ಯುದ್ಧದಿಂದ ಹಿಂದೆ ಸರಿಯುವಂತೆ ರಷ್ಯಾ ಸೈನಿಕರಿಗೆ ಝೆಲೆನ್ಸ್ಕಿ ಕರೆ
ಕೈವ್, ಮೇ 1- ಸೇನೆಯ ಹಿರಿಯ ಅಕಾರಿಗಳ ಮಾತು ಕೇಳಿ ಯುದ್ಧದಲ್ಲಿ ಭಾಗಿಯಾಗದಂತೆ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ರಷ್ಯಾ ಸೈನಿಕರಿಗೆ ಕರೆ ನೀಡಿದ್ದಾರೆ. ತಮ್ಮ ವೀಡಿಯೊ ಭಾಷಣದಲ್ಲಿ ರಷ್ಯಾದ ಸೈನಿಕರನ್ನು ಉದ್ದೇಶಿಸಿ ಮಾತನಾಡಿರುವ ಝೆಲೆನ್ಸ್ಕಿ, ಮುಂದಿನ ದಿನಗಳಲ್ಲಿ ಮತ್ತಷ್ಟು ಸಾವು ನೋವುಗಳಾಗುತ್ತವೆ.
ಸಾವಿರಾರು ಮಂದಿ ಪ್ರಾಣ ಕಳೆದುಕೊಳ್ಳುತ್ತಾರೆ. ಆರಂಭದಿಂದಲೂ ಸೈನಿಕರ ಸಾವಿಗೆ ತಕ್ಕಂತೆ ಹೊಸ ಸೇನೆಯನ್ನು ಉಕ್ರೇನ್ ಮೇಲಿನ ಯುದ್ಧಕ್ಕಾಗಿ ರಷ್ಯಾ ನಿಯೋಜನೆ ಮಾಡುತ್ತಿದೆ. ಸಾವು ನೋವುಗಳ ಸತ್ಯ ರಷ್ಯಾ ಕಮಾಂಡರ್ಗಳಿಗೆ ಗೋತ್ತಿದೆ. ಆದರೂ ಸುಳ್ಳು ಹೇಳಿ ಯುದ್ಧದಲ್ಲಿ ಭಾಗಿಯಾಗುವಂತೆ ಸೈನಿಕರನ್ನು ಪ್ರಚೋದಿಸಲಾಗುತ್ತಿದೆ.
ಒಂದು ವೇಳೆ ಯುದ್ಧದಲ್ಲಿ ಭಾಗಿಯಾಗಲು ನಿರಾಕರಿಸಿದರೆ ಗಂಭೀರ ಕ್ರಮ ಕೈಗೊಳ್ಳುವ ಎಚ್ಚರಿಕೆಯ ನಡುವೆ ಬೆದರಿಕೆ ಹಾಕಲಾಗುತ್ತಿದೆ ಎಂದರು.
ರಷ್ಯಾದ ಸೈನಿಕರು ಈಗಲೂ ತಮ್ಮ ಪ್ರಾಣ ಉಳಿಸಿಕೊಳ್ಳಬಹುದು. ಉಕ್ರೇನ್ನಲ್ಲಿ ಬಂದು ಹೋರಾಟ ಮಾಡಿ ಪ್ರಾಣ ಕಳೆದುಕೊಳ್ಳುವುದಕ್ಕಿಂತ, ನಿಮ್ಮ ನೆಲದಲ್ಲೇ ಉಳಿದುಕೊಂಡು ಜೀವಂತವಾಗಿರಿ ಎಂದು ಝಲೆನ್ಸ್ಕಿ ರಷ್ಯನ್ ಭಾಷೆಯಲ್ಲಿ ಮನವರಿಕೆ ಮಾಡಿಕೊಡುವ ಪ್ರಯತ್ನ ಮಾಡಿದ್ದಾರೆ.