ಉಕ್ರೇನ್,ಮಾ.8- ರಷ್ಯಾ ಮತ್ತು ಉಕ್ರೇನ್ ನಡುವಿನ ಮಿಲಿಟರಿ ಸಂಘರ್ಷ 13ನೇ ದಿನಕ್ಕೆ ಕಾಲಿಟ್ಟಿದೆ. ಉಕ್ರೇನ್ ಅಧ್ಯಕ್ಷ ವೋಡ್ಲಿಮಿರ್ ಝೆಲೆನ್ಸ್ಕಿ ರಾಷ್ಟ್ರವನ್ನುದ್ದೇಶಿಸಿ ಮಾತನಾಡಿ, ನಾನು ಕ್ಯಿವ್ ನಗರದಲ್ಲಿಯೇ ಇದ್ದೇನೆ. ಎಲ್ಲೂ ಅಡಗಿಕೊಳ್ಳುವುದಿಲ್ಲ, ಯಾರಿಗೂ ಹೆದರುವುದಿಲ್ಲ. ನಮ್ಮ ದೇಶಭಕ್ತಿ ಯುದ್ಧ ಗೆಲ್ಲುತ್ತದೆ ಎಂದು ಹೇಳಿದ್ದಾರೆ.
ಈ ಕುರಿತು ತಡರಾತ್ರಿ ತಮ್ಮ ಫೆಸ್‍ಬುಕ್ ಪುಟದಲ್ಲಿ ಪೋಸ್ಟ್ ಮಾಡಿದ ವಿಡಿಯೋದಲ್ಲಿ ಮಾತನಾಡಿರುವ ಅವರು, ತಮ್ಮ ಕಚೇರಿಯಿಂದ ತಾವಿರುವ ನಗರವನ್ನು ತೋರಿಸಿದ್ದಾರೆ. ಈ ವೇಳೆ ನಾನು ಕ್ಯಿವ್‍ನ ಬಂಕೋವಾ ಸ್ಟ್ರೀಟ್‍ನಲ್ಲಿ ಇದ್ದೇನೆ. ಎಲ್ಲೂ ಅವಿತುಕೊಂಡಿಲ್ಲ. ಯಾರಿಗೂ ಹೆದರುವುದಿಲ್ಲ. ನಮ್ಮ ದೇಶಭಕ್ತಿ ಈ ರೀತಿಯ ಇದೆ. ಆದಷ್ಟು ಬೇಗ ಈ ದೇಶಭಕ್ತಿ ಯುದ್ದವನ್ನು ಗೆಲ್ಲುತ್ತದೆ ಎಂದಿದ್ದಾರೆ.
ಉಕ್ರೇನಿಯನ್ ಮತ್ತು ರಷ್ಯಾದ ನಿಯೋಗಗಳು ಬೆಲರಾಸ್ ಪೋಲೆಂಡ್ ಗಡಿಯಲ್ಲಿ ನಡೆಸಿದ ಮೂರನೇ ಸುತ್ತಿನ ಶಾಂತಿ ಮಾತುಕತೆ ಕೂಡ ವಿಫಲವಾದ ಬೆನ್ನಲ್ಲೆ ಝೆಲೆನ್ಸ್ಕಿ ಅವರು ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
Russia-Ukraine war : ಝಲೆನ್‍ಸ್ಕಿ ಹತ್ಯೆಗೆ ಸ್ಕೆಚ್
ರಷ್ಯಾದ ನಿಯೋಗದ ಮುಖ್ಯಸ್ಥರಾಗಿರುವ ರಷ್ಯಾದ ಅಧ್ಯಕ್ಷೀಯ ಸಹಾಯಕ ವಾಡ್ಲಿಮಿರ್ ಮೆಡಸ್ಕಿ ಅವರ ಪ್ರಕಾರ, ರಾಜಕೀಯ ಮತ್ತು ಮಿಲಿಟರಿ ಅಂಶಗಳ ಬಗ್ಗೆ ಚರ್ಚೆಗಳು ಮುಂದುವರೆದಿದ್ದರೂ ಅವು ಕಷ್ಟಕರವಾಗಿರುತ್ತದೆ. ರಷ್ಯಾ ಕಡೆಯವರು ರ್ನಿಷ್ಟ ಒಪ್ಪಂದಗಳನ್ನು ಒಳಗೊಂಡ ದೊಡ್ಡ ಪ್ರಮಾಣದ ದಾಖಲೆಗಳನ್ನು ಸಭೆಗೆ ತಂದಿದ್ದರು. ಆದರೆ ಉಕ್ರೇನ್ ನಿಯೋಗ ಸ್ಥಳದಲ್ಲಿಯೇ ಸಹಿ ಹಾಕಲು ನಿರಾಕರಿಸಿದೆ.
ಈ ಎಲ್ಲ ದಾಖಲೆಗಳನ್ನು ಅಧ್ಯಯನ ಮಾಡಲು ತೆಗೆದುಕೊಂಡು ಹೋಗಿದ್ದಾರೆ. ಇನ್ನು ನಾಗರಿಕರ ಸ್ಥಳಾಂತರ ವಿಚಾರಕ್ಕೆ ಎರಡು ರಾಷ್ಟ್ರಗಳು ಒಪ್ಪಿವೆ ಎಂದು ಮೆಡೆನ್ಸ್ಕಿ ಹೇಳಿದ್ದಾರೆ. ಕದನ ವಿರಾಮ ಘೋಷಿಸದಿರುವ ನಗರಗಳಲ್ಲಿ ತೀವ್ರ ಪ್ರಮಾಣದ ದಾಳಿ ಮತ್ತು ಪ್ರತಿ ದಾಳಿಗಳು ಆಗಿವೆ. ಮುಂಜಾನೆ ಅಲ್ಲಲ್ಲಿ ಸ್ಪೋಟದ ಶಬ್ದಗಳು ಕೇಳಿಬಂದಿವೆ. ಒಡೆಸ್ಸಾದಲ್ಲಿ ಉಕ್ರೇನ್ ಪಡೆಗಳು ರಷ್ಯಾದ ನೌಕಾಪಡೆಯನ್ನು ಉರುಳಿಸಿವೆ ಎಂದು ಬಿಬಿಸಿ ವರದಿ ಮಾಡಿದೆ.
ರಷ್ಯಾ ಬೆಂಬಲಿತ ಡೊಂಟೆಸ್ಟ್ ಪ್ರದೇಶದಲ್ಲಿ ಹೆಚ್ಚು ಮಂದಿ ಸಂಪರ್ಕ ಕಡಿದುಕೊಂಡಿದ್ದಾರೆ. ಸುಮಾರು 2.38 ಲಕ್ಷ ಮಂದಿಗೆ ಅಡುಗೆ ಅನಿಲವಿಲ್ಲದೆ ಸಂಕಷ್ಟದಲ್ಲಿದ್ದಾರೆ. ದಾಳಿಗಳ ಮೂಲಕ ಪವರ್‍ಗ್ರಿಡ್‍ಗಳಿಗೆ ಹಾನಿ ಮಾಡಿರುವುದರಿಂದಲೇ ಇಂಥ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಉಕ್ರೇನ್ ಹೇಳಿಕೊಂಡಿದೆ.
