ಬೆಂಗಳೂರು,ಸೆ.1-ಚಾಮರಾಜಪೇಟೆ ಈದ್ಗಾ ಮೈದಾನದಲ್ಲಿ ಗಣೇಶೋತ್ಸವ ವಿಚಾರದಲ್ಲಿ ಶಾಸಕ ಜಮೀರ್ ಆಹ್ಮದ್ಖಾನ್ ನಡೆದುಕೊಂಡ ರೀತಿ ಇದೀಗ ಸಾರ್ವಜನಿಕರ ಟೀಕೆಗೆ ಗುರಿಯಾಗಿದೆ.ಮೈದಾನದಲ್ಲಿ ಗಣೇಶೋತ್ಸವಕ್ಕೆ ನಾನು ಅಡ್ಡಿಪಡಿಸುವು ದಿಲ್ಲ ಎಂಬ ಹೇಳಿಕೆ ನೀಡಿಕೊಂಡೇ ವಕ್ಬೋರ್ಡ್ ಜೊತೆ ಜಮೀರ್ ಶಾಮಿಲಾಗಿದ್ದಾರೆ ಎಂದು ಚಾಮರಾಜಪೇಟೆ ನಾಗರಿಕರು ಆರೋಪಿಸಿದ್ದಾರೆ.
ವಕ್ಬೋರ್ಡ್ ಸದಸ್ಯರ ಜೊತೆ ದೆಹಲಿಗೆ ತೆರಳಿದ್ದ ಜಮೀರ್ ಅವರು ಖ್ಯಾತ ವಕೀಲ ಕಪಿಲ್ ಸಿಬಾಲ್ ಅವರನ್ನು ಭೇಟಿಯಾಗಿ ಸುಪ್ರೀಂ ಕೋರ್ಟ್ನಲ್ಲಿ ಈದ್ಗಾ ಮೈದಾನ ವಿಚಾರಣೆ ನಡೆಸಲು ಸಹಕರಿಸಿ ಗಣೇಶೋತ್ಸವ ತಪ್ಪಿಸುವಲ್ಲಿ ಜಮೀರ್ ಪ್ರಮುಖ ಪಾತ್ರ ವಹಿಸಿದ್ದಾರೆ ಎನ್ನುವುದು ಚಾಮರಾಜಪೇಟೆ ನಾಗರಿಕರ ಆರೋಪವಾಗಿದೆ.
ಮೂರು ದಿನ ದೆಹಲಿಯಲ್ಲೇ ವಾಸ್ತವ್ಯ ಹೂಡಿದ್ದ ಜಮೀರ್ ಅವರು ವಕ್ ಬೋರ್ಡ್ ಅಧ್ಯಕ್ಷ ಶಫಿ ಸಾಅದಿ ಜೊತೆಯಲ್ಲಿರುವ ಛಾಯಾಚಿತ್ರಗಳು ಇದೀಗ ಎಲ್ಲೆಡೆ ಹರಿದಾಡುತ್ತಿವೆ.ಚಾಮರಾಜಪೇಟೆ ಮೈದಾನದಲ್ಲಿ ಗಣೇಶೋತ್ಸವ ಆಚರಿಸುವ ಬಗ್ಗೆ ಅಲ್ಲಿನ ಹೈಕೋರ್ಟ್ ನಲ್ಲಿ ಹೊಸ ವಿಚಾರಣೆ ನಡೆಸಿ ಅಂತ ಸುಪ್ರೀಂ ಕೋರ್ಟ್ ಆದೇಶ ನೀಡಿತ್ತು.
ಈ ತೀರ್ಪು ಹೊರಬೀಳುತ್ತಿದ್ದಂತೆ ವಕ್ ಬೋರ್ಡ್ ಪರ ವಕೀಲ ಕಪಿಲ್ ಸಿಬಲ್ ಅವರಿಗೆ ಜಮೀರ್ ಹೂಗುಚ್ಚ ನೀಡಿ ಧನ್ಯವಾದ ತಿಳಿಸಿದ್ದರು. ಜಮೀರ್ ಅವರಿಗೆ ಹಿಂದೂಗಳ ಮತ ಬೇಕು ಆದ್ರೆ ಅವರ ಹಬ್ಬಗಳು ಬೇಡ್ವಾ? ಅವರು ಒಂದು ಸಮುದಾಯದ ಪರ ನಿಂತಿದ್ದೇ ನಮ್ಮ ಸೋಲಿಗೆ ಕಾರಣ. ಅಂತಹವರಿಗೆ ಮುಂದಿನ ಚುನಾವಣೆಯಲ್ಲಿ ನಾವು ತಕ್ಕ ಪಾಠ ಕಲಿಸುತ್ತೇವೆ ಎಂದು ಚಾಮರಾಜಪೇಟೆ ನಾಗರಿಕರ ಒಕ್ಕೂಟದ ಅಧ್ಯಕ್ಷ ರಾಮೇಗೌಡ ಆಕ್ರೋಶ ವ್ಯಕ್ತಪಡಿಸಿದ್ದಾರೆ.