್ತಿದ್ದರು. ನಿನ್ನೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸುರ್ಜೆವಾಲಾ ಅಂತಿಮ ಎಚ್ಚರಿಕೆಯ ಪತ್ರ ರೂಪದ ನೋಟಿಸ್ ನೀಡಿ ಬಾಯಿ ಮುಚ್ಚಿಸುವ ಪ್ರಯತ್ನ ಮಾಡಿದ್ದಾರೆ.
ಜಮೀರ್ ಅಹಮ್ಮದ್‍ಖಾನ್ ವಲಸೆ ಬಂದ ನಾಯಕರಾಗಿದ್ದು, ಪಕ್ಷ ನಿಷ್ಠೆಗಿಂತ ವ್ಯಕ್ತಿ ನಿಷ್ಠೆಯಲ್ಲೇ ರಾಜಕೀಯ ಏಳ್ಗೆ ಕಂಡವರು. ಈ ರೀತಿಯ ಬಹಳಷ್ಟು ನಾಯಕರು ಕಾಂಗ್ರೆಸ್‍ನಲ್ಲಿ ಸ್ವ ಕೇಂದ್ರೀಕೃತ ರಾಜಕಾರಣಕ್ಕೆ ಪ್ರಸಿದ್ಧಿಯಾಗಿದ್ದಾರೆ.
ಇತ್ತೀಚೆಗೆ ನಡೆದ ಸಮೀಕ್ಷೆಗಳಲ್ಲಿ ಪಕ್ಷ ಅಧಿಕಾರಕ್ಕೆ ಬರಲಿದೆ ಎಂಬ ಸುಳಿವು ದೊರೆತಿದ್ದೇ ತಡ ಎಲ್ಲರೂ ನಾ ಮುಂದು ತಾ ಮುಂದು ಎಂದು ಮುಖ್ಯಮಂತ್ರಿ ಹುದ್ದೆಯ ಮೇಲೆ ಟವಲ್ ಹಾಕಿ ರಾಜಕಾರಣ ಮಾಡಲು ಆರಂಭಿಸಿದರು.
ಪ್ರತಿ ಹಂತದಲ್ಲೂ ಪ್ರಾಬಲ್ಯ ಸಾಧಿಸುವುದಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿರುವ ಕಾಂಗ್ರೆಸಿಗರು ಸರ್ಕಾರದ ವೈಫಲ್ಯಗಳನ್ನು ಜನರಿಗೆ ತಲುಪಿಸಿ ಪ್ರಬಲ ವಿಪಕ್ಷವಾಗಿ ಕೆಲಸ ಮಾಡುವಲ್ಲಿ ಉದಾಸೀನತೆ ತೋರಿಸುತ್ತಿದ್ದಾರೆ. ಹೀಗಾಗಿ ಜನರ ಬಹುತೇಕ ಗಂಭೀರ ಸಮಸ್ಯೆಗಳ ಬಗ್ಗೆ ಚರ್ಚೆಯೇ ಇಲ್ಲವಾಗಿದೆ. ಬೆಲೆ ಹೇರಿಕೆ, ದುಬಾರಿಗೆ ತೆರಿಗೆ, ಅನಗತ್ಯವಾದ ವಿವಾದಿತ ಕಾನೂನುಗಳು, ಸಾಮಾರಸ್ಯ ಕದಡುವಿಕೆ ವಿಚಾರಗಳನ್ನು ಕಾಂಗ್ರೆಸ್ ನೇಮಪಾತ್ರಕ್ಕೆ ಪ್ರಸ್ತಾಪಿಸಿ ಕೈ ತೊಳೆದುಕೊಳ್ಳುತ್ತಿದೆ.
ಯಾವ ವಿಷಯದಲ್ಲೂ ತಾರ್ಕಿಕ ಅಂತ್ಯವಿಲ್ಲದೆ ಹೊಂದಾಣಿಕೆ ರಾಜಕೀಯ ಮಾಡುತ್ತಿದೆ ಎಂಬ ಅಸಮಾಧಾನಗಳು ತಳಮಟ್ಟದ ರಾಜಕೀಯ ಕಾರ್ಯಕರ್ತರಲ್ಲಿ ಮಡುಗಟ್ಟಿದೆ.
ನಾಯಕರ ಭಟ್ಟಂಗಿತನಗಳಿಂದಾಗಿ ಪಕ್ಷ ಮೂಲ ಉದ್ದೇಶಗಳಿಂದ ಹಾದಿ ತಪ್ಪಿದ್ದು, ಪ್ರಬಲ ವಿರೋಧ ಪಕ್ಷವಾಗಿ ಕೆಲಸ ಮಾಡಲು ವಿಫಲವಾಗಿದೆ ಎಂಬ ಆರೋಪಗಳಿವೆ. ಇದರ ನಡುವೆ ಜಮೀರ್ ಅವರಂತಹ ನಾಯಕರು ಜಾತಿ, ಸಮುದಾಯದಂತಹ ವಿಷಯಗಳಲ್ಲಿ ವಿವಾದಗಳನ್ನು ಸೃಷ್ಟಿಸಿ ಕಾಂಗ್ರೆಸ್‍ಗೆ ಹಾನಿ ಮಾಡುತ್ತಿರುವುದನ್ನು ಹೈಕಮಾಂಡ್ ಗಂಭೀರವಾಗಿ ಪರಿಗಣಿಸಿದೆ ಎಂಬ ಸಮಾಧಾನಗಳು ಪಕ್ಷದಲ್ಲಿ ಕೇಳಿ ಬರುತ್ತಿದೆ.